ಮಂಗಳೂರು,ಡಿ.02 ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯಗಳವರು ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಲು ಅನುಕೂಲವಾಗು ವಂತೆ ಅಭ್ಯರ್ಥಿಗಳ ಎತ್ತರ ಹಾಗೂ ಎದೆಯ ಸುತ್ತಳತೆಯಲ್ಲಿ ಸರಕಾರ ವಿನಾಯಿತಿ ಕಲ್ಪಿಸಿದ್ದು, ಈ ಬಗ್ಗೆ ಬುಡಕಟ್ಟು ಸಮುದಾಯಕ್ಕೆ ಮಾಹಿತಿ ಒದಗಿಸುವಂತೆ ಸಮುದಾಯದ ನಾಯಕರಿಗೆ ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ. ಕರೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಮಾಸಿಕ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಪೊಲೀಸ್ ಇಲಾಖೆ ನೇಮಕಾತಿಗೆ ಸಂಬಂಧಿಸಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯದ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರವನ್ನು 168 ಸೆ.ಮೀ.ನಿಂದ 155 ಸೆ.ಮೀ. ಹಾಗೂ ಎದೆಯ ಸುತ್ತಳತೆಯನ್ನು 86 ಸೆ.ಮೀ.ನಿಂದ 75 ಸೆ.ಮೀ.ಗೆ ಸಡಿಲಗೊಳಿಸಿದೆ. ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೆ.ಮೀ.ನಿಂದ 150 ಸೆ.ಮೀ. ಹಾಗೂ ತೂಕವನ್ನು 50 ಕೆ.ಜಿ.ಯಿಂದ 45 ಕೆ.ಜಿ.ಗೆ ಸಡಿಲಗೊಳಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಬುಡಕಟ್ಟು ಸಮುದಾಯದ ಯುವಕರಿಗೆ ಮಾಹಿತಿ ಒದಗಿಸಿ ಇಲಾಖೆಗೆ ಸೇರ್ಪಡೆಗೊಳ್ಳಲು ಪ್ರೋತ್ಸಾಹಿಸಬೇಕು ಎಂದು ಡಾ.ಶರಣಪ್ಪ ಹೇಳಿದರು.
ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿವೆ.
ಶೀಘ್ರದಲ್ಲೇ ಮತ್ತೆ 700 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು. ದಲಿತ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಕೆಲ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ವೇಳೆ ಪೊಲೀಸರು ಬಿ ರಿಪೋರ್ಟ್ ಹಾಕುವುದರಿಂದ ಆರೋಪಿಗಳಿಗೆ ರಕ್ಷಣೆ ಸಿಗುತ್ತದೆ. ಪೊಲೀಸರು ಸಾಕ್ಷಾಧಾರದೊಂದಿಗೆ ಚಾರ್ಜ್‌ಶೀಟ್ ಸಲ್ಲಿಸಬೇಕೆಂದು ದಲಿತ ನಾಯಕ ಪಿ.ಕೇಶವ ಆಗ್ರಹಿಸಿದರು.
ವಸತಿ ನಿಲಯಗಳಲ್ಲಿ ಅವಧಿ ಮೀರಿದ ವಾಸ್ತವ್ಯಕ್ಕೆ ತಡೆ:
ಸಮಾಜ ಕಲ್ಯಾಣ ಇಲಾಖೆಯಿಂದ ಬಡ ವಿದ್ಯಾರ್ಥಿ ಗಳಾಗಿ ನಡೆಸಲಾಗುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಶಿಕ್ಷಣ ಮುಗಿಸಿದ ಬಳಿಕ ವಿದ್ಯಾರ್ಥಿಗಳ ವಾಸ್ತವ್ಯ ಹಾಗೂ ಪದೇಪದೇ ಭೇಟಿ ನೀಡುವ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ.ಸಂತೋಷ್ ಕುಮಾರ್ ಸ್ಪಷ್ಟ ಪಡಿಸಿದರು.
ಸಭೆಯಲ್ಲಿ ರಘುವೀರ್ ಎಂಬವರು ಮಾತನಾಡುತ್ತಾ, ಕೆಲವೊಂದು ಹಾಸ್ಟೆಲ್‌ಗಳಲ್ಲಿ ತಾವು ಸೀನಿಯರ್ ಎಂದು ಹೇಳಿ ಅವಧಿ ಮುಗಿದ ಬಳಿಕವೂ ಅಭ್ಯರ್ಥಿಗಳು ಉಳಿದುಕೊಳ್ಳುವುದು, ಅಲ್ಲಿ ಊಟೋಪಚಾರ ಸೇವಿಸುವ ಪ್ರಕ್ರಿಯೆ ನಡೆ ಯುತ್ತಿರುವುದಾಗಿ ದೂರಿದಾಗ ಅವರು ಈ ಸ್ಪಷ್ಟನೆ ನೀಡಿದರು.
ಹಾಸ್ಟೆಲ್‌ಗಳಿಗೆ ಭೇಟಿಯ ಸಂದರ್ಭ ಈ ಅಂಶ ತನ್ನ ಗಮನಕ್ಕೆ ಬಂದಿದ್ದು, ಕಟ್ಟುನಿಟ್ಟನ ಹಾಜರಾತಿ ಪ್ರಕ್ರಿಯೆ ಹಾಗೂ ಸ್ಥಳೀಯ ಪೊಲೀಸರ ಸಹಕಾರ ಪಡೆದು ಈ ರೀತಿ ವಸತಿ ನಿಲಯಗಳ ದುರುಪಯೋಗಪಡಿಸುವ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆಯೂ ಸಭೆಯಲ್ಲಿ ದೂರು ವ್ಯಕ್ತವಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.



