ಕನ್ನಡ ವಾರ್ತೆಗಳು

ಭಾರತದ ಆರ್ಥಿಕ ಅಭಿವೃಧ್ಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕೊಡುಗೆ ಅಪಾರ

Pinterest LinkedIn Tumblr

Bank_vadly_photo_1

ಮಂಗಳೂರು,ನ.30 : ಏರು ಗತಿಯಲ್ಲಿ ಸಾಗುತ್ತಿರುವ ಭಾರತದ ಆರ್ಥಿಕತೆಯಿಂದಾಗಿ ಭವಿಷ್ಯದಲ್ಲಿ ಬ್ಯಾಂಕಿಂಗ್ ಹಾಗೂ ಬ್ಯಾಂಕ್ ಸಂಬಂಧಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ನುರಿತ ಮತ್ತು ಪ್ರತಿಭಾನ್ವಿತ ವ್ಯಕ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಲು ತೊಡಗಿ ಕೊಳ್ಳ ಬೇಕೆಂದು ಇಂಡಿಯನ್ ಬ್ಯಾಂಕ್ಸ್ ಅಸ್ಸೋಸಿಯೇಶನ್ ನ ಮುಖ್ಯಸ್ಥರಾದ ಶ್ರೀ ಮೋಹನ್ ಟಂಕಸಾಲೆ ಅಭಿಪ್ರಾಯ ಪಟ್ಟರು. ಅವರು ನಗರದ ಬೊಂದೇಲಿನಲ್ಲಿರುವ ಎಂ.ಎಸ್.ಎನ್.ಎಂ. ಬೆಸೆಂಟ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಜರಗಿದ ಮಣೇಲ್ ಶ್ರೀನಿವಾಸ ನಾಯಕ್ ಸ್ಮಾರಕ ಉಪನ್ಯಾಸ ಮಾಲಿಕೆಯಡಿ “ಭಾರತೀಯ ಬ್ಯಾಂಕುಗಳ ಭವಿಷ್ಯದ ಹಾದಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು” ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು.

Bank_vadly_photo_2

ಅವರು ಮುಂದುವರೆಸಿ ದೇಶದ ಬೆಳವಣಿಗೆಯಲ್ಲಿ ಒಟ್ಟು ಜಿಡಿಪಿಯ ಶೇ 50ಕ್ಕಿಂತಲೂ ಹೆಚ್ಚು ಕೊಡುಗೆ ಬ್ಯಾಂಕಿಂಗ್ ವಲಯದಿಂದ ಬರುತ್ತಿದೆಯಲ್ಲದೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆಯೆಂದರು. ಪ್ರತಿಯೊಬ್ಬರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ವೈಯುಕ್ತಿಕ ಅಭಿವೃದ್ದಿಯ ಜೊತೆ ಭಾರತದ ಆರ್ಥಿಕ ಕ್ಷೇತ್ರಕ್ಕೆ ಹೇಗೆ ಸಹಕಾರಿಯಾಗಬಲ್ಲುದೆಂದು ಉದಾಹರಣೆ ಸಹಿತ ವಿವರಿಸಿದರು. ಇಂದಿನ ದಿನಗಳಲ್ಲಿ ಗಣಕೀಕರಣ ಮತ್ತು ಮಾಹಿತಿ ತಂತ್ರಜ್ಞಾನಗಳಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ಬ್ಯಾಂಕುಗಳ ಕಾರ್ಯ ನಿರ್ವಹಣೆಯಲ್ಲೂ ಗಣನೀಯ ಪ್ರಮಾಣದಲ್ಲಿ ಪರಿವರ್ತನೆಗಳಾಗುತ್ತಿವೆ. ಇದರ ಲಾಭ ನೇರವಾಗಿ ಗ್ರಾಹಕರಿಗೆ ಮತ್ತು ದೇಶಕ್ಕೆ ದೊರಕುತ್ತಿದ್ದು ಜನ ಸಾಮಾನ್ಯರು ಬ್ಯಾಂಕಿಂಗ್ ಕ್ಷೇತ್ರವನ್ನು ಸಕಾರಾತ್ಮಕ ದೃಷ್ಟಿಕೋಣದಲ್ಲಿ ನೋಡುತ್ತಿದ್ದಾರೆ ಎಂದರು.

ಪ್ರಾದ್ಯಾಪಕರಾದ ಶ್ರೀ ಅನಂತ್ ಭಟ್ ಸ್ವಾಗತಿಸಿದರು. ಬೆಸೆಂಟ್ ಮ್ಯಾನೇಜ್ ಮೆಂಟ್ ಕಾಲೇಜಿನ ನಿರ್ದೇಶಕರಾದ ಡಾ. ನಾರಯಣ ಕಾಯರ್ ಕಟ್ಟೆ ಯವರು ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವುಮೆನ್ಸ್ ನ್ಯಾಶನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕುಡ್ಪಿ ಜಗದೀಶ್ ಶೆಣೈ ಯವರು ವಹಿಸಿದ್ದರು. ಉಪಾಧ್ಯಕ್ಷರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲದೆ ಬ್ಯಾಂಕಿಂಗ್ ಕ್ಷೇತ್ರದ ಅನೇಕ ಗಣ್ಯರು ಉಪಸ್ಥಿತರಿದ್ದರು.

Write A Comment