ಕನ್ನಡ ವಾರ್ತೆಗಳು

ಪುತ್ತೂರ್: ರಿಕ್ಷಾ ಪರ್ಮಿಟ್ ಐದು ವರ್ಷ ಸ್ಥಗಿತ

Pinterest LinkedIn Tumblr

autorickshaw_1

ಪುತ್ತೂರು, ನ.27: ಪುತ್ತೂರಿನಲ್ಲಿ ರಿಕ್ಷಾ ಪರವಾನಗಿಯನ್ನು ಐದು ವರ್ಷ ಸ್ಥಗಿತಗೊಳಿಸುವುದು. ಇದು ಅಸಾಧ್ಯವಾದರೆ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಪ್ರತ್ಯೇಕ ಆಟೋ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಗಮನ ಸೆಳೆಯಲಾಗುವುದು ಎಂದು ಸಹಾಯಕ ಆಯುಕ್ತ ಸತೀಶ್ ಕುಮಾರ್ ಹೇಳಿದರು.

ಆಟೋ ರಿಕ್ಷಾಗಳ ಪರವಾನಗಿ ಸ್ಥಗಿತಗೊಳಿಸುವ ವಿಚಾರದಲ್ಲಿ ಗುರುವಾರ ಪುತ್ತೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಹೊಸ ರಿಕ್ಷಾಗಳಿಗೆ ಪರವಾನಗಿ ನಿರ್ಬಂಧಿಸುವಂತೆ ಆಟೋ ಚಾಲಕ, ಮಾಲಕರ ಸಂಘ ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ, ಕಾನೂನಿನಡಿ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಯಲಿದೆ. ಒಂದು ವೇಳೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಅಸಾಧ್ಯವಾದರೆ, ಪರ್ಯಾಯ ವ್ಯವಸ್ಥೆ ಬಗ್ಗೆ ಗಮನ ಹರಿಸಲಾಗುವುದು. ಒಟ್ಟಿನಲ್ಲಿ ಸಭೆ ತೆಗೆದುಕೊಂಡ ನಿರ್ಣಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿ’ಸೋಜಾ ಮಾತನಾಡಿ, ರಿಕ್ಷಾ ಪರವಾನಗಿಯನ್ನು ನಿರ್ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. 2013ರಲ್ಲೂ ಇದೇ ಮನವಿಯನ್ನು ಜಿಲ್ಲಾಧಿಕಾರಿ ಮುಂದೆ ಇಡಲಾಗಿತ್ತು. ಆದರೆ, ಮನವಿಗೆ ಪುರಸ್ಕಾರ ಸಿಗಲಿಲ್ಲ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ ಎಂದರು.

ಪುತ್ತೂರು ನಗರದಲ್ಲೇ ಸುಮಾರು 5 ಸಾವಿರಕ್ಕೂ ಅಧಿಕ ರಿಕ್ಷಾಗಳಿವೆ. ಪಾರ್ಕಿಂಗ್ ಸಮಸ್ಯೆ, ಬಾಡಿಗೆ ಸಮಸ್ಯೆಯಿಂದ ಚಾಲಕರು ಹೈರಾಣಾಗಿದ್ದಾರೆ. ಇನ್ನೊಂದೆಡೆ ವಾಹನ ದಟ್ಟಣೆ, ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ರಿಕ್ಷಾ ಚಾಲಕರ ಆದಾಯ ಕಡಿಮೆಯಾಗುತ್ತಿದೆ. ವಾಹನದ ಸಾಲ ಪಾವತಿ ಸಾಧ್ಯವಾಗುತ್ತಿಲ್ಲ. ಗ್ರಾಮಾಂತರ ಪ್ರದೇಶದ ರಿಕ್ಷಾಗಳು ಪುತ್ತೂರಿನಲ್ಲಿ ಬಾಡಿಗೆ ಮಾಡುತ್ತಿವೆ. ಆದ್ದರಿಂದ ಕನಿಷ್ಠ 5 ವರ್ಷದವರೆಗೆ ಪರವಾನಗಿ ಸ್ಥಗಿತ ಮಾಡಬೇಕು. ಒಂದು ವೇಳೆ ಇದು ಸಾಧ್ಯವಿಲ್ಲವಾದರೆ ತಾಲೂಕು ಪರವಾನಗಿ ಬದಲು ಜಿಲ್ಲಾ ಪರವಾನಗಿ ಮಾತ್ರ ನೀಡಿ ಎಂಬ ಒತ್ತಾಯ ಸಭೆಯಲ್ಲಿ ವ್ಯಕ್ತವಾಯಿತು.

ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಂಜನ್ ಬಿ., ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಲೊಕೇಶ್ ಹೆಗ್ಡೆ, ಸಿಐಟಿಯು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮೇದಪ್ಪ, ವರ್ತಕ ಸಂಘದ ಜಯಕುಮಾರ್ ರೈ, ಕನ್ನಡ ಸೇನೆಯ ಚಂದ್ರಶೇಖರ ರೈ, ದಲಿತ ಸೇವಾ ಸಮಿತಿಯ ಗಿರೀಶ್ ನಾಯ್ಕ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

Write A Comment