ಕನ್ನಡ ವಾರ್ತೆಗಳು

ಕೆಎಸ್ಆರ್‍ ಟಿಸಿ ಬಸ್-ಕಾರುಗಳ ಮಧ್ಯೆ ಸರಣಿ ಅಪಘಾತ: ಓಮ್ನಿ ಚಾಲಕ ಮೃತ್ಯು, ಮೂವರಿಗೆ ಗಂಭೀರ ಗಾಯ

Pinterest LinkedIn Tumblr

puttur_acdent_photo_1

ಪುತ್ತೂರು,ನ.27: ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಸಮೀಪ ಓಮ್ನಿ, ಕೆಎಸ್‌ಆರ್‌ಟಿಸಿ ಹಾಗೂ ಸ್ವಿಫ್ಟ್ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಓಮ್ನಿ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟದ್ದು, ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ನಡೆದಿದೆ.

ಮೃತಪಟ್ಟವರನ್ನು ಕೊಲ್ಯ ಗ್ರಾಮದ ನಿಡೇಲು ನಿವಾಸಿ, ಕೆಎಸ್‌ಆರ್‌ಟಿಸಿ ಬಸ್ ನ ನಿವೃತ್ತ ಚಾಲಕ ಸುಂದರ ಗೌಡ(55) ಎಂದು ಗುರುತಿಸಲಾಗಿದೆ.

puttur_acdent_photo_4 puttur_acdent_photo_2 puttur_acdent_photo_3

ಘಟನೆಯ ವಿವರ :
ಸುಂದರ ಗೌಡರವರು ತನ್ನ ಮೂಲ ಮನೆಯಾಗಿರುವ ಚಾರ್ವಾಕ ಎಂಬಲ್ಲಿ ಮನೆ ನಿರ್ಮಿಸಿದ್ದು ಇದರ ಗೃಹಪ್ರವೇಶ ಕಾರ‍್ಯಕ್ರಮ ಇಂದು ನಡೆಯಲಿತ್ತು. ಗೃಹ ಪ್ರವೇಶ ಕಾರ‍್ಯಕ್ರಮದ ಸಿದ್ಧತೆಯಲ್ಲಿದ್ದ ಅವರು ಸಾಮಾಗ್ರಿ ಖರೀದಿಗೆ ಪುತ್ತೂರಿಗೆ ಬಂದಿದ್ದರು. ಸಾಮಾಗ್ರಿ ಖರೀದಿಸಿಕೊಂಡು ತನ್ನ ಮಾರುತಿ ಓಮ್ನಿ(ಕೆಎ 01 ಪಿ 5339)ಯಲ್ಲಿ ಅರುವದ ಮನೆಗೆ ತೆರಳುತ್ತಿದ್ದ ವೇಳೆ ಪುರುಷರಕಟ್ಟೆ ದಾಬೋಳಿ ಭಜನಾ ಮಂದಿರದ ಸಮೀಪ ಇಕ್ಕಟ್ಟು ರಸ್ತೆಯಲ್ಲಿ ಕಾಣಿಯೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್(ಕೆಎ 19 ಎಫ್ 2751)ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಓಮ್ನಿ ತುಸು ಹಿಂದಕ್ಕೆ ಚಲಿಸಿದ್ದು, ಇದೇ ವೇಳೆ ಹಿಂದಿನಿಂದ ಬರುತ್ತಿದ್ದ(ಪುತ್ತೂರಿನಿಂದ ಕಾಣಿಯೂರುಗೆ) ಸ್ವಿಫ್ಟ್ ಕಾರು(ಕೆಎ 02 ಎಂಡಿ 1995)ಸಹ ಓಮ್ನಿಗೆ ಡಿಕ್ಕಿಯಾಗಿದೆ.

ಘಟನೆಯಿಂದ ಒಮ್ನಿ ಸಂಪೂರ್ಣ ಜಖಂಗೊಂಡಿತ್ತು. ಚಾಲಕ ಸುಂದರ ಗೌಡರು ಅದರೊಳಗೆ ಸಿಲುಕಿಕೊಂಡಿದ್ದು ಅವರ ಕಾಲು ಮುರಿತಕ್ಕೊಳಗಾಗಿದ್ದು ಗಂಭೀರ ಗಾಯಗೊಂಡಿದ್ದರು. ಓಮ್ನಿಯೊಳಗೆ ಸಿಲುಕಿಕೊಂಡಿದ್ದ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಹೊರ ತೆಗೆದು 108 ಆಂಬುಲೆನ್ಸ್ ಮೂಲಕ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ತಯಾರಿ ನಡೆಸುತ್ತಿರುವಾಗಲೇ ಅವರು ಮೃತಪಟ್ಟರೆಂದು ತಿಳಿದುಬಂದಿದೆ.

ಮೂವರಿಗೆ ಗಾಯ: ಸರಣಿ ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಕಾಣಿಯೂರು ಮಾದೋಡಿ ನಿವಾಸಿ ಜಗನ್ನಾಥ ರೈ(76), ಅವರ ಪತ್ನಿ ಸುಶೀಲ(64) ಮತ್ತು ದಿ.ಮಂಜುನಾಥ ಶೆಟ್ಟಿಯವರ ಪತ್ನಿ ರತಿ ಎಂ.ಶೆಟ್ಟಿ(62)ಎಂಬವರು ಗಾಯಗೊಂಡಿದ್ದು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಐವರ್ನಾಡಿನ ಶರತ್‌ರವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಎಸ್‌ಐ ನಾಗರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಿಂದಾಗಿ ಕಾಣಿಯೂರು-ಪುತ್ತೂರು ರಸ್ತೆ ಸಂಚಾರ ಸುಮಾರು 1 ತಾಸು ಸಂಪೂರ್ಣ ಸ್ಥಗಿತಗೊಂಡಿತ್ತು. ಸಂಚಾರ ಠಾಣಾ ಸಿಬ್ಬಂದಿಗಳು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

ಇಂದು ಗೃಹಪ್ರವೇಶ ಮನೆಯಲ್ಲಿ ಇದೀಗ ಸ್ಮಶಾನ ಮೌನ:
ಮೃತ ಸುಂದರ ಗೌಡರು ಅವಿವಾಹಿತರಾಗಿದ್ದು ಕೊಯಿಲ ಗ್ರಾಮದ ನಿಡೇಲ್‌ನಲ್ಲಿರುವ ಸಹೋದರನ ಮಕ್ಕಳ ಜೊತೆ ವಾಸವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕೆಎಸ್‌ಆರ್‌ಟಿಸಿ ಚಾಲಕ ವೃತ್ತಿಯಿಂದ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ತನ್ನ ಮೂಲ ಮನೆ ಚಾರ್ವಾಕ ಅರುವದಲ್ಲಿರುವ ಜಾಗದಲ್ಲಿ ಸುಂದರ ಗೌಡರವರು ಮನೆ ನಿರ್ಮಿಸಿದ್ದು ಇದರ ಗೃಹ ಪ್ರವೇಶ ನ.27ರಂದು ನಡೆಯಬೇಕಿತ್ತು.

ಇದರ ಸಿದ್ಧತೆಯಲ್ಲಿದ್ದ ಸುಂದರ ಗೌಡರವರು ನ.26ರಂದು ಸಂಜೆ ಪುತ್ತೂರಿಗೆ ಬಂದು ಗೃಹಪ್ರವೇಶಕ್ಕೆ ಬೇಕಾದ ಅಗತ್ಯ ಸಾಮಾಗ್ರಿ ಖರೀದಿಸಿಕೊಂಡು ಚಾರ್ವಾಕಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸುಂದರ ಗೌಡರು ಎಲ್ಲರೊಂದಿಗೆ ಅನೋನ್ಯತೆಯಿಂದ ಬೆರೆಯುತ್ತಿದ್ದು ರಾಮಕುಂಜ, ಕೊಯಿಲಗಳಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಗೃಹಪ್ರವೇಶದ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ.

Write A Comment