ಕನ್ನಡ ವಾರ್ತೆಗಳು

ಪ್ರಚೋದನಾಕಾರಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಕಡಿವಾಣ : ಜಿಲ್ಲಾಧಿಕಾರಿ

Pinterest LinkedIn Tumblr

Dc_meet_photo_1

ಮಂಗಳೂರು, ನ.26: ಪ್ರಚೋದನಾಕಾರಿ ಹೇಳಿಕೆ ಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದನ್ನು ಕಡಿವಾಣ ಹಾಕಲು ಮುಂದಾಗಿರುವ ದ.ಕ. ಜಿಲ್ಲಾಡಳಿತ, ಯಾವುದೇ ರೀತಿಯ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವ ಮೊದಲು ಸ್ಥಳೀಯ ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯಾಡಳಿತದ ಮುದ್ರೆಯ ಸಹಿತ ಅನುಮತಿಯನ್ನು ಕಡಾಯ ಗೊಳಿಸಲು ನಿರ್ಧರಿಸಿದೆ. ಈ ಕ್ರಮವನ್ನು ಒಂದು ವಾರದಲ್ಲಿ ಸ್ಥಳೀಯಾ ಡಳಿತಗಳ ಮೂಲಕ ಜಾರಿಗೊಳಿಸುವುದಾಗಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತ್ತಿದ್ದರು. ಪ್ರಚೋದನಾಕಾರಿ ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆಯಿಂದ ಸಮಾಜದಲ್ಲಿ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಆತಂಕಕ್ಕೆ ಈ ಪ್ರತಿ ಕ್ರಿಯೆ ನೀಡಿರುವ ಅವರು, ಪ್ರತಿ ಗ್ರಾಮ ಪಂಚಾ ಯತ್‌ಗಳಲ್ಲೂ ಗ್ರಾಮೋತ್ಸವದ ಮೂಲಕ ಸ್ಥಳೀಯ ಸಾಂಸ್ಕೃತಿಕ ಕ್ರೀಡೆಗಳ ಬಗ್ಗೆ ಯುವಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಅಹಿತಕರ ಘಟನೆಗಳಿಗೆ ಸಂಬಂಧಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಡೆಸುವ ಕ್ರಮ ಕ್ಕಿಂತಲೂ ಮುಖ್ಯವಾಗಿ ಜನಸಾಮಾನ್ಯರ ಅಂತರಂಗ ದಲ್ಲಿ ಬದಲಾವಣೆ ಆಗಬೇಕು ಎಂದು ಜಿಲ್ಲಾಧಿಕಾರಿ ನುಡಿದರು.

ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಈಗಾಗಲೇ ಸೂಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಪೊಲೀಸ್ ಇಲಾಖೆಗೆ 70 ಲಕ್ಷ ರೂ.ನ್ನು ಜಿಲ್ಲಾಡಳಿತ ದಿಂದ ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.

Dc_meet_photo_3 Dc_meet_photo_4

ಗ್ರಾಮ- ವಾರ್ಡ್‌ಮಟ್ಟದಲ್ಲಿ ಶಾಂತಿ ಸಭೆ

ಸಭೆಯಲ್ಲಿ ವ್ಯಕ್ತವಾದ ಸಲಹೆ ಸೂಚನೆಯ ಮೇರೆಗೆ ಎಲ್ಲಾ ಗ್ರಾಪಂ ಹಾಗೂ ವಾರ್ಡ್ ಮಟ್ಟ ದಲ್ಲಿ ಶಾಂತಿ ಸಭೆಗಳನ್ನು ನಡೆಸಲು ಕ್ರಮ ಕೈಗೊಳ್ಳ ಲಾಗುವುದು. ಕ್ರೀಡಾಕೂಟ, ಸ್ಪರ್ಧಾ ಕಾರ್ಯ ಕ್ರಮಗಳಿಗೂ ಕ್ರಮ ಕೈಗೊಳ್ಳಲಾಗುವುದು.

ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಪಂ ಸಿಇಒ ಶ್ರೀವಿದ್ಯಾ ಹೇಳಿದರು. ಕೆಸಿಸಿಐ ಅಧ್ಯಕ್ಷ ರಾಮ್ ಮೋಹನ್ ಪೈ ಮಾರೂರು, ಬದ್ರಿಯಾ ಕಾಲೇಜು ಪ್ರಾಂಶುಪಾಲ ಡಾ.ಇಸ್ಮಾಯೀಲ್, ಸಿಟಿಝನ್ ಫೋರಂನ ವಿದ್ಯಾ ದಿನಕರ್, ದಲಿತ ಮುಖಂಡ ಜಿನ್ನಪ್ಪ ಬಂಗೇರ, ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್.ಹಂಝ, ಮುಂಡಾಲ ಮಹಾಸಭೆಯ ಮುಖಂಡ ಟಿ.ಹೊನ್ನಯ್ಯ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಉಳ್ಳಾಲ ನಿವಾಸಿ ಮುಹಿಯುದ್ದೀನ್, ಜಿಪಂ ಮಾಜಿ ಸದಸ್ಯ ಅಬ್ಬಾಸ್, ಮಾನವ ಹಕ್ಕುಗಳ ಫೆಡರೇಶನ್ ಮುಖ್ಯಸ್ಥ ಬಾಲಕೃಷ್ಣ ರೈ, ಸಿಪಿಐ ಮುಖಂಡ ಚಂಗಪ್ಪ, ನಾಗರಿಕರ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್, ಪತ್ರಕರ್ತರ ಪ್ರತಿನಿಧಿ ಹೈಮದ್ ಹುಸೈನ್, ಹೋಪ್ ಫೌಂಡೇಶನ್‌ನ ಸೈಫ್ ಸುಲ್ತಾನ್, ಅಲೆಕ್ಸಾಂಡರ್ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.

ವ್ಯಕ್ತವಾದ ಸೂಚನೆ-ಸಲಹೆಗಳು…

ಗ್ರಾಪಂ ಮಟ್ಟದಲ್ಲಿ ಸ್ಥಳೀಯ ಯುವಕ, ಯುವತಿಯರನ್ನು ಒಗ್ಗೂಡಿಸಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾಂತಿ ಸಭೆ ನಡೆಸಬೇಕು.
-ಆಶಾ ತಿಮ್ಮಪ್ಪ ಗೌಡ, ಜಿಪಂ ಅಧ್ಯಕ್ಷೆ
ವಾಟ್ಸಾಪ್, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
-ಹಮೀದ್ ಕಂದಕ್, ಮುಸ್ಲಿಮ್ ಪರಿಷತ್ ಅಧ್ಯಕ್ಷ
ಪ್ರಚೋದನಾಕಾರಿ ಹೇಳಿಕೆ, ಭಾಷಣ ಮಾಡುವವರ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಕಾರ್ಯ ಮುಂದುವರಿಯಲಿ.
-ಅಲಿ ಹಸನ್, ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ
ಸಾರ್ವಜನಿಕರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಜೊತೆಗೆ, ಜಿಲ್ಲೆಯಲ್ಲಿ ಮುಂದೆ 144 ಸೆಕ್ಷನ್ ಇಲ್ಲದ ವಾತಾವರಣ ಸೃಷ್ಟಿಯಾಗಬೇಕು.
-ವಸಂತ ಆಚಾರಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ
ಪೊಲೀಸರು ಮಾರುವೇಷದಲ್ಲಿ ಕಾರ್ಯಾ ಚರಣೆ ನಡೆಸಿ ಎಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು.
-ರವೀಂದ್ರರಾಜ್, ಉಳ್ಳಾಲ ನಿವಾಸಿ

ಆರೋಪಿಗಳನ್ನು ಆಧಾರವಿಲ್ಲದೆ ನಿರಪರಾಧಿಗಳೆಂದು ಬಿಂಬಿಸದಿರಿ: ಎಸ್ಪಿ

ಘಟನೆ ನಡೆಯುವ ಸಂದರ್ಭ ಮಫ್ತಿಯಲ್ಲಿರುವ ಪೊಲೀಸರು ವೀಡಿಯೊ ಮಾಡಿರುತ್ತಾರೆ. ಒಂದು ಗುಂಪಿನಲ್ಲಿರುವಾಗ ಅಹಿತಕರ ಘಟನೆ ಸಂಭವಿಸಿದರೆ ಅಲ್ಲಿರುವವರು ತಪ್ಪಿತಸ್ಥರಾಗುತ್ತಾರೆ. ವೀಡಿಯೊ ಆಧಾರದಲ್ಲಿಯೇ ತಪ್ಪಿತಸ್ಥರೆಂದು ಕಂಡು ಬರುವವರ ಪಟ್ಟಿ ಮಾಡಿ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರನ್ನು ನಿರಪರಾಧಿಗಳು ಎಂದು ಹೇಳಿದರೆ, ತಪ್ಪಿತಸ್ಥರನ್ನು ರಕ್ಷಣೆ ಮಾಡಿದ ಹಾಗಾಗುತ್ತದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಹೇಳಿದರು.

ಅಹಿತಕರ ಘಟನೆಗಳ ಸಂದರ್ಭ ನಿರಪರಾಧಿಗಳನ್ನು ಬಂಧಿಸಲಾಗುತ್ತದೆ ಎಂಬ ಸಾರ್ವಜನಿಕರೊಬ್ಬರ ಹೇಳಿಕೆ ಮೇರೆಗೆ ಈ ಸ್ಪಷ್ಟನೆ ನೀಡಿದ ಎಸ್ಪಿ, ಯಾವುದೇ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎಂಬುದನ್ನು ಗಮನದಲ್ಲಿರಿಸಿಯೇ ಪೊಲೀಸ್ ಇಲಾಖೆ ಕ್ರಮ ವಹಿಸುತ್ತದೆ. ಅದಕ್ಕಾಗಿ ಬಂಧನ ವಿಳಂಬವಾದರೂ ನಿರಪರಾಧಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಘಟನೆ ಆದ ಸಂದರ್ಭ ಯಾರೂ ಸಾಕ್ಷಾಧಾರ ನೀಡಲು ಮುಂದೆ ಬರುವುದಿಲ್ಲ. ಅಹಿತಕರ ಘಟನೆಯ ಮುನ್ಸೂಚನೆಯ ಬಗ್ಗೆಯೂ ಮಾಹಿತಿ ನೀಡುವುದಿಲ್ಲ. ಆದರೆ ಪೊಲೀಸರು ಎಲ್ಲ ರೀತಿಯ ವಿಚಾರಣೆ, ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧಿಸಿದಾಗ ಆಧಾರರಹಿತವಾಗಿ ನಿರಪರಾಧಿಗಳು ಎಂದು ಹೇಳುವುದು ಸರಿಯಲ್ಲ. ಪೊಲೀಸರು ಬಂಧಿಸಿದವರು ನಿರಪರಾಧಿಗಳಾಗಿದ್ದಲ್ಲಿ ನೈಜ ಅಪರಾಧಿಗಳ ಬಗ್ಗೆ ಮಾಹಿತಿ, ಸಾಕ್ಷವಿದ್ದಲ್ಲಿ ಪೊಲೀಸರಿಗೆ ನೀಡಿ ಎಂದು ಹೇಳಿದರು.

ಬಂದ್ ಕರೆ ನೀಡಿದವರೇ ಹೊಣೆ: 

ಬಂದ್‌ಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಬಂದ್‌ಗೆ ಕರೆ ನೀಡುವ ವರನ್ನೇ ಹೊಣೆಗಾರರನ್ನಾಗಿಸುವ ಕುರಿತು ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಶೀಘ್ರದಲ್ಲೇ ಉನ್ನತ ಮಟ್ಟದ ಚರ್ಚೆ ನಡೆಸಲಾಗುವುದು. -ಎ.ಬಿ.ಇಬ್ರಾಹೀಂ, ದ.ಕ. ಜಿಲ್ಲಾಧಿಕಾರಿ

ಸುಳ್ಳು ಸುದ್ದಿಗಳನ್ನು ಖಾತ್ರಿಪಡಿಸದೆ ಪ್ರತಿಕ್ರಿಯಿಸದಿರಿ: ಡಿಸಿಪಿ

ಅಹಿತಕರ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮಫ್ತಿಯಲ್ಲಿ ಪೊಲೀಸರ ನೇಮಕ ಮಾಡಿಯೂ ಗಸ್ತು ನಡೆಸಲಾಗುತ್ತಿದೆ. ಪೊಲೀಸರಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದ್ದು, ಸುಳ್ಳು ಸುದ್ದಿಗಳು ಗಮನಕ್ಕೆ ಬಂದಾಗ ಖಾತ್ರಿಪಡಿಸದೆ ಆ ಬಗ್ಗೆ ಪ್ರತಿಕ್ರಿಯಿಸಬಾರದು. ಅಂತಹ ಸಂದರ್ಭಗಳಲ್ಲಿ ನೇರವಾಗಿ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದಲ್ಲಿ ಅನುಮಾನ, ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಡಿಸಿಪಿ ಶಾಂತರಾಜು ಹೇಳಿದರು.

ವರದಿ ಕೃಪೆ : ವಾಭಾ

Write A Comment