ಕನ್ನಡ ವಾರ್ತೆಗಳು

ಪಜೀರು ಮರ್ಸಿಯಮ್ಮ ಚರ್ಚ್‌ನ ಪ್ರಸಾದ ಪೆಟ್ಟಿಗೆ ಸಹಿತ ಕಳವಾದ ಸ್ವತ್ತು ಪತ್ತೆ.

Pinterest LinkedIn Tumblr

pajir_curch_photo

ಕೊಣಾಜೆ, ನ.25: ಪಜೀರಿನ ಮೆರ್ಸಿಯಮ್ಮ ನವರ ಚರ್ಚ್‌ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವರ ಪರಮ ಪ್ರಸಾದ ಪೂಜಾ ಸಾಮಗ್ರಿ, ಲ್ಯಾಪ್‌ ಟಾಪ್‌ ಕದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಳವಾದ ಸ್ವತ್ತನ್ನು ಸಂಜೆಯೇ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸುಮಾರು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಕಳೆದ ವರ್ಷ ಡಿ.15ರಂದು ಉದ್ಘಾಟನೆಗೊಂಡ ಈ ಚರ್ಚ್‌ನಲ್ಲಿ ಕಳ್ಳತನ ನಡೆದಿದೆ.
ಪೂರ್ವ ದಿಕ್ಕಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಪರಮ ಪ್ರಸಾದ ಇಡುವ ಪೆಟ್ಟಿಗೆಯನ್ನು ಕದ್ದು, ಚರ್ಚ್ ಹೊರಗಡೆ ಹಾಗೂ ಒಳಗಡೆ ಇದ್ದ ಪರಮ ಪ್ರಸಾದ ವಿತರಿಸುವ 9 ಪಾತ್ರೆಗಳು, ಪೂಜೆಗೆ ಪ್ರಯೋಗ ಮಾಡುವ ಎರಡು ದೊಡ್ಡ ಹಾಗೂ ಎರಡು ಸಣ್ಣ ಪಾತ್ರೆ, ಲ್ಯಾಪ್ ಟ್ಯಾಪ್ ಕದ್ದು ಪರಾರಿಯಾಗಿದ್ದಾರೆ. ಕಳ ವಾದ ಸ್ವತ್ತಿನ ಒಟ್ಟು ಮೌಲ್ಯ ಸುಮಾರು 78 ಸಾವಿರ ಎಂದು ಅಂದಾಜು ಮಾಡಲಾಗಿದೆ.

ಚರ್ಚ್‌ನಲ್ಲಿ ನಗದು ಇರಲಿಲ್ಲ. ದೇವರ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ಚರ್ಚ್‌ನ ಫಾ. ವಲೇರಿಯನ್ ಪಿಂಟೋ ತಿಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಪ್ರಾಂತ್ಯ ಧರ್ಮಾಧ್ಯಕ್ಷ ರೆ.ಫಾ. ಅಲೋಶಿಯಸ್ ಪಾವ್ಲ್ ಡಿಸೋಜ ಭೇಟಿ ನೀಡಿದ್ದರು. ಎಸಿಪಿ ಕಲ್ಯಾಣ್ ಪಿ. ಶೆಟ್ಟಿ ಹಾಗೂ ಕೊಣಾಜೆ ಠಾಣೆಯ ಎಸ್‍ಐ ಸುಧಾಕರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಿಕ್ಟರ್ ಮೊಂತೆರೋ ಚರ್ಚ್ ಉಪಾಧ್ಯಕ್ಷರಾದ ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚರ್ಚ್‌ನ ಸಿ.ಸಿ. ಕ್ಯಾಮೆರಾ ಪರಿ ಶೀಲಿಸಿದಾಗ ಮೂರು ಮಂದಿ ಈ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ. ಒಬ್ಬಾತ ಸರಿಯಾಗಿ ಮುಖವಾಡ ಧರಿಸದಿದ್ದರೂ ಮುಖದ ಪರಿಚಯ ಸರಿಯಾಗಿ ಗೋಚರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಶ್ವಾನದಳವು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತು.

ಸ್ವತ್ತು ವಶಕ್ಕೆ: ಪರಮಪ್ರಸಾದ ಪೆಟ್ಟಿಗೆ, ಲ್ಯಾಪ್‌ಟಾಪ್‌ ಅನ್ನು ಹರೇಕಳದ ಕಡೆಂಜ ತೋಟ ಎಂಬಲ್ಲಿ ಪಾಳುಬಿದ್ದ ಮನೆಯಲ್ಲಿ ಎಸ್.ಐ.ಸುಧಾಕರ್ ನೇತೃತ್ವದ ಕೊಣಾಜೆ ಪೊಲೀಸರ ತಂಡ ಮಂಗಳವಾರ ಸಂಜೆ ಪತ್ತೆ ಹಚ್ಚಿದೆ. ಪರಮಪ್ರಸಾದ ಪೆಟ್ಟಿಗೆ ಯನ್ನು ಪೊಲೀಸರು ಘಟನೆ ನಡೆದು ಎಂಟು ಗಂಟೆಯೊಳಗೆ ಪತ್ತೆ ಹಚ್ಚಿದ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ಅಕ್ರಮ ಚಟುವಟಿಕೆ: ಹರೇಕಳ ಗ್ರಾಮದ ಕಡೆಂಜತೋಟ ಎಂಬಲ್ಲಿಯ ಹಮೀದ್ ಹಾಗೂ ಅಬ್ಬು ಎಂಬವರಿಗೆ ಸೇರಿದ ಎರಡು ಪಾಳು ಬಿದ್ದ ಮನೆಗಳಿದ್ದು ಅಲ್ಲಿ ಗಾಂಜಾ ಸಹಿತ ಹಲವು ಅಕ್ರಮ ಚಟು ವಟಿಕೆ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಮಂಗಳವಾರ ಸಂಜೆ ದಾಳಿ ನಡೆಸಿದಾಗ ಕಳವಾದ ಸ್ವತ್ತುಗಳು ಪತ್ತೆಯಾದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫಲಿಸಿದ ಭಕ್ತರ ಪ್ರಾರ್ಥನೆ: ಮಂಗಳ ವಾರ ಸಂಜೆ ಚರ್ಚ್ ಶುದ್ದೀಕರಣ ಹಾಗೂ ಪ್ರಾರ್ಥನೆಗಾಗಿ ಸಮಯ ನಿಗದಿ ಪಡಿಸಲಾಗಿತ್ತು. ಚರ್ಚ್‌ನಲ್ಲಿದ್ದ ಎಲ್ಲರು ಕಳವಾದ ಪರಮಪ್ರಸಾದ ಸಿಗುವಂತೆ ದೇವರಲ್ಲಿ ಪ್ರಾರ್ಥಿಸಿ ಮೊರೆ ಇಡುವ ಸಂದರ್ಭದಲ್ಲೇ ಪೊಲೀಸರು ಕಳವಾಗಿದ್ದ ಸ್ವತ್ತುಗಳನ್ನು ತಂದುಕೊಟ್ಟದ್ದು ಭಕ್ತರ ಅಪಾರ ಸಂತಸಕ್ಕೆ ಕಾರಣವಾಯಿತು.

ಚಿನ್ನವೆಂದು ಭಾವಿಸಿ ಕದ್ದರು!
ಚರ್ಚ್‌ ಒಳನುಗ್ಗಿದ್ದ ಕಳ್ಳರು ಪವಿತ್ರವಾದ ಪರಮ ಪ್ರಸಾದ ಇಡುವ ತಾಮ್ರದ ಪೆಟ್ಟಿಗೆಯನ್ನು ಕದ್ದಿದ್ದಾರೆ. ಈ ಪೆಟ್ಟಿಗೆ ಚಿನ್ನದ ರೀತಿಯಲ್ಲಿಯೇ ಹೊಳೆಯುತ್ತಿತ್ತು. ಚಿನ್ನ ಎಂದು ಭಾವಿಸಿದ ಕದ್ದಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪರಮ ಪ್ರಸಾದ ಪೆಟ್ಟಿಗೆ ಬಳಿ ಇದ್ದ ಬೆಳ್ಳಿಯ ಸಾಮಗ್ರಿಗಳನ್ನು ಹಾಗೆಯೇ ಬಿಡಲಾಗಿದೆ. ಕಪಾಟಿಗೆ ಬೀಗ ಹಾಕದ ಕಾರಣ ಕಳ್ಳರು ಸುಲಭವಾಗಿ ಅದರ ಬಾಗಿಲು ತೆಗೆದು ಸ್ವತ್ತುಗಳನ್ನು ದೋಚಿದ್ದಾರೆ.

Write A Comment