ಕನ್ನಡ ವಾರ್ತೆಗಳು

ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಸಮಾರೋಪ – ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ

Pinterest LinkedIn Tumblr

yaksh_gana_talamadale_1

ಮಂಗಳೂರು,ನ.24 : ‘ಯಕ್ಷಗಾನಕ್ಕೆ ಒಂದು ದೀರ್ಘ ಇತಿಹಾಸ ಇದೆ. ಅನೇಕ ಹಿರಿಯ ಅನುಭವಿ ಕಲಾವಿದರ ಕೊಡುಗೆ ಅದನ್ನು ಬೆಳೆಸಿದೆ. ಆದರೆ ಈ ರಂಗದಲ್ಲಿ ಅಂದಿನಿಂದ ಇಂದಿನವರೆಗೆ ದುಡಿದ ಅದೆಷ್ಟೋ ಪ್ರತಿಭಾನ್ವಿತ ಕಲಾವಿದರ ಮಾಹಿತಿ ಲಭ್ಯವಿಲ್ಲ. ಆದ್ದರಿಂದ ಇತರ ಕಲಾಪ್ರಕಾರಗಳಲ್ಲಿರುವಂತೆ ಯಕ್ಷಗಾನ ಕಲಾ ವಿದರ ಬಗ್ಗೆಯೂ ಸಮಗ್ರ ವಿವರಗಳುಳ್ಳ ವಿಶ್ವಕೋಶ ರಚನೆಯಾಗಬೇಕು. ಈ ಬಗ್ಗೆ ಕ್ಷೇತ್ರ ಕಾರ್ಯ ಮತ್ತು ದಾಖಲೀಕರಣದ ಕೆಲಸಗಳಿಗೆ ವಿಶ್ವವಿದ್ಯಾಲಯಗಳು ಮುಂದೆ ಬರಬೇಕು’ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ ಹೇಳಿದ್ದಾರೆ.

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜು ‘ ರವೀಂದ್ರ ಕಲಾಭವನ’ ದಲ್ಲಿ ಏರ್ಪಡಿಸಿದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಯಕ್ಷಗಾನ ತಾಳ ಮದ್ದಳೆ ಸಪ್ತಾಹ – 2015″ ಸಮಾರೋಪ ಸಮಾರಂಭದಲ್ಲಿ ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

yaksh_gana_talamadale_2

‘ಕೆಲವು ವ್ಯಕ್ತಿಗಳಿಂದಾಗಿ ಊರಿಗೆ ಹೆಸರು ಬರುವುದು ಸಹಜ. ಅಳಿಕೆ, ಬೋಳಾರ , ಅಗರಿ, ಶೇಣಿ, ಪುಳಿಂಚ ಇತ್ಯಾದಿ ಸ್ಥಳ ನಾಮಗಳು ಪ್ರಸಿದ್ಧಿ ಹೊಂದಿದಂತೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ, ಹಾಸ್ಯಗಾರ ಬಾಳಪ್ಪ ಶೆಟ್ಟರಿಂದಾಗಿ ಯಕ್ಷಗಾನ ವಲಯದಲ್ಲಿ ಗುರುತಿಸಿ ಕೊಂಡಂತಾಗಿದೆ. ಸಮಾಜದಲ್ಲಿ ಮೌಲ್ಯಗಳ ಸಮನ್ವಯತೆಗೆ ಯಕ್ಷಗಾನದಂತಹ ಕಲೆ ಅಪೂರ್ವಕೊಡುಗೆ ನೀಡಿದೆ’ ಎಂದು ಅವರು ವಿಶ್ಲೇಷಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಪೇರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ದೀಪ ಬೆಳಗಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೇಡ್ ಶುಭಾಶಂಸನೆ ಗೈದರು. ಅವರು ಮಾತನಾಡಿ ‘ನವೀಕೃತ ಪುರಭವನವನ್ನು ಕಲಾ ಕಾರ್ಯಕ್ರಮಗಳಿಗೆ ಕಡಿಮೆ ದರದಲ್ಲಿ ಒದಗಿಸಲಾಗುವುದು’ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಮಾರೋಪ ಭಾಷಣ ಮಾಡಿದರು.

ನುಳಿಯಾಲು ಸಂಜೀವ ರೈ ಪ್ರಶಸ್ತಿ :
ಯಕ್ಷಗಾನದ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ದಶಕದ ಸ್ಮರಣೆಯ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ಹವ್ಯಾಸಿ ವೇಷಧಾರಿ ನುಳಿಯಾಲು ಸಂಜೀವ ರೈ ಅವರಿಗೆ ಶಾಲು, ಫಲ ತಟ್ಟೆ, ಸನ್ಮಾನ ಫಲಕ ಮತ್ತು ನಿಧಿಯೊಂದಿಗೆ ೨೦೧೪-೧೫ ನೇ ಸಾಲಿನ ‘ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಹಿರಿಯ ಅರ್ಥಧಾರಿ ಮತ್ತು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಬಾಳಪ್ಪ ಶೆಟ್ಟಿ ಸಂಸ್ಮರಣೆ ಮಾಡಿ ಪ್ರಶಸ್ತಿ ಮಾನ್ಯರನ್ನು ಅಭಿನಂದಿಸಿದರು. ಶಿಕ್ಷಕಿ ಶ್ಯಾಮಲಾ ಪದ್ಮನಾಭ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ದಿ| ಬಾಳಪ್ಪ ಶೆಟ್ಟರ ಧರ್ಮಪತ್ನಿ, ಎಂಭತ್ನಾಲ್ಕರ ಹರೆಯದ ಸರ್ವಾಣಿ ಬಿ. ಶೆಟ್ಟರನ್ನು ಯಕ್ಷಾಂಗಣದ ವತಿಯಿಂದ ಸೀರೆ, ಸ್ಮರಣಿಕೆ ನೀಡಿ ಗೌರವಿಸಲಾಯ್ತು. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಸಂಚಾಲಕ ಬೆಟ್ಟಂಪಾಡಿ ಸುಂದರ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

ರಾಧಾ ಮೆಡಿಕಲ್ಸ್ ಮಾಲಕ ಹಾಗೂ ‘ರಂಗಸ್ಥಳ’ ಉಡುಪಿ ಗೌರವಾಧ್ಯಕ್ಷ ಮನೋಹರ ಶೆಟ್ಟಿ, ಜೈನ್ ಟ್ರಾವೆಲ್ಸ್‌ನ ರತ್ನಾಕರ ಜೈನ್, ಯಮುನಾ ಕನ್‌ಸ್ಟ್ರಕ್ಷನ್ಸ್‌ನ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ರಾಜ್ಯೋತ್ಸವ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ವತಿಯಿಂದ ಕೊಡ ಮಾಡಿದ ‘ಲಯನ್ಸ್ ಕರ್ನಾಟಕ ರಾಜ್ಯೋತ್ಸವ ಪ್ರಶಸಿ’ಯನ್ನು ಮುಂಬಯಿ ಹೋಟೆಲ್ ಉದ್ಯಮಿ, ಹೊರನಾಡ ಕನ್ನಡಿಗ ಬಾಬು ಶೆಟ್ಟಿ ಪೆರಾರ ಅವರಿಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಯಕ್ಷಾಂಗಣದ ವೇದಿಕೆಯಲ್ಲಿ ವಿತರಿಸಿದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಎ. ಶಿವಾನಂದ ಕರ್ಕೇರ ವಂದಿಸಿದರು. ಕೋಶಾದಿಕಾರಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭಾಗವತೆ ಭವ್ಯಶ್ರೀ ಕುಲ್ಕುಂದ ಯಕ್ಷಗಾನ ಧಾಟಿಯಲ್ಲಿ ಪ್ರಾರ್ಥಿಸಿದರು.

ಪ್ರಧಾನ ಕಾರ್ಯದರ್ಶಿ ಡಾ| ದಿನಕರ ಎಸ್. ಪಚ್ಚನಾಡಿ, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸಂಚಾಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸಮಿತಿ ಸದಸ್ಯರಾದ ವಕ್ವಾಡಿ ಶೇಖರ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಹರೀಶ್ ಶೆಟ್ಟಿ ಸೂಡಾ, ಎಂ.ಜೆ. ರಾವ್, ಸುಧೀರ್ ಬಿ. ಜಪ್ಪು, ಶರತ್ ಕುಮಾರ್ ಕದ್ರಿ, ನಿವೇದಿತಾ ಎನ್. ಶೆಟ್ಟಿ ಮತ್ತು ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.

ಸಪ್ತಾಹದ ಕೊನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಶ್ರೀರಾಮ ದರ್ಶನ : ಶರಸೇತು-ಗರುಡ ಗರ್ವಭಂಗ’ ಯಕ್ಷಗಾನ ತಾಳ ಮದ್ದಳೆ ಜರಗಿತು.

Write A Comment