ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ: ಕೆಎನ್‌ಎನ್‌ಎಲ್‌ನಿಂದ ಹಸಿರುಪೀಠದ ದಾರಿ ತಪ್ಪಿಸುವ ಪ್ರಯತ್ನ : ಆರೋಪ

Pinterest LinkedIn Tumblr

netravati_rak_samiti

ಮಂಗಳೂರು, ನ. 24: ಬಯಲು ಸೀಮೆಯ ಜಿಲ್ಲೆಗಳಿಗೆ ನೀರನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಆರಂಭದಿಂದಲ್ಲೂ ಉಭಯ ಜಿಲ್ಲೆಗಳ ಜನರನ್ನು ಕತ್ತಲಲ್ಲಿ ಇಟ್ಟಿರುವ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್) ಇದೀಗ ಹಸಿರು ಪೀಠದ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿಯ ಪ್ರಮುಖರಾದ ಪ್ರೊ.ಎಸ್. ಜಿ.ಮಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನ.18ರಂದು ಚೆನ್ನೈನ ಹಸಿರು ನ್ಯಾಯಾಲಯದಲ್ಲಿ ಕೆಎನ್‌ಎನ್‌ಎಲ್‌ನ ನ್ಯಾಯವಾದಿಗಳು ವಾದ ಮಂಡಿಸುವಾಗ ಸತ್ಯಾಂಶ ತಿಳಿಸದೆ ದಾರಿ ತಪ್ಪಿಸಿದ್ದಾರೆ. ಯೋಜನೆಯ ರೈಲು ದಾರಿ, ರಸ್ತೆ ಅಥವಾ ವಿದ್ಯುತ್ ತಂತಿ ಎಳೆಯುವ ರೀತಿಯ ‘ಲೀನಿಯರ್ ಯೋಜನೆ’ ಎಂದು ವಾದಿಸುತ್ತಾ, ಅರಣ್ಯೇತರ ಪ್ರದೇಶಗಳಲ್ಲಿ ಕಾಮಗಾರಿಗೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.

ಆದರೆ ಈ ವಾದವನ್ನು ನ್ಯಾಯಾಲಯ ಒಪ್ಪದಿದ್ದರೂ ಕಾಮಗಾರಿ ಮುಂದುವರಿಸಿರುವುದು ನ್ಯಾಯಬಾಹಿರ ಎಂದರು. ಎತ್ತಿನಹೊಳೆ ಯೋಜನೆಯಡಿ ನದಿಯ ಉಪನದಿಗಳಿಗೆ ಪಶ್ಚಿಮ ಘಟ್ಟದ ಇಳಿಜಾರು ಪ್ರದೇಶದಲ್ಲಿ 8 ಕಡೆ ಅಡ್ಡಕಟ್ಟೆ, ವಿವಿಧೆಡೆಗಳಲ್ಲಿ 100 ಕಿ.ಮೀ. ಉದ್ದದ ಪೈಪ್‌ಲೈನ್ ಹಾಗೂ 12 ಕಡೆ ಪಂಪ್‌ಹೌಸ್, ರಸ್ತೆ ಇತ್ಯಾದಿಗಳನ್ನು ನಿರ್ಮಿಸುವುದರಿಂದ ಇದು ಲೀನಿಯರ್ ಯೋಜನೆ ಹೇಗಾಗಲು ಸಾಧ್ಯ ಎಂದವರು ಪ್ರಶ್ನಿಸಿದರು.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸಮಿತಿಯ ಮುಖಂಡರಾದ ಪುರುಷೋತ್ತಮ ಚಿತ್ರಾಪುರ, ಯತಿರಾಜ್ ಮತು ಕಿಶೋರ್‌ಕುಮಾರ್ ಎಂಬವರು ಪ್ರತ್ಯೇಕವಾಗಿ ಸಲ್ಲಿಸಿದ ಅರ್ಜಿಗಳ ಕುರಿತು ಕರ್ನಾಟಕ ನೀರಾವರಿ ನಿಗಮದ ಪರವಾಗಿ ಹಿರಿಯ ನ್ಯಾಯವಾದಿ ನವೀನ್ ಆರ್.ನಾಥ್ ವಾದ ಮಂಡಿಸಿದ್ದರು. ಆಗ ಯೋಜನೆಗೆ ತಡೆಯಾಜ್ಞೆ ನೀಡುವ ಅಗತ್ಯ ಮನಗಂಡು ಯೋಜನೆಯ ಪ್ರತಿಪಾದಕರಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ಯಾವುದೇ ಕಾಲಾವಕಾಶವಿಲ್ಲದೆ ಅಂದೇ ವಾದ ಪೂರ್ತಿಗೊಳಿಸಬೇಕು ಅಥವಾ ಯೋಜನೆಯ ಕಾಮಗಾರಿಯನ್ನು ಮುದುವರಿಸದೆ ಸ್ಥಗಿತಗೊಳಿಸಲಾಗುವುದು ಎಂದು ಲಿಖಿತ ಹೇಳಿಕೆ ನೀಡಬೇಕೆಂದು ನ್ಯಾಯಾ ಲಯ ಸೂಚಿಸಿತ್ತು.

ಈ ಸಂದರ್ಭ ನಿಗಮ ನ್ಯಾಯವಾದಿಗಳು ಲಿಖಿತ ಹೇಳಿಕೆ ನೀಡುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಡಿ.7ರವರೆಗೆ ಯಾವುದೇ ಕಾಮಗಾರಿ ಮುಂದುವರಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಿದ್ದರೂ ನಿಗಮ ಮಾತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ ಎಂದು ವಾದಿಸುತ್ತಿರುವುದು ಮಾತ್ರವಲ್ಲದೆ, ಯೋಜನಾ ಪ್ರದೇಶದಲ್ಲಿ ಕಾಮಗಾರಿಯನ್ನೂ ಮುಂದುವರಿಸಿದೆ ಎಂದು ತಿಳಿಸಿದರು.

ಅಂದು ಹಸಿರು ಪೀಠದಲ್ಲಿ ಸರಕಾರದ ಪರವಾಗಿ ವಾದಿಸಬೇಕಾದ ನ್ಯಾಯವಾದಿ ಅಶೋಕ ದೇವರಾಜ್ ಅನುಪಸ್ಥಿತರಿದ್ದರು. ವೈಲ್ಡ್‌ಲೈಫ್ ಅಥಾರಿಟಿ ಮತ್ತು ಬಯೋ ಡೈವರ್ಸಿಟಿ ಅಥಾರಿಟಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರೂ ಇದುವರೆಗೂ ಯಾವುದೇ ವರದಿ ಮಂಡಿಸಿಲ್ಲ. ವಾಸ್ತವಿಕ ವರದಿ ಮಂಡಿಸಿದರೆ ಅದು ಸರಕಾರಕ್ಕೆ ವಿರೋಧವಾಗಿರುವುದರಿಂದ ಉದ್ದೇಶ ಪೂರ್ವಕವಾಗಿ ಉತ್ತರ ನೀಡಿಲ್ಲ. ಮಾತ್ರವಲ್ಲದೆ ನೀರಾವರಿಯ ಕಾಲುವೆಗಳ ಮೂಲಕ ಹರಿಸಲಾಗುವ ನೀರನ್ನು ಕುಡಿಯಲು ಉಪಯೋಗಿಸಲು ಸಾಧ್ಯವೇ ಎಂಬ ಪ್ರಶ್ನೆಗೂ ಉತ್ತರವಿಲ್ಲ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡ,ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮೀನುಗಾರರ ಮುಖಂಡರಾದ ಕುಮಾರ್ ಮೆಂಡನ್, ಹೋರಾಟ ಸಮಿತಿಯ ದಿನಕರ ಶೆಟ್ಟಿ, ಉತ್ತಮ್ ಆಳ್ವ ಉಪಸ್ಥಿತರಿದ್ದರು.

Write A Comment