ಮಂಗಳೂರು, ನ.17 : ಆಟೊರಿಕ್ಷಾ ಚಾಲಕ/ಮಾಲಕರು ಆಟೊ ಗ್ಯಾಸ್, ಪೆಟ್ರೋಲ್ ಬೆಲೆಗಳಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಜಾರಿಯಲ್ಲಿರುವ ಆಟೊರಿಕ್ಷಾ ಪ್ರಯಾಣ ದರಗಳನ್ನು ಪರಿಷ್ಕರಿಸಿ ನಿಗದಿ ಪಡಿಸುವ ಬಗ್ಗೆ ಚರ್ಚಿಸಲು ದ.ಕ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಾದೇಶಿಕ ಪ್ರಾಧಿಕಾರದ ಸಭೆಯನ್ನು ನಡೆಸಲಾಯಿತು.
ಆಟೊರಿಕ್ಷಾ ಸಂಘದ ಪದಾಧಿಕಾರಿಗಳು, ಸಾರ್ವಜನಿಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಹಾಜರಿದ್ದು, ಜಿಲ್ಲಾಡಳಿತ ದರ ಪರಿಷ್ಕರಣೆ ಮಾಡದಿದ್ದಲ್ಲಿ ರೈತರಂತೆ ನಾವು ಕೂಡ ಆತ್ಮಹತ್ಯೆಯ ಹಾದಿ ಹಿಡಿಯುವಂತಹ ಪರಿಸ್ಥಿತಿ ಬರಬಹುದು” ಎಂದು ಅವರು ತಮ್ಮ ತಮ್ಮ ಆತಂಕ ವ್ಯಕ್ತಪಡಿಸಿದರು.
ಪ್ರಯಾಣ ದರ ಪರಿಷ್ಕರಣೆಗೆ ಒತ್ತಾಯ:
2014ರಿಂದ ಈಗಿನವರೆಗೆ ಪೆಟ್ರೋಲ್ ದರ, ವಾಹನಬಿಡಿಭಾಗಗಳ ಬೆಲೆ, ಹಾಗೂ ದಿನನಿತ್ಯದ ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಆದರೆ ರಿಕ್ಷಾ ಪ್ರಯಾಣ ದರದಲ್ಲಿ ಯಾವುದೆ ಬದಲಾವಣೆಯಾಗಿಲ್ಲ, ನಮಗೆ ಕನಿಷ್ಟದರ 25ರೂ. ಹಾಗೂ ನಂತರದ ಪ್ರತಿ ಕಿ.ಮೀ. ದರ 13ರೂ. ಜಾರಿ ತನ್ನಿ ಎಂದು ಆಟೋ ಚಾಲಕರು ಜಿಲ್ಲಾಧಿಕಾರಿಗೆ ವಿನಂತಿಸಿದರು.
ಆಟೋ ಚಾಲಕರಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲ, ಅವರು ಕೇವಲ ಪ್ರಯಾಣದರವನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಹಾಗಾಗಿ ದರ ಹೆಚ್ಚಳ ಮಾಡಿ ಎಂದು ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ವಿನಂತಿಸಿದರು.
ನಗರದ ಹೃದಯಭಾಗ ಹೊರತುಪಡಿಸಿ ಉಳಿದ ಕಡೆ ಯಾರು ಕೂಡ ಮೀಟರ್ ಅಳವಡಿಸಿಲ್ಲ, ಅಳವಡಿಸಿದ್ದರೂ ಮೀಟರ್ ದರಗಿಂತ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ, 2014ರಲ್ಲಿ ಚಿಲ್ಲರೆ ಸಮಸ್ಯೆಯಿಂದ ರಿಕ್ಷಾದರವನ್ನು 23ರಿಂದ 25ಕ್ಕೇರಿಸಲಾಯಿತು. ಆಗಲೂ ನಾವು ಅದನ್ನು ವಿರೋಧಿಸಿದ್ದೆವು, ಈಗಲೂ ವಿರೋಧಿಸುದಾಗಿ ತಿಳಿಸಿದ ಅವರು. ಇನ್ನಾದರೂ ಕೂಡ ಜಿಲ್ಲಾಡಳಿತ ದರ ಏರಿಕೆ ಮಾಡದೇ 23ರೂಪಾಯಿಯನ್ನೇ ಉಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಎಂದು ಬಿ.ಕೆ.ಇಮ್ತಿಯಾಝ್ ಈ ಸಂಧರ್ಭದಲ್ಲಿ ಮಾತನಾಡಿದರು.
ಮೊದಲಿನಂತೆ ಈಗಿನ ಪೆಟ್ರೋಲ್ ದರದಲ್ಲಿ, ಬಿಡಿಭಾಗಗಳಲ್ಲಿ, ಹಾಗೂ ಜೀವನಾಶವಶ್ಯಕ ಸಾಮಗ್ರಿಗಳಲ್ಲಿ ಹೆಚ್ಚು-ಕಡಿಮೆ ಕಾಣಬಹುದಾಗಿದೆ. ಮಾತ್ರವಲ್ಲ, ಈ ಹಿಂದಿನ ಪ್ರಯಾಣ ದರ ಪರಿಷ್ಕರಣೆಯಾಗಿ ಕೇವಲ 8 ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರವಾದ ವರದಿ ನೀಡುವಂತೆ ಆರ್ ಟಿ ಒ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಇನ್ನು1 ವಾರದೊಳಗೆ ಈ ವರದಿಯನ್ನು ನೀಡುವಂತೆ ಆದೇಶಿಸಿದ್ದು, ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳುದಾಗಿ ತಿಳಿಸಿದರು.
ಸಭೆಯಲ್ಲಿ ಎಸ್ಪಿ ಶರಣಪ್ಪ, ಪ್ರಭಾರ ಆರ್.ಟಿ.ಒ. ಜಿವಿ.ಹೆಗ್ಡೆ ಉಪಸ್ಥಿತರಿದ್ದರು.








