ಮಂಗಳೂರು: ನ.2ರಂದು ದ.ಕ.ಜಿಲ್ಲಾ ಕಾರಾಗೃಹದಲ್ಲಿ ನಡೆದ ಇಬ್ಬರು ಖೈದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಕರ ನೀಡಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿ ನಡೆದ ಹತ್ಯೆಗೆ ಉಪಯೋಗಿಸಲಾದ ಮಾರಕಾಸ್ತ್ರ ಪೂರೈಸಿದ ಆರೋಪದಲ್ಲಿ ಆಕಾಶಭವನ ನಿವಾಸಿ ಮಹೇಶ್ ಕುಮಾರ್(35) ಲತೀಶ್(23), ಬಂಟ್ವಾಳದ ಸತೀಶ್ ಆಚಾರ್ಯ(42) ಮತ್ತು ಕಮಲಾಕ್ಷ ಪೂಜಾರಿ(42) ಎಂಬವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಈ ಪೈಕಿ ಮಹೇಶ್ ಕುಮಾರ್ ಜೈಲಿನ ಗೋಡೆಯ ಮೂಲಕ ಆಯುಧವನ್ನು ಎಸೆದಿದ್ದು, ಈತನ ಜತೆಗೆ ಬಂದಿದ್ದ ಲತೀಶ್ ಆತನಿಗೆ ಸಹಕಾರ ನೀಡಿದ್ದ. ಈ ಆಯುಧವನ್ನು ಬಳಸಿ ಯೂಸುಫ್‌ನನ್ನು ಹತ್ಯೆಗೈಯಲಾಗಿತ್ತು ಎಂದು ಅವರು ತಿಳಿಸಿದರು.
ಕಮ್ಮಾರಿಕೆ ಕೆಲಸ ಮಾಡುತ್ತಿರುವ ಸತೀಶ್ ಆಚಾರ್ಯ ಕೊಲೆಗೆ ಪೂರಕವೆಂಬಂತೆ ಸಣ್ಣದಾದ ಆಯುಧ ತಯಾರಿಸಿ ಒದಗಿಸಿದ್ದ. ಕಮಲಾಕ್ಷ ಪೂಜಾರಿ ಕೂಡ ಇದಕ್ಕೆ ಸಹಕಾರ ನೀಡಿದ್ದ. ಈ ಆರೋಪದಲ್ಲಿ ಇವರನ್ನು ಕೂಡ ದಸ್ತಗಿರಿ ಮಾಡಲಾಗಿದೆ. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ.
ಮಾಡೂರು ಯೂಸುಫ್ ಕೊಲೆಗೆ ಸಂಬಂಧಿಸಿ ಈಗಾಗಲೇ ಜೈಲಿನಲ್ಲಿದ್ದ 5 ಮಂದಿಯ ಮೇಲೆ ಕೊಲೆ ಕೇಸು ದಾಖಲಿಸಿದ್ದು, ತನಿಖೆ ಮುಂದುವರಿದಿದೆ. ಗಣೇಶ್ ಶೆಟ್ಟಿಯನ್ನು ಕೊಲೆಗೈದ ಆರೋಪಿಗಳ ವಿರುದ್ಧವು ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಇಲಾಖೆಯೊಂದಿಗೆ ಕೈ ಜೋಡಿಸಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಸಮಾಜ ಸುಸ್ಥಿರವಾಗಿ ಮುಂದುವರಿಯಲು ಸಾಧ್ಯ.ಶಾಂತಿ ಸುವ್ಯವಸ್ಥೆಗೆ ಜನತೆ ಒತ್ತು ನೀಡಬೇಕು. ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಪೊಲೀಸ್ ಅಯುಕ್ತ ಎಸ್. ಮುರುಗನ್ ಜನತೆಯಲ್ಲಿ ಮನವಿ ಮಾಡಿದ್ದಾರೆ
ಪೊಲೀಸರ ಮೇಲೆ ಹಲ್ಲೆ : ಇಬ್ಬರ ಸೆರೆ
ಇತ್ತೀಚೆಗೆ ನಿಷೇಧಾಜ್ಞೆ ವೇಳೆ ಮಾರಕಾಸ್ತ್ರದೊಂದಿಗೆ ಬಂದರು ಪ್ರದೇಶದಲ್ಲಿ ತಿರುಗಾಡುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ. ಬಂದರು ನಿವಾಸಿ ಎಂ.ಆರೀಫ್(29), ಜೆಪ್ಪು ಕುಡುಪಾಡಿಯ ಅಹಮ್ಮದ್ ಶರ್ವಾನ್(23) ಬಂಧಿತರು. ಈ ಆರೋಪಿಗಳು ಕಬ್ಬಿಣದ ರಾಡ್ ಎಸೆದು ಹಲ್ಲೆ ನಡೆಸಿದ್ದರು
ಬಿ.ಸಿ.ರೋಡ್ ಕಲ್ಲು ತೂರಾಟ ಪ್ರಕರಣ : ನಾಲ್ಕು ಮಂದಿಯ ಸೆರೆ
ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ಕಳೆದ ಗುರುವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನಗರ ಠಾಣಾ ಪೊಲೀಸರು ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬಂಟ್ವಾಳ ಕೆಳಗಿನ ಪೇಟೆ ನಿವಾಸಿ ಹಿದಾಯತ್, ವಿಟ್ಲ ಸಮೀಪದ ಪೈಸಾರಿ ನಿವಾಸಿ ಬದ್ರುದ್ದೀನ್, ಬಿ. ಮೂಡ ಗ್ರಾಮದ ಮದ್ದ ನಿವಾಸಿ ಮುಹಮ್ಮದ್ ಸಿರಾಜ್, ಕಲ್ಲಡ್ಕ ಸಮೀಪದ ಬಲ್ಲೆಕೋಡಿ ನಿವಾಸಿ ಜಾಫರ್ ಬಂಧಿತ ಆರೋಪಿಗಳು.
ಬಂಧಿತರನ್ನು ಸೋಮವಾರ ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
