ಕನ್ನಡ ವಾರ್ತೆಗಳು

ದೇಶಾದ್ಯಂತ ಜೋಡಿ ರೈಲು ಮಾರ್ಗ ನಿರ್ಮಾಣ- ಉಡುಪಿಯಲ್ಲಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು

Pinterest LinkedIn Tumblr

ಉಡುಪಿ: ದೇಶದಾದ್ಯಂತ ಮುಂದಿನ 3 ರಿಂದ 5 ವರ್ಷಗಳ ಅವಧಿಯಲ್ಲಿ ಎಲ್ಲಾ ರೈಲು ಮಾರ್ಗಗಳಲ್ಲಿ ಜೋಡಿ ಹಳಿಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪಿ ಪ್ರಭು ಹೇಳಿದ್ದಾರೆ.

ಅವರು ಸೋಮವಾರ ಉಡುಪಿ ರೈಲು ನಿಲ್ದಾಣದ ಬಳಿ , ರೈಲ್ವೆ ಇಲಾಖೆ ವತಿಯಿಂದ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ರಾಮಕೃಷ್ಣ ಹೆಗ್ಡೆ ಕೌಶಲ್ಯ ಅಭಿವೃದ್ಧಿ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಸಿ ಮಾತನಾಡಿದರು.

railway_Minister_Udp (1) railway_Minister_Udp (6) railway_Minister_Udp (5) railway_Minister_Udp (4) railway_Minister_Udp (3) railway_Minister_Udp (7) railway_Minister_Udp (2)

ದೇಶದಲ್ಲಿ ರೈಲ್ವೆಯ ಅಭಿವೃದ್ಧಿಗಾಗಿ 8.50 ಲಕ್ಷ ಕೋಟಿಗಳನ್ನು ವಿನಿಯೋಗ ಮಾಡಲಿದ್ದು, ಇದಕ್ಕಾಗಿ ಎಲ್.ಐ.ಸಿ ಯಿಂದ 1.50 ಲಕ್ಷ ಕೋಟಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲಾಗುವುದು , ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ರೈಲು ಸಂಚಾರವನ್ನು ವಿದ್ಯುದೀಕರಣಕ್ಕಾಗಿ ಮಾಡಲಾಗುವುದು, ಬಂದರು ಪ್ರದೇಶ ಇರುವ ರಾಜ್ಯಗಳು ಕೋರಿದಲ್ಲಿ ಎಲ್ಲಾ ಬಂದರುಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗುವುದು, ಇದರಿಂದ ರೈಲ್ವೆಗೆ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಕೋಚ್‌ಗಳ ನಿರ್ಮಾಣ, ಮೊಬೈಲ್‌ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ, ಇ-ಕ್ಯಾಟರಿಂಗ್ ಸೌಲಭ್ಯದ ಮೂಲಕ ಪ್ರಯಾಣ ಸಮಯದಲ್ಲಿ ತಮ್ಮ ನೆಚ್ಚಿನ ಆಹಾರ ಪಡೆಯಲು ವ್ಯವಸ್ಥೆ, ವೆಂಡಿಂಗ್ ಮೆಷಿನ್ ಮೂಲಕ ಟಿಕೆಟ್ ಮತ್ತು ಕುಡಿಯುವ ನೀರು ವಿತರಣೆ ಸೌಲಭ್ಯಗಳನ್ನು ಹಲವು ನಿಲ್ದಾಣಗಳಲ್ಲಿ ಒದಗಿಸಲಾಗಿದ್ದು, ಹಂತ ಹಂತವಾಗಿ ಎಲ್ಲೆಡೆ ವಿಸ್ತರಿಸಲಾಗುವುದು , ರೈಲು ನಿಲ್ದಾಣಗಳಲ್ಲಿ ದೇಶಿ ಆಹಾರ ಪದಾರ್ಥಗಳ ಮಾರಾಟ ಮತ್ತು ಸ್ವ ಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು, ಮಡಗಾಂವ್‌ನಲ್ಲಿ ಕೌಶಲ್ಯ ಯೋಜನೆಯಡಿಯಲ್ಲಿ ರಾಷ್ಟ್ರೀಯ ಸುರಂಗ ನಿರ್ಮಾಣ ತಂತ್ರಜ್ಞಾನ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇ ಟೆಂಡರ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ವಿಭಾಗೀಯ ಮ್ಯಾನೇಜರ್‌ಗಳಿಗೆ ಮತ್ತು ಸಹಾಯಕ ಮ್ಯಾನೇಜರ್‌ಗಳಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಲಾಗಿದೆ, ಸಿಬ್ಬಂದಿ ನೇಮಕಾತಿಯನ್ನು ಆನ್‌ಲೈನ್ ಪರೀಕ್ಷೆ ಮೂಲಕ ನಡೆಸಲಾಗುತ್ತಿದ್ದು, ವಂಚನೆ ನಡೆಸುವವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಹೇಳಿದರು.

ಉಡುಪಿಯಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿದ್ದು, ನಿರುದ್ಯೋಗಿ ಯುವಜನತೆಗೆ ತರಬೇತಿ, ಹಾಸ್ಟೆಲ್ ಮತ್ತು ಗ್ರಂಥಾಲಯ ವ್ಯವಸ್ಥೆಯನ್ನು ಈ ಕಟ್ಟಡದಲ್ಲಿ ನೀಡಲಾಗಿದೆ, ಉಡುಪಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ವ್ಯವಸ್ಥೆಯನ್ನು 2 ವಾರದಲ್ಲಿ ಆರಂಭಿಸಲಾಗುವುದು ಎಂದು ಸುರೇಶ್ ಪ್ರಭು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮತನಾಡಿ,ಕೊಂಕಣ ರೈಲು ಮಾರ್ಗದಲ್ಲಿ ಜೋಡಿ ಮಾರ್ಗ ನಿರ್ಮಾಣ ಮತ್ತು ವಿದ್ಯುದೀಕರಣ ನಡೆಸುವಂತೆ ಹಾಗೂ ಮಂಗಳೂರು ಬಂದರನ್ನು ಕೊಂಕಣ ರೈಲು ವಿಭಾಗಕ್ಕೆ ಸೇರಿಸುವಂತೆ ಮತ್ತು ವಿಭಾಗವನ್ನು ತೋಕೂರುವರೆಗೆ ವಿಸ್ತರಿಸುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಪಿ.ಯುವರಾಜ್, ತಾ.ಪಂ. ಅಧ್ಯಕ್ಷೆ ಸುನೀತಾ ನಾಯ್ಕ್, ನಗರಸಭೆ ಸದಸ್ಯೆ ಗೀತಾ ರವಿ ಶೇಟ್, ಮಾಜಿ ಶಾಸಕ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಯೋಗೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಕೊಂಕಣ ರೈಲ್ವೆಯ ಮುಖ್ಯ ಇಂಜಿನಿಯರ್ ಭಾನುಪ್ರಕಾಶ್ ದೇಯಲ್ ಸ್ವಾಗತಿಸಿದರು. ಕಾರ್ಯಾಚರಣೆ ವಿಭಾಗದ ಇಂಜಿನಿಯರ್ ಸಂಜಯ್ ಗುಪ್ತಾ ವಂದಿಸಿದರು. ಆಶಾಶೆಟ್ಟಿ ನಿರೂಪಿಸಿದರು.

Write A Comment