ಕನ್ನಡ ವಾರ್ತೆಗಳು

ಹರೀಶ್ ಪೂಜಾರಿ ಹತ್ಯೆ ಪ್ರಕರಣ : ಹಂತಕರ ಪತ್ತೆಗೆ ವಿಶೇಷ ತಂಡ ರಚನೆ.

Pinterest LinkedIn Tumblr

Sp_press_meet_2

ಬಂಟ್ವಾಳ, ನ.14:  ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಹತ್ಯೆ ಹಾಗೂ ಶಮೀವುಲ್ಲಾ ಅವರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎಸ್ಪಿ ನೇತೃತ್ವದ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.

ಗುರುವಾರ ಬಿ.ಸಿ. ರೋಡು ಹಾಗೂ ಮಣಿಹಳ್ಳದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಐಜಿ ಅಮೃತ್‍ಪಾಲ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಈ ಕೃತ್ಯಕ್ಕೆ ಸಂಬಂಧಿಸಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಐಆರ್‍ಬಿ, ಕೆಎಸ್‍ಆರ್‍ಪಿ ಸಹಿತ 1500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಿಷೇಧಾಜ್ಞೆಯನ್ನು ಮೂರು ದಿನಗಳವರೆಗೆ ಜಾರಿಗೊಳಿಸಲಾಗಿದ್ದರೂ, ಪರಿಸ್ಥಿತಿ ಅವಲೋಕಿಸಿ ಜಿಲ್ಲಾಧಿಕಾರಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಸಿ.ಐ. ಬೆಳ್ಳಿಯಪ್ಪ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

ಬಳಿಕ ಬಿ.ಸಿ. ರೋಡಿನಲ್ಲಿ ಗುರುವಾರ ಸಂಜೆ ನಡೆದ ಅಹಿತಕರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.

ಕಲ್ಲೆಸೆತ ಹಲವರು ವಶಕ್ಕೆ :

ಕಲ್ಲಡ್ಕ, ತುಂಬೆ, ಕೈಕಂಬ ಮೊದಲಾದೆಡೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಸಹಜ ಸ್ಥಿತಿಗೆ ಮರಳಿದ ಕರಾವಳಿ: ಶಾಂತಿ ಸೌಹಾರ್ದ ಕಾಪಾಡಲು ಮನವಿ:

ಬಂಟ್ವಾಳ ತಾಲೂಕಿನಲ್ಲಿ ಗುರುವಾರ ನಡೆದ ಅಹಿತಕರ ಘಟನೆ ಬಳಿಕ ಸಂಭವಿಸಿದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಘೋಷಿಸಿರುವ ಸೆಕ್ಷನ್ 144ರನ್ವಯದ ನಿಷೇಧಾಜ್ಞೆ ಭಾನುವಾರ ರಾತ್ರಿ 10 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಕೂಡಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಮರುಕಳಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತವು ವ್ಯಾಪಕ ಮುಂಜಾಗರೂಕತಾ ಕ್ರಮ ತೆಗೆದುಕೊಂಡಿದೆ.

ಭದ್ರತೆಗಾಗಿ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆ ಹಾಗೂ ಕೇರಳದಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮುಂತಾದ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳ ತಂಡ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಂಡಿದೆ.

ಶುಕ್ರವಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಪೊಲೀಸ್ ಮಹಾ ನಿರೀಕ್ಷಕರು ಬಂಟ್ವಾಳದಲ್ಲಿಯೇ ಮೊಕ್ಕಾಂ ಹೂಡಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರಿನ ಆಯ್ದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವದಂತಿಗಳಿಗೆ ಕಿವಿಗೊಡದಿರಿ :

ಅನಾವಶ್ಯಕ ವದಂತಿಗಳಿಗೆ ಕಿವಿಕೊಡದೆ, ಅಹಿತಕರ ಘಟನೆಗೆ ಪ್ರೇರೇಪಣೆಗೊಳಗಾಗದೆ ಶಾಂತಿ ಸೌಹಾರ್ಧತೆಯನ್ನು ಕಾಪಾಡಲು ಜನರು ಸಹಕರಿಸಬೇಕು ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮನವಿ ಮಾಡಿದ್ದಾರೆ.

ಪ್ರತೀ ಸುದ್ದಿ, ವದಂತಿಗಳನ್ನೂ ಕೂಲಂಕಷವಾಗಿ ವಿಶ್ಲೇಷಿಸಿಕೊಳ್ಳುವಂತೆ ತಿಳಿಸಿರುವ ಅವರು, ಸಾರ್ವಜನಿಕರಿಗೆ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಅಹಿತಕರ ಘಟನೆಗೆ ಪ್ರೇರೇಪಣೆಗೆ ಒಳಗಾಗದಿರುವಂತೆ ಕರೆ ನೀಡಿದ್ದಾರೆ.

ಹರೀಶ್ ಕುಟುಂಬಕ್ಕೆ ಪರಿಹಾರ:

ಗುರುವಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಣಿಹಳ್ಳ ಎಂಬಲ್ಲಿ ಚೂರಿ ಇರಿತದಿಂದ ಮೃತಪಟ್ಟ ನಾವೂರು ಗ್ರಾಮದ ಮಣಿಹಳ್ಳ ಹಳೇಗೇಟ್ ಮನೆ ನಿವಾಸಿ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.

ಹರೀಶ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ:

ಬಂಟ್ವಾಳದ ನಾವೂರ ಗ್ರಾಮದ ಹಳೆಗೇಟು ಎಂಬಲ್ಲಿನ ಸ್ಥಳೀಯ ನಿವಾಸಿ ಹರೀಶ್ ಪೂಜಾರಿ ಹತ್ಯೆ ಹಾಗೂ ಶಮೀವುಲ್ಲಾ ಎಂಬವರಿಗೆ ಚೂರಿ ಇರಿತದ ಪ್ರಕರಣವನ್ನು ಖಂಡಿಸಿರುವ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ, ಈ ಕೃತ್ಯಕ್ಕೆ ಸಂಬಂಧಿಸಿ ಮುಂದಿನ 48 ಗಂಟೆಯೊಳಗೆ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದೆ.

ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ, ಘಟನೆಗೆ ಸಂಬಂಧಿಸಿ ಪ್ರಕರಣಕ್ಕೆ ಸಂಭಂದವಿಲ್ಲದ ಅಮಾಯಕರನ್ನು ಠಾಣೆಗೆ ತಂದೊಪ್ಪಿಸಿ ಅವರನ್ನು ಫಿಕ್ಸ್ ಮಾಡುವಂತಹ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು ಎಂದು ತಿಳಿಸಿದ್ದಾರೆ.

ಹರೀಶ್ ಪೂಜಾರಿಯ ಹತ್ಯಾ ಪ್ರಕರಣದ ತನಿಖೆ ದಾರಿ ತಪ್ಪುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್‍ನ್ನು ನಂಬುವಂತಿಲ್ಲ. ಇದೀಗ ಈ ಪ್ರಕರಣವನ್ನು ತಿರುಚುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸಂಸದ ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಭಟಿಯಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಮೀವುಲ್ಲನ ಮೇಲೆ ಮೊದಲ ದಾಳಿ :

ಗುರುವಾರ ರಾತ್ರಿ ಚೂರಿ ಇರಿತಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೆ ಅಸ್ಪತ್ರೆಗೆ ಪೊಲೀಸರ ಆಗಮನದ ಮೊದಲೇ ತಾನು ಅಲ್ಲಿ ತಲುಪಿದ್ದೆ. ಈ ಸಂದರ್ಭದಲ್ಲಿ ಸಮೀವುಲ್ಲಾ ಬಂಟ್ವಾಳ ಸಿಐ ಬೆಳ್ಳಿಯಪ್ಪರವರಲ್ಲಿ ಹೇಳಿಕೆಯೊಂದನ್ನು ನೀಡಿದ್ದರು.

ಮಾರುತಿ ಕಾರಿನಲ್ಲಿ ನಾಲ್ಕೈದು ಮಂದಿಯ ತಂಡ ಆಗಮಿಸಿ ದಾಳಿ ನಡೆಸಿತ್ತು. ಆಗ ಹರೀಶ ನೀನು ಓಡು ಎಂದು ಹೇಳಿದ್ದ. ಅಷ್ಟರಲ್ಲಿ ಆರೋಪಿಗಳು ತನ್ನನ್ನು ಬಿಟ್ಟು ಹರೀಶನ ಕತ್ತಿನ ಪಟ್ಟಿ ಹಿಡಿದು ಚೂರಿಯಿಂದ ಮನಬಂದಂತೆ ಇರಿದಿದ್ದರು ಎಂದು ಸಮೀವುಲ್ಲಾ ಹೇಳಿಕೆ ನೀಡಿದ್ದಾನೆಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪುರಸಭಾ ಸದಸ್ಯ ಗೋವಿಂದ ಪ್ರಭುರವರು ವಿವರಿಸಿದ್ದಾರೆ.

ಬಳಿಕ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರವನ್ನು ಕೂಡಾ ತಾನು ನೀಡಿದ್ದೇನೆ. ಹಾಗಾಗಿ ಸಮೀವುಲ್ಲಾನ ಹೇಳಿಕೆಯಂತೆ ನೈಜ ಆರೋಪಿಗಳನ್ನು ಬಂಧಿಸಿ ಹರೀಶನ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆಂದು ಜಿ. ಆನಂದ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Write A Comment