ಕನ್ನಡ ವಾರ್ತೆಗಳು

ತಣ್ಣೀರು ಬಾವಿಯಲ್ಲಿ ನಿರ್ಮಿಸಲಾಗಿರುವ ಟ್ರೀ ಪಾರ್ಕ್ ರಾಜ್ಯದ ಅತ್ಯುತ್ತಮ ಟ್ರೀ ಪಾರ್ಕ್.

Pinterest LinkedIn Tumblr

Forest_meet_photo_1

ಮಂಗಳೂರು,ನ.06 : ತಾಲೂಕಿಗೊಂದು ಹಸಿರು ಗ್ರಾಮ ಯೋಜನೆಯಡಿ ಪುತ್ತೂರಿನ ಅರಿಯಡ್ಕದಲ್ಲಿ ಹಸಿರು ಗ್ರಾಮ ಅನುಷ್ಠಾನ ಕಾರ್ಯ ಪ್ರಗತಿಯಲಿದ್ದು, ಮಂಗಳೂರು ವಿಭಾಗದ ತಣ್ಣೀರು ಬಾವಿಯಲ್ಲಿ ನಿರ್ಮಿಸಲಾಗಿರುವ ಟ್ರೀ ಪಾರ್ಕ್ ರಾಜ್ಯದ ಅತ್ಯುತ್ತಮ ಟ್ರೀ ಪಾರ್ಕ್ ಎಂದು ಗುರುತಿಸಲಾಗಿದೆ ಎಂದು ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾ ಹೇಳಿದ್ದಾರೆ.

ಅಳಪೆ- ಪಡೀಲ್ ಬಳಿಯಿರುವ ಅರಣ್ಯ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ ಅರಣ್ಯ ಇಲಾಖೆಯು ನೈಸರ್ಗಿಕವಾಗಿ ಬೆಳೆದ ಶ್ರೀಗಂಧ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಮುಂದಾಗಿದ್ದು, ಮಂಗಳೂರು ಅರಣ್ಯ ವಿಭಾಗಕ್ಕೊಳಪಟ್ಟ ಬಂಟ್ವಾಳದ ವೀರಕಂಬದಲ್ಲಿ 70 ಲಕ್ಷ ರೂ. ಯೋಜನೆಯಡಿ ಈಗಾಗಲೇ 43 ಹೆಕ್ಟೇರ್ ಶ್ರೀಗಂಧ ನೆಡುತೋಪನ್ನು 7.56 ಲಕ್ಷ ರೂ. ವೆಚ್ಚದಲ್ಲಿ ಬೆಳೆಸಲಾಗಿದೆ ಎಂದು ತಿಳಿಸಿದರು.

ಮಂಗಳೂರು ವೃತ್ತದಲ್ಲಿ 2015-16ನೆ ಸಾಲಿನಲ್ಲಿ ನಿಗದಿತಪಡಿಸಿದ 4,082.46 ಹೆಕ್ಟೇರ್ ಭೌತಿಕ ಗುರಿಯಲ್ಲಿ 4,204.23 ಹೆಕ್ಟೇರ್ ವಿವಿಧ ಇಲಾಖಾ ನೆಡುತೋಪು ಬೆಳೆಸಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 2012-13ರಿಂದ 2015-16ನೆ ಸಾಲಿನಲ್ಲಿ 3,651 ಫಲಾನುಭವಿಗಳಿಗೆ 55.57 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ. 2014-15ನೆ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಸೋಲಾರ್ ದೀಪ, ಸರಳ ಒಲೆ, ಎಲ್‍ಪಿಜಿ ಗ್ಯಾಸ್ ಸ್ಟೌಪ್, ಅನಿಲ ಸ್ಥಾವರ ನಿರ್ಮಾಣ, ಸೋಲಾರ್ ವಾಟರ್ ಹೀಟರ್, ಜೇನು ಪೆಟ್ಟಿಗೆ ಮೊದಲಾದ ಸೌಲಭ್ಯಗಳನ್ನು 323 ಫಲಾನುಭವಿಗಳಿಗೆ ವಿತರಿಸಲಾಗಿದೆ.

Forest_meet_photo_2

2015-16ನೆ ಸಾಲಿನಲ್ಲಿ 55 ಫಲಾನುಭವಿಗಳಿಗೆ ವಿತರಿಸಬೇಕಾಗಿದ್ದು, 40 ಫಲಾನುಭವಿಗಳಿಗೆ ವಿತರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಗಿರಿಜನ ಉಪಯೋಜನೆಯಡಿ 2014-15ನೆ ಸಾಲಿನಡಿ 333 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗಿದ್ದು, 2015-16ನೆ ಸಾಲಿನಲ್ಲಿ 47 ಫಲಾನುಭವಿಗಳಲ್ಲಿ 22 ಫಲಾನುಭವಿಗಳಿಗೆ ವಿತರಿಸಲಾಗಿದೆ. 2015-16ನೆ ಸಾಲಿನಲ್ಲಿ ವನ್ಯ ಜೀವಿಗಳಿಂದ ಬೆಳೆಹಾನಿ, ಜಾನುವಾರು ಸಾವು ಮೊದಲಾದ 146 ಪ್ರಕರಣಗಳಡಿ 12.4 ಲಕ್ಷ ರೂ. ಪರಿಹಾರ ವಿತರಿಸುವುದಾಗಿ ಅವರು ಹೇಳಿದರು.

ಮಂಗಳೂರು ವೃತ್ತದಲ್ಲಿ 2015-16ನೆ ಸಾಲಿನಲ್ಲಿ ವನ್ಯ ಜೀವಿಗಳಿಂದ ಬೆಳೆಹಾನಿ, ಜಾನುವಾರು ಸಾವು ಮೊದಲಾದ 146 ಪ್ರಕರಣಗಳಿಗೆ 12.4 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. ಮಂಗಳೂರು ವಿಭಾಗದ ಪಡುಮಲೆ ಎಂಬಲ್ಲಿ 9.15 ಎಕರೆ ಪ್ರದೇಶದಲ್ಲಿ ದೇಯಿ ಬೈದೆದಿ ಜೈವಿಕ ಔಷಧಿ ವನ ನಿರ್ಮಿಸಲು 70 ಲಕ್ಷರೂ. ಯೋಜನೆಯಡಿ 21 ಲಕ್ಷ ರೂ. ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ. ಕಾರಿಂಜೇಶ್ವರ ಎಂಬಲ್ಲಿ ದೈವೀ ವನ ನಿರ್ಮಿಸುವ ಬಗ್ಗೆ 60 ಲಕ್ಷ ರೂ. ಯೋಜನೆಯಡಿ 43.3ಲಕ್ಷ ರೂ. ವೆಚ್ಚದಲ್ಲಿ ನಕ್ಷತ್ರ ವನ, ಮೂಲಿಕೆ ವನ, ನವಗ್ರಹ ವನ, ರಾಶಿವನ, ಸ್ತೋತ್ರ ವನ, ಸ್ವಸ್ತಪಥ ವನ ಮೊದಲಾದ ಕಾಮಗಾರಿ ಪ್ರಗತಿಯಲ್ಲಿದೆ ವಿನಯ್ ಲೂತ್ರಾ ತಿಳಿಸಿದರು.

ಮಂಗಳೂರು ವೃತ್ತದಲ್ಲಿ 5,862.60 ಎಕರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣ:

ಮಂಗಳೂರು ವೃತ್ತದಲ್ಲಿ 5,862.60 ಎಕರೆ ಅರಣ್ಯ ಭೂಮಿ ಒತ್ತುವರಿಯ 3,870 ಪ್ರಕರಣಗಳಿವೆ. ಇವುಗಳಲ್ಲಿ 89 ಪ್ರಕರಣಗಳು 3 ಎಕರೆಗಿಂತ ಜಾಸ್ತಿ ಇರುವಂತದ್ದು. ಉಳಿದವರು 3 ಎಕರೆಗಿಂತ ಕಡಿಮೆ ಇರುವ ಪ್ರಕರಣಗಳಾಗಿದ್ದು, ಇವುಗಳಲ್ಲಿ 42 ಪ್ರಕರಣಗಳಲ್ಲಿ 301.67 ಹೆಕ್ಟೇರ್ ಅರಣ್ಯ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ಮಂಗಳೂರು ವೃತ್ತದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸ್ವಯಂ ಪ್ರೇರಿತರಾಗಿ ಹೊರಹೋಗಲು 527 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಇದುವರೆಗೆ 164 ಕುಟುಂಬಗಲು 5,970.56 ಲಕ್ಷ ರೂ. ಪರಿಹಾರ ಧನ ಪಡೆದು 262.40 ಹೆಕ್ಟೇರ್ ಪ್ರದೇಶವನ್ನು ಬಿಟ್ಟು ಹೋಗಿದ್ದಾರೆ. ಉಳಿದ 363 ಕುಟುಂಬಗಳಿಗೆ 14,520 ಲಕ್ಷ ಪರಿಹಾರ ಧನ ಪಾವತಿಸುವ ಕ್ರಮ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಡೀಮ್ಡ್ ಫಾರೆಸ್ಟ್ ಪ್ರದೇಶಗಳ ಪರಿಶೀಲನಾ ಕಾರ್ಯ ಸಂಪೂರ್ಣ:

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಂದಿನ ಪರಿಷ್ಕೃತ ತಜ್ಞ ಸಮಿತಿ ನೀಡಿದ್ದ ಡೀಮ್ಡ್ ಫಾರೆಸ್ಟ್ ಪ್ರದೇಶಗಳ ಪರಿಶೀಲನಾ ಕಾರ್ಯ ಸಂಪೂರ್ಣಗೊಂಡು ರಾಜ್ಯ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಸಿದ್ಧಗೊಳ್ಳಲಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ 87,511 ಹೆಕ್ಟೇರ್ ಡೀಮ್ಡ್ ಫಾರೆಸ್ಟ್‍ನಲ್ಲಿ 34,850 ಹೆಕ್ಟೇರ್ ಪ್ರದೇಶವನ್ನು ಹೊರತುಪಡಿಸಲು ಪ್ರಸ್ತಾಪಿಸಲಾಗಿದೆ ಎಂದು ವಿನಯ್ ಲೂತ್ರಾ ತಿಳಿಸಿದರು.

ನೈಸರ್ಗಿಕವಾಗಿ ನೀರಿನ ಸಂರಕ್ಷಣೆ :

ಮಂಗಳೂರು ವೃತ್ತ ಸಂರಕ್ಷಣಾಧಿಕಾರಿ ಸಂಜಯ್ ಬಿಜೂರು ಮಾತನಾಡಿ. ಅರಣ್ಯಗಳಲ್ಲಿ ತೋಡುಗಳಲ್ಲಿ ಹರಿಯುವ ನೀರನ್ನು ನೈಸರ್ಗಿಕವಾಗಿ ಸಂರಕ್ಷಿಸುವ ಮೂಲಕ ಸುತ್ತಮುತ್ತ ತೇವಾಂಶವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಂಗಳೂರು ವೃತ್ತದಲ್ಲಿ 3,0000 ಕ್ಯೂಬಿಕ್ ಮೀಟರ್ ವ್ಯಾಪ್ತಿಯಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ತೋಡುಗಳಲ್ಲಿ ನೈಸರ್ಗಿಕವಾಗಿ ಬೀಳುವ ಬೀಜಗಳು ಮೊಳಕೆಯೊಡೆದು ಮರಗಳು ಬೆಳೆದು ತೋಡುಗಳಲ್ಲಿ ಕಾಡು ನಿರ್ಮಾಣವಾಗುವ ಮೂಲಕ ತೇವಾಂಶ ಹಾಗೂ ಮಣ್ಣು ನೀರಿನ ಜತೆ ಹರಿದುಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

Write A Comment