ಕನ್ನಡ ವಾರ್ತೆಗಳು

ಉಡುಪಿ: ಡಿಸಿಐಬಿ ಪೊಲೀಸರ ಕಾರ್ಯಾಚರಣೆ; ಮೂವರು ಅಂತರ್ ಜಿಲ್ಲಾ ದೇವಳ ಕಳ್ಳರ ಬಂಧನ, 28 ಲಕ್ಷ ಸೊತ್ತು ವಶ

Pinterest LinkedIn Tumblr

Udp DCIB_Temple Thieves_arrest (6)

ಉಡುಪಿ: ಉಡುಪಿ ಜಿಲ್ಲಾ ಅಪರಾಧ ಪತ್ತೆದಳ (ಡಿಸಿಐಬಿ) ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಅಂತರ್ಜಿಲ್ಲಾ ದೇವಸ್ಥಾನ ಕಳ್ಳರನ್ನು ಬಂಧಿಸಿ ಅವರಿಂದ ಅಂದಾಜು 28 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿರುವ ಬಗ್ಗೆ ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ ತಿಳಿಸಿದ್ದಾರೆ.

ಅವರು ಶುಕ್ರವಾರ ಉಡುಪಿ ಎಸ್ಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು.

ಬಂಧಿತ ಆರೋಪಿಗಳನ್ನು ದೊಡ್ಡಬಳ್ಳಾಪುರದ ಆರೋಡಿ ಮೂಲದ ನರಸಿಂಹ ರಾಜು (37), ತುಮಕೂರು ಜಿಲ್ಲೆಯ ಶಿರಾ ಗ್ರಾಮದ ನಿವಾಸಿಗಳಾದ ಫಿರೋಝ್ ಫಾಶಾ (23) ಹಾಗೂ ಮಹಮ್ಮದ್ ಶಬೀರ್ (21) ಎಂದು ಗುರುತಿಸಲಾಗಿದ್ದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಚಾಂದ್ ಪಾಶಾ ಮತ್ತು ರೆಹಮತ್ ಎನ್ನಲಾಗಿದೆ.

ಬಂಧಿತರಿಂದ 553 ಗ್ರಾಂ ಚಿನ್ನ, 20 ಕೆ.ಜಿ. ಬೆಳ್ಳಿ, 1 ಹೀರೋ ಹೊಂಡಾ ಬೈಕ್, 1 ಫಲ್ಸರ್ ಬೈಕ್, 1 ಟಾಟಾ ಸುಮೋ ಕಾರು, 7 ಮೊಬೈಲ್ ಫೋನುಗಳು ಹಾಗೂ 20,650 ರೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಇವೆಲ್ಲದರ ಒಟ್ಟು ಮೌಲ್ಯ 28 ಲಕ್ಷ ಅಂದಾಜು ಎನ್ನಲಾಗಿದೆ.

Udp DCIB_Temple Thieves_arrest (9) Udp DCIB_Temple Thieves_arrest (8) Udp DCIB_Temple Thieves_arrest (5) Udp DCIB_Temple Thieves_arrest (7)

ಟಿ.ವಿ. ನೋಡ್ತಾರೆ- ಕದಿಯೋಕೆ ಬರ್ತಾರೆ:
ಆರೋಪಿಗಳು ಟಿವಿ ವಾಹಿನಿಗಳಲ್ಲಿ ಬರುವ ದೇವಸ್ಥಾನಗಳ ಕುರಿತಾದ ವರದಿಗಳು ಹಾಗೂ ಸುದ್ದಿಗಳನ್ನು ವೀಕ್ಷಿಸಿ ದೇವಸ್ಥಾನಗಳ ಬಗ್ಗೆ ತಿಳಿಯುತ್ತಿದ್ದು ಬಳಿಕ ಅಲ್ಲಿ ಕಳವಿಗೆ ಸ್ಕೆಚ್ ರೂಪಿಸುತ್ತಿದ್ದರೆನ್ನಲಾಗಿದೆ. ಬಳಿಕ ದೇವಸ್ಥಾನಕ್ಕೆ ಭಕ್ತಾದಿಗಳಂತೆ ಆಗಮಿಸಿ ಕೆಲ ದಿನ ಅಲ್ಲಿನ ಚಲನ-ವಲನ ಗಮನಿಸುತ್ತಿದ್ದರಂತೆ. ಇದೇ ರೀತಿಯಾಗಿ ಉಡುಪಿ ಜಿಲ್ಲೆಯ ಹಿರಿಯಡ್ಕದ ಮಹಾಲಸಾ ನಾರಾಯಣ ದೇವಸ್ಥಾನ, ಬೆಳ್ಮಣ್ ಎಂಬಲ್ಲಿನ ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನ, ಕಾರ್ಕಳದ ಮಿಯ್ಯಾರುವಿನ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿರ್ವಾ ಪಿಲಾರುಕಾನಿನ ಮಹಾಲಿಂಗೇಶ್ವರ ದೇವಸ್ಥಾನ, ತುಮಕೂರು ಜಿಲ್ಲೆಯ ಶನೇಶ್ವರ ದೇವಸ್ಥಾನ, ತುಮಕೂರು ರಂಗನಾಥ ಸ್ವಾಮೀ ದೇವಸ್ಥಾನ, ತುಮಕೂರು ಅಹೋಬಲ ನರಸಿಂಹ ದೇವಸ್ಥಾನದಲಿ ತಮ್ಮ ಕೈಚಳಕ ತೋರಿಸಿ ಅಪಾರ ಪ್ರಮಾಣದ ನಗ ನಗದನ್ನು ಕಳವು ಮಾಡಿದ್ದರು.

ಆರೋಪಿಗಳ ಪೈಕಿ ನರಸಿಂಹರಾಜು ನಟೋರಿಯಸ್ ಕಳ್ಳನಾಗಿದ್ದು ಬೆಂಗಳೂರಿನಲ್ಲಿ ಈತನ ಬಗ್ಗೆ ಪ್ರಕರಣಗಳಿದೆ ಎನ್ನಲಾಗಿದೆ. ಉಳಿದಂತೆ ಎಲ್ಲಾ ಆರೋಪಿಗಳು ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬೇಕಾಗಿರುವ ಕಳ್ಳತನ ಪ್ರಕರಣದ ಆರೋಪಿಗಳು.

ಉಡುಪಿ ಜಿಲ್ಲೆಯಲ್ಲಿ ನಡೆದ 16 ದೇವಸ್ಥಾನ ಕಳ್ಳತನಗಳ ಪೈಕಿ 6 ಪ್ರಕರಣಗಳು ಪರಿಹಾರಗೊಂಡಿದ್ದು ಉಳಿದ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಣ್ಣಾಮಲೈ ಅವರು ಇದೇ ಸಂದರ್ಭ ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಉಡುಪಿ ಡಿಸಿಐಬಿ ಇನ್ಸ್ಪೆಕ್ಟರ್ ಟಿ.ಆರ್. ಜೈಶಂಕರ್, ಎ.ಎಸ್ಸೈ. ರೋಸಾರಿಯೋ ಡಿಸೋಜಾ ಸಿಬ್ಬಂದಿಗಳಾದ ರವಿಚಂದ್ರ, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸಂತೋಷ್ ಕುಂದರ್, ರಾಘವೇಂದ್ರ ಉಪ್ಪುಂದ, ಸುರೇಶ್, ಪ್ರವೀಣ್, ಶಿವಾನಂದ ಪೂಜಾರಿ, ದಯಾನಂದ ಪ್ರಭು, ರಾಜಕುಮಾರ್ ಬೈಂದೂರು, ಪೊಲೀಸ್ ಅಧೀಕ್ಷಕ ಕಛೇರಿಯ ಶಿವಾನಂದ, ನಿತಿನ್, ದಿನೇಶ್, ವಾಹನ ಚಾಲಕರಾದ ನವೀನ್ಚಂದ್ರ ಹಾಗೂ ರಾಘವೇಂದ್ರ ಭಾಗಿಯಾಗಿದ್ದರು.

Write A Comment