ಮಂಗಳೂರು, ಅ.29: ಅತ್ತಾವರದಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಅರೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 15 ಆರೋಪಿಗಳ ಪೈಕಿ 13 ಮಂದಿಗೆ ಬುಧವಾರ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಅತ್ತಾವರದ ಈಝಿ ಡೇ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಮಳಿಗೆಯ ವ್ಯವಸ್ಥಾಪಕ ಶಾಕೀರ್ ಎಂಬಾತ ಕಾರಿನಲ್ಲಿ ಹೋಗುತ್ತಿದ್ದಾಗ ಅತ್ತಾವರ ನಂದಿಗುಡ್ಡೆ ಬಳಿ ಅಡ್ಡಗಟ್ಟಿದ ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದನೆಂದು ಆರೋಪಿಸಿ ಶಾಕೀರ್‌ನನ್ನು ಅರೆನಗ್ನಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದರು.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 16 ಮಂದಿಯನ್ನು ಬಂಧಿಸಿದ್ದರು. ಈ ಪೈಕಿ 13 ಮಂದಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಓರ್ವ ಆರೋಪಿ ಈ ಮೊದಲು ಬಿಡುಗಡೆಗೊಂಡಿದ್ದನು. ಇನ್ನಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕಳೆದ ಸಪ್ಟೆಂಬರ್‌ನಲ್ಲಿ ಬಂಧಿತರಾಗಿದ್ದ ಇನ್ನುಳಿದ ಇಬ್ಬರು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದು ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ. ಇಬ್ಬರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಕೆಲವು ದಿನಗಳ ಹಿಂದೆ ಜಾಮೀನು ನೀಡಿದ್ದು ಉಳಿದವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್‍ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಬಂಧಿತರ ಪೈಕಿ ಓರ್ವ ಈ ಹಿಂದೆಯೇ ಬಿಡುಗಡೆಗೊಂಡಿದ್ದ. ಆರೋಪಿಗಳ ಸೂಕ್ತ ವ್ಯವಸ್ಥೆಗಾಗಿ ಬಳ್ಳಾರಿಯಿಂದ ಉಡುಪಿಗೆ ಸ್ಥಳಾಂತರಿಸುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು.
ಮಂಗಳೂರು ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಶಾಕೀರ್ ನನ್ನನ್ನು ನಂಬಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಳು.
