ಕುಂದಾಪುರ: ತಮ್ಮ ಖರ್ಚಿಗೆ ಹಣಬೇಕೆಂಬ ಕಾರಣಕ್ಕಾಗಿ ಜಿಂಕೆ ಕೊಂಬು ಡೀಲಿಂಗ್ ಮಾಡಲು ಹೊರಟು ಪೊಲೀಸರ ಕೈಗೆ ಸಿಕ್ಕು ಜೈಲು ಕಂಬಿ ಹಿಂದೆ ನಾಲ್ವರು ವಿದ್ಯಾರ್ಥಿಗಳು ಹೋಗಿದ್ದಾರೆ. ಕುಂದಾಪುರ ತಾಲೂಕಿನ ತಲ್ಲೂರು ಸಮೀಪ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ರೆಡ್ ಹ್ಯಾಂಡ್ ಆಗಿ ನಾಲ್ವರನ್ನು ಸೆರೆಹಿಡಿದಿದ್ದು ಓರ್ವ ಆರೋಪಿಗಾಗಿ ಶೋಧ ನಡೆಯುತ್ತಿದೆ.
ಕುಂದಾಪುರ ನಗರದ ಹೊರವಲಯದ ಕಾಲೇಜೊಂದರಲ್ಲಿ ಪದವಿ ವಿದ್ಯಾರ್ಥಿಗಳಾದ ಗಣೇಶ್ ಗುಲ್ವಾಡಿ, ರಂಜಿತ್ ತಲ್ಲೂರು, ಪ್ರಕಾಶ ಪಿಂಗಾಣಿಗುಡ್ಡೆ, ಮಿಥುನ್ ಕೋಣಿ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಭರತ ಪರಾರಿಯಾಗಿದ್ದಾನೆ.
ಜಿಂಕೆ ಕೊಂಬುಗಳು ಕಾಡಿನಲ್ಲಿ ಈ ಆರೋಪಿಗಳಿಗೆ ಸಿಕ್ಕಿದೆಯೆಂಬ ಮಾತುಗಳು ಕೇಳಿಬರುತ್ತಿದ್ದು ಅದ್ಯೇಗೆ ಇವರಿಗೆ ದೊರೆಯಿತು? ವಿದ್ಯಾರ್ಥಿಗಳಿಗೆ ಕಾಡಲ್ಲೇನು ಕೆಲಸ? ಜಿಂಕೆ ಕೊಂಬು ಡೀಲ್ ನಡೆಸಲು ಇವರ ಬೆನ್ನ ಹಿಂದೆ ಇರುವ ಕಾಣದ ಕೈಗಳ್ಯಾರು? ಇವರಿಗೆ ಧೈರ್ಯಕೊಟ್ಟು ಉಪಾಯ ಹೇಳಿಕೊಟ್ಟವರ್ಯಾರು ಎಂಬುದು ಮಾತ್ರ ಬೆಳಕಿಗೆ ಬಂದಿಲ್ಲ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


