ಮಂಗಳೂರು, ಅ.25:ಜಯ ಕರ್ನಾಟಕ ಸಂಘಟನೆ ವತಿಯಿಂದ ನಗರದ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಶನಿವಾರ “ಜಯ ಕರ್ನಾಟಕ ಯುವ ಸಮ್ಮಿಲನ” ಕಾರ್ಯಕ್ರಮ ಜರಗಿತು. ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಸನ್ಹೆಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ವಿರುದ್ಧ ದ.ಕ. ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಂಘಟನೆ ಹೋರಾಟ ನಡೆಸಲಿದೆ ಎಂದು ಹೇಳಿದ ಮುತ್ತಪ್ಪ ರೈ, ಯಾವುದೇ ಕೆಲಸ ಆಗಬೇಕಾದರೆ ಜನರು ಕಷ್ಟದಿಂದ ಸಂಪಾದಿಸಿದ ಹಣವನ್ನು ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ನೀಡಬೇಕಾದ ಪರಿಸ್ಥಿತಿಯಿದೆ. ಇಂತಹ ಪರಿಸ್ಥಿತಿಯನ್ನು ಕೊನೆಗಾಣಿಸಬೇಕು ಎಂದು ಮುತ್ತಪ್ಪ ರೈ ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು.
ರಾಜ್ಯದ ಎಲ್ಲ ಬೃಹತ್ ಉದ್ಯಮಗಳಲ್ಲಿ ಕನ್ನಡಿಗರನ್ನು ನೇಮಕ ಮಾಡುವ ಕಾರ್ಯ ನಡೆಯುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಆಗ್ರಹಿಸಿ ಇದೇ ಸಂದರ್ಭ ಸಂಘಟನೆ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಳಿಕ ಯುವ ಘಟಕದ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್, ರಾಜ್ಯ ಯುವ ಘಟಕ ಅಧ್ಯಕ್ಷ ಕೆ.ಎನ್. ಜಗದೀಶ್, ದ.ಕ. ಜಿಲ್ಲಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ನ ಅಧ್ಯಕ್ಷ ರಾಕೇಶ್ ಮಲ್ಲಿ, ಯುವ ಘಟಕದ ದ.ಕ. ಜಿಲ್ಲಾಧ್ಯಕ್ಷ ಸಹಜ್ ಜೆ. ರೈ, ಉಡುಪಿ ಜಿಲ್ಲಾಧ್ಯಕ್ಷ ದಿವಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.








