ಮಂಗಳೂರು,ಅ.23: ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ನವೀಕರಣದ ರಜತ ಮಹೋತ್ಸವದ ಸಂಭ್ರಮದೊಂದಿಗೆ ಹಮ್ಮಿಕೊಂಡಿರುವ ಪ್ರಖ್ಯಾತ ಮಂಗಳೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ ಶ್ರೀ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಗುರುವಾರ ಸಂಜೆ ಸಂಭ್ರಮ ಸಡಗರದೊಂದಿಗೆ ಬಹಳ ವೈಭವದಿಂದ ಜರಗಿತು.
ಈ ಬಾರಿಯ ದಸರಾ ಮಹೋತ್ಸವವನ್ನು ನಿವೃತ್ತ ದಲಿತ ಶಿಕ್ಷಕಿ ಸರಸ್ವತಿ ಮಂಜಪ್ಪ ಉಳ್ಳಾಲ್ ಅವರು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಉದ್ಘಾಟನೆಯ ಬಳಿಕ ಶಿಕ್ಷಕಿ ಸರಸ್ವತಿ ಮಂಜಪ್ಪ ಉಳ್ಳಾಲ್ ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಬಾರಿ ಶ್ರೀ ಕ್ಷೇತ್ರದ ನವೀಕರಣದ ರಜತ ಮಹೋತ್ಸವದ ಜೊತೆಗೆ ಮಂಗಳೂರು ದಸರಾದ ಬೆಳ್ಳಿಹಬ್ಬವನ್ನು ಬಹಳ ಅದ್ಧೂರಿ ಹಾಗೂ ವೈಭವಯುತವಾಗಿ ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜನಾರ್ದನ ಪೂಜಾರಿಯವರು, ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿರುವ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸಂದೇಶ ವಿಶ್ವಮಾನ್ಯವಾಗಿದೆ. ಇದು ಏಕತೆಯ ಸಂದೇಶ ನಮ್ಮೆಲ್ಲರ ಶಕ್ತಿ. ಎಲ್ಲರೂ ದೇವರ ಮಕ್ಕಳು ಎಂಬ ದೊಡ್ಡ ಸಿದ್ದಾಂತವನ್ನಿಟ್ಟುಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಧ್ಯೇಯದಂತೆ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ದಲಿತ ಸಮಾಜಕ್ಕೆ ಸೇರಿದ ನಿವೃತ್ತ ಶಿಕ್ಷಕಿಯೊಬ್ಬರಿಂದ ಉದ್ಘಾಟನೆಗೊಳಿಸಿದ್ದೇವೆ ಎಂದು ಹೇಳಿದರು.
ಈ ಬಾರಿಯ ದಸರಾ ಉದ್ಘಾಟನೆ ಸರಸ್ವತಿ ಅಮ್ಮ ಮಾಡಿದ್ದಲ್ಲ, ಬ್ರಹ್ಮಶ್ರೀ ನಾರಾಯಣಗುರು ಅವರೇ ಉದ್ಘಾಟಿಸಿದ್ದು. ಇಂದಿನ ಉದ್ಘಾಟನೆಯಿಂದಾಗಿ ನಾರಾಯಣಗುರು ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ” ಎಂದು ಹೇಳಿದರು. ಮೈಸೂರು ದಸರಾಕ್ಕೆ ಸಾಮಾನ್ಯ ರೈತರೊಬ್ಬರು ಚಾಲನೆ ನೀಡಿದರು. ಅದೇ ರೀತಿ ಮುಂದಿನ ಬಾರಿ ಮೈಸೂರು ದಸರಾವನ್ನು ದಲಿತರೊಬ್ಬರು ಉದ್ಘಾಟಿಸುವ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಾಡಬೇಕು. ಯಾವ ಜಿಲ್ಲೆಗಳಲ್ಲಿ ಯಾರು ದಲಿತರನ್ನು ದೇವಸ್ಥಾನಗಳಿಗೆ ಹೋಗಲು ಬಿಡುವುದಿಲ್ಲವೋ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪೂಜಾರಿ ಸಲಹೆ ನೀಡಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೋ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಮುಖ್ಯ ಅತಿಥಿಗಳಾಗಿದ್ದರು.
ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಸ್ವಾಗತಿಸಿದರು. ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಟ್ರಸ್ಟಿಗಳಾದ ಬಿ.ಕೆ.ತಾರನಾಥ್, ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಹರಿಕೃಷ್ಣ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.

