ಉಡುಪಿ: ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಹಾಗೂ ಕ್ಯಾಂಟರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಗ್ಯಾಸ್ ಲಾರಿ ಚಾಲಕ ಮೃತಪಟ್ಟು ಕ್ಯಾಂಟರ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯಲ್ಲಿ ಗುರುವಾರ ರಾತ್ರಿ ವೇಳೆ ಸಂಭವಿಸಿದೆ.
ಗುರುವಾರ ರಾತ್ರಿ ಕಿನ್ನಿಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸ್ವಾಗತ ಗೋಪುರದ ಸಮೀಪ ಈ ಅಪಘಾತ ಸಂಭವಿಸಿದ್ದು ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಚಾಲಕ ಅಂಕೋಲದ ನಾಗರಾಜ್ (40) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದು ಕ್ಯಾಂಟರ್ ಚಾಲಕ ರವಿ ಗಂಭೀರ ಗಾಯಗೊಂಡಿದ್ದು, ಇವರು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಯಾಂಟರ್ ಲಾರಿ ಮಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದು ಕಾರಾವಾರದಿಂದ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಬರುತ್ತಿದ್ದ ಎಚ್.ಪಿ. ಕಂಪೆನಿಯ ಲಾರಿ ಮುಖಾಮುಖಿಯಾಗಿ ಡಿಕ್ಕಿಯಾದ ರಭಸಕ್ಕೆ ಎರಡೂ ಲಾರಿಗಳ ಮುಂಭಾಗ ನಜ್ಜುಗುಜ್ಜಗಿದ್ದು ಒಂದು ತಾಸಿಗೂ ಅಧಿಕ ಕಾಲ ಸ್ಥಳದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಗ್ಯಾಸ್ ಸಿಲಿಂಡರ್ ಲಾರಿಯಲಿ ತುಂಬಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದರು.
ಉಡುಪಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








