ಉಡುಪಿ: ಉಡುಪಿಯ ಯುವಕರ ತಂಡವೊಂದು “ನೆರಳು- ನೆರವು ನಿಧಿ ಸಂಗ್ರಹ ಅಭಿಯಾನ’ದಡಿ ಸಂಗ್ರಹಿಸಿದ 1,78,150 ಲ. ರೂ. ದೇಣಿಗೆಯ ಚೆಕ್ಕನ್ನು ಸಾಲು ಮರದ ತಿಮ್ಮಕ್ಕನಿಗೆ ಉಡುಪಿ ಪ್ರಸ್ಕ್ಲಬ್ನಲ್ಲಿ ಹಸ್ತಾಂತರಿಸಿದರು.
ಉಡುಪಿಯ ಖಾಸಗಿ ಚಾನೆಲ್ನ ನಿರೂಪಕ ಅವಿನಾಶ್ ಕಾಮತ್ ನೇತೃತ್ವದ ಯುವಕರ ತಂಡ ಅಭಿಯಾನ ನಡೆಸಿದ್ದು ಒಟ್ಟು 2,11,150 ರೂ. ಹಣ ಸಂಗ್ರಹವಾಗಿದೆ.
ಫೇಸ್ಬುಕ್, ವಾಟ್ಸ್ಆ್ಯಪ್ ಮೂಲಕವೂ ಮಾಹಿತಿ ನೀಡಿದ್ದರು. ಫೇಸ್ಬುಕ್ನಲ್ಲಿ ತಿಮ್ಮಕ್ಕನ ಅಕೌಂಟ್ ಸಂಖ್ಯೆ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದವರು ಅವರ ಅಕೌಂಟಿಗೆ ಹಣ ಜಮೆ ಮಾಡಿದ್ದರು. ಅಕೌಂಟಿನಲ್ಲಿ 33 ಸಾವಿರ ರೂ. ಜಮೆಯಾಗಿತ್ತು. ಅಭಿಯಾನದಲ್ಲಿ ಒಟ್ಟು 1,78,150 ರೂ. ಸಂಗ್ರಹ ಮಾಡಲಾಗಿತ್ತು. ಹೀಗೆ ಒಟ್ಟು 2,11,150 ರೂ. ಹಣ ತಿಮ್ಮಕ್ಕನಿಗೆ ನೆರಳು-ನೆರವು ತಂಡ ಸಂದಾಯ ಮಾಡಿದೆ.
ಇದೇ ಸಂದರ್ಭ ತಿಮ್ಮಕ್ಕ ಮಾತನಾಡಿ, ಮಕ್ಕಳಿಲ್ಲದ ಕಾರಣ ಗಿಡಗಳನ್ನು ನೆಟ್ಟು ಮರ ಬೆಳೆಸುವ ಹಾಗೂ ಈ ಮೂಲಕ ಮಕ್ಕಳಿಲ್ಲದ ನೋವು ಮರೆಯುವ ಯೋಚನೆ ನನ್ನ ಮನಸ್ಸಿನಲ್ಲಿ ಮೂಡಿತ್ತು. ಮರಗಳಲ್ಲಿ ನಾನು ನನ್ನ ಮಕ್ಕಳನ್ನು ಕಾಣುತ್ತಿದ್ದೇನೆ. ನಾನು ನೆಟ್ಟ ಮರಗಳು ಉತ್ತಮವಾಗಿ ಬೆಳೆದು ನಿಂತಿವೆ. ಸರಿಸುಮಾರು ಸಾವಿರದಷ್ಟು ಮರಗಳು ಬೆಳೆದಿವೆ ಎಂದರು. ಮರಗಳನ್ನು ಬೆಳೆಸಲು ಸರಕಾರ ಏನೇನೂ ಸಹಾಯ ನೀಡುತ್ತಿಲ್ಲ. ಹಣವಿಲ್ಲದೆ ಜೀವನ ಕಷ್ಟ.
ತಿಮ್ಮಕ್ಕನ ಸಾಕುಮಗ ಉಮೇಶ್, ಪತ್ರಕರ್ತ ರವೀಂದ್ರ ದೇಶ್ಮುಖ್, ನೆರಳು-ನೆರವು ತಂಡದ ಉರಗತಜ್ಞ ಗುರುರಾಜ್ ಸನಿಲ್, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.




