ಮಂಗಳೂರು, ಅ.20: ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರೂ ಅವರ 125ನೆ ಜನ್ಮದಿನಾಚರಣೆ ಅಂಗವಾಗಿ ನ.14 ಮತ್ತು 15ರಂದು ಮಂಗಳೂರಿನ ಪಿಲಿಕುಳದಲ್ಲಿ ವಿಶೇಷ ರೀತಿಯ ಮಕ್ಕಳ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ನ.14ರ ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ರಮ್ಯ ಪ್ರಕೃತಿಯ ತಾಣದಲ್ಲಿ ಮಕ್ಕಳಿಗಾಗಿ ಹಲವಾರು ರಚನಾತ್ಮಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಕ್ರಿಯಾತ್ಮಕ ಕಲೆ, ಜಾದೂ, ತ್ಯಾಜ್ಯ ವಸ್ತುಗಳಿಂದ ಮಾದರಿ ಕಲಾತ್ಮಕ ಕಲಾಕೃತಿಗಳ ರಚನೆ, ಗೂಡುದೀಪ ರಚನೆ, ಬಿದಿರಿನ ಮಾದರಿಗಳ ರಚನೆ ಇತ್ಯಾದಿಗಳನ್ನು ಆಯೋಜಿಸಲಾಗಿದೆ ಎಂದು ಸ್ವರೂಪ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ಸಭೆಗೆ ತಿಳಿಸಿದರು.
2ರಿಂದ 5 ವರ್ಷದೊಳಗಿನ ಪುಟಾಣಿಗಳಿಗಾಗಿ ಲೂಟ್ ಮಾಡಿ ಎಂಜಾಯ್ ಮಾಡಿ ಎನ್ನುವ ಹೆಸರಿನ ವಿಶೇಷ ಕಾರ್ಯಕ್ರಮವನ್ನು ಮಕ್ಕಳನ್ನು ಆಕರ್ಷಿಸಲು ಹಮ್ಮಿಕೊಳ್ಳಲಾಗಿದೆ. ಕಡಲೆಕಾಯಿ, ಚಾಕಲೇಟ್, ಬಿಸ್ಕೆಟ್ ಮುಂತಾದ ಮಕ್ಕಳಿಗೆ ಪ್ರಿಯವಾದ ತಿನಿಸುಗಳನ್ನು ರಾಶಿರಾಶಿ ಹಾಕಿ ಮಕ್ಕಳನ್ನು ಅಲ್ಲಿ ಬಿಡಲಾಗುವುದು. ಈ ರಾಶಿಗಳಿಂದ ಮಕ್ಕಳು ತಮಗೆ ಸಾಧ್ಯವಾದಷ್ಟನ್ನು ಎತ್ತಿಕೊಂಡು ಹೋಗಬಹುದು.
ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರ ನಾಯಕರ ವೇಷ ಪ್ರದರ್ಶನ, ಜಾನಪದ, ರಾಷ್ಟ್ರ ಗೀತೆಗಳ ಗಾಯನ, ನಾಟಕ, ಡೊಳ್ಳು ಕುಣಿತ, ಮೈಮ್ಶೋ, ಅನುಕರಣೆ ಇತ್ಯಾದಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮ ಭಾಗವಹಿಸಿದ್ದರು.
