ಕನ್ನಡ ವಾರ್ತೆಗಳು

ಸ್ವ-ಸಹಾಯ ಗುಂಪುಗಳಲ್ಲಿ ಭಾರೀ ಗೋಲ್‌ಮಾಲ್ : ಪೋರ್ಜರಿ ಸಹಿ ಬಳಸಿ ಲಕ್ಷಾಂತರ ರೂ. ಸಾಲ

Pinterest LinkedIn Tumblr

Navodaya_Golmal-Meet

ಮೂಡುಬಿದಿರೆ,ಅ.7: ಇರುವೈಲ್ ವ್ಯಾಪ್ತಿಯಲ್ಲಿರುವ ನವೋದಯ ಚಾರಿಟೇಬಲ್ ಟ್ರಸ್ಟ್‌ನ ಕೆಲವು ಸ್ವ-ಸಹಾಯ ಗುಂಪುಗಳ ಸದಸ್ಯರು ಲೋನ್ ತೆಗೆಯದಿದ್ದರೂ ಅವರ ಹೆಸರಿನಲ್ಲಿ ಹೊಸಬೆಟ್ಟು ಸಹಕಾರಿ ಸಂಘದಲ್ಲಿ ಚೆಕ್‌ಗೆ ಪೋರ್ಜರಿಯಾಗಿ ಸಹಿ ಬಳಸಿ ಲಕ್ಷಾಂತರ ರೂ. ಸಾಲ ತೆಗೆಯಲಾಗಿದ್ದು, ಭಾರೀ ಗೋಲ್‌ಮಾಲ್ ನಡೆದಿದೆ ಎಂದು ಸಂತ್ರಸ್ತರು ಇರುವೈಲ್‌ನಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ಇರುವೈಲ್‌ನಲ್ಲಿ ಪ್ರಾರಂಭಗೊಂಡ ನವೋದಯದ 4 ಸ್ವ-ಸಹಾಯ ಗುಂಪುಗಳಾದ ಶ್ರೀನಿಧಿ, ಅಂಬಿಕಾ, ಸಾಯಿದುರ್ಗಾ ಮತ್ತು ಭ್ರಮರಂಭ ಎಂಬ ಗುಂಪಿನಲ್ಲಿ ಸಾಲದ ವ್ಯವಹಾರದಲ್ಲಿ ಗೋಲ್‌ಮಾಲ್ ನಡೆದಿದ್ದು, ತಮ್ಮ ಗಮನಕ್ಕೆ ಬಾರದೆ ತಮಗೆ ಬ್ಯಾಂಕಿನಲ್ಲಿ ಲೋನ್ ಪಾಸ್ ಆಗಿರುವುದರ ಬಗ್ಗೆ ಸದಸ್ಯರು ಇದೀಗ ಅರಿತು, ಕಂಗೆಟ್ಟಿದ್ದು, ನ್ಯಾಯ ಸಿಗದಿದ್ದರೆ ಹೊಸಬೆಟ್ಟು ಸಹಕಾರಿ ಸಂಘದ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಅಂಬಿಕಾ ಗುಂಪಿನ ವಿಶ್ವನಾಥ ಎಂಬವರ ಹೆಸರಿನಲ್ಲಿ 65,000 ರೂ. ಸಾಲ ಹಾಗೂ ಅವರ ಪತ್ನಿ ಭ್ರಮರಂಭ ಗುಂಪಿನ ಸದಸ್ಯೆ ಧನಲಕ್ಷ್ಮೀ ಎಂಬವರ ಹೆಸರಿನಲ್ಲಿ 50,000 ರೂ. ಸಾಯಿದುರ್ಗಾದ ಸಂದೀಪ್ ಎಂಬವರ ಹೆಸರಿನಲ್ಲಿ 30,000 ರೂ. ಉಗ್ಗಪ್ಪ ಎಂಬವರ ಹೆಸರಿನಲ್ಲಿ 60,000 ರೂ. ಯಮುನಾ ಎಂಬರಿಗೆ 40,000 ರೂ. ಅಂಬಿಕಾ ಗುಂಪಿನಲ್ಲಿದ್ದ ಎರಡೂವರೆ ವರ್ಷಗಳ ಹಿಂದೆ ಗುಂಪು ತ್ಯಜಿಸಿರುವ ರಂಜಿತ್ ಕುಮಾರ್‌ಗೆ 95,000 ರೂ. ಸಂಜೀವ ಎಂಬವರಿಗೆ 60,000 ರೂ. ಮದುವೆಯಾಗಿ ಬೇರೊಂದು ಊರಿಗೆ ಹೋಗಿರುವ ಅಲ್ಲದೆ ಸ್ವಸಹಾಯ ಗುಂಪಿನಲ್ಲಿ ಇಲ್ಲದ ಪೂರ್ಣಿಮಾ ಎಂಬವರ ಹೆಸರಿನಲ್ಲಿ 40,000 ರೂ. ಸಹಿತ ಇನ್ನೂ ಹಲವು ಸದಸ್ಯರ ಹೆಸರುಗಳಲ್ಲಿ ಒಟ್ಟು 12 ಲಕ್ಷ ರೂ. ಬ್ಯಾಂಕ್‌ನಿಂದ ಸಾಲ ತೆಗೆಯಲಾಗಿದ್ದು, ಗುಂಪಿನ ಶಕೀಲಾ ಎಂಬವರು ಸದಸ್ಯರ ಸಹಿಗಳನ್ನು ಪೋರ್ಜರಿಯಾಗಿ ಹಾಕಿ ಹಣ ಡ್ರಾ ಮಾಡಿಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ತಮ್ಮ ಮೇಲೆ ಬ್ಯಾಂಕಿನಲ್ಲಿ ಲೋನ್ ಇದೆ ಎಂದು ಗುಂಪಿನ ಸದಸ್ಯರ ಗಮನಕ್ಕೆ ಬಂದಿರುವುದು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅದೂ ಸಹಕಾರಿ ಬ್ಯಾಂಕಿನ ಡೈರೆಕ್ಟರ್ ರಾಜೇಶ್ ಪೂಜಾರಿ ಮೊಬೈಲ್ ಕರೆ ಮಾಡಿ ಸದಸ್ಯರಿಗೆ ತಿಳಿಸಿದಾಗಲೇ. ಈ ಬಗ್ಗೆ ನವೋದಯ ಚಾರಿಟೇಬಲ್ ಟ್ರಸ್ಟ್‌ಗೆ, ಬ್ಯಾಂಕಿನ ಅಧ್ಯಕ್ಷರಿಗೆ, ಮೆನೇಜರ್ ಅವರ ಗಮನಕ್ಕೆ ತಂದು ತನಿಖೆ ನಡೆಸಿದಾಗ ಸದಸ್ಯರ ಹೆಸರಿನಲ್ಲಿ ಲೋನ್ ತೆಗೆದಿರುವುದು ತಿಳಿದು ಬಂದಿದೆ.

ಈ ಎಲ್ಲಾ ಗೋಲ್‌ಮಾಲ್‌ನಲ್ಲಿ ಗುಂಪಿನ ಸದಸ್ಯೆ, ಬ್ಯಾಂಕಿನ ಮೆನೇಜರ್ ಮತ್ತು ಅಧ್ಯಕ್ಷರ ಕೈವಾಡವಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಇರುವೈಲ್ ವ್ಯಾಪ್ತಿಯಲ್ಲಿ ಸುಮಾರು 71 ಗುಂಪುಗಳಿದ್ದು, ಇವುಗಳಲ್ಲಿ ಇನ್ನೆಷ್ಟು ಗುಂಪುಗಳಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಸದಸ್ಯರು ತಿಳಿಸಿದ್ದಾರೆ.

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ತಮ್ಮ ಮೇಲೆ ಸಾಲ ಹೊರೆಯನ್ನು ಹೊರಿಸುವವರ ವಿರುದ್ಧ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದು ಸಂತ್ರಸ್ತರು ಎಚ್ಚರಿಸಿದ್ದಾರೆ.

ಈ ಸಂದರ್ಭ ಇರುವೈಲ್ ಪಂಚಾಯತ್‌ನ ಸದಸ್ಯ ವಲೇರಿಯನ್ ಕುಟಿನ್ಹ, ಭರತ್ ಶೆಟ್ಟಿ, ವಿಲ್ಫೆಡ್ ಮೆಂಡೋನ್ಸಾ, ಪ್ರಸಾದ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Write A Comment