ಮಂಗಳೂರು, ಅ.3: ಹಜ್ ಸಮಿತಿ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆ ಕೈಗೊಂಡಿದ್ದ ಹಜ್ಜಾಜ್‌ಗಳ 5ನೇ ಹಾಗೂ ಕೊನೆಯ ತಂಡ ಶುಕ್ರವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಜ್ಜಾಜ್‌ಗಳ ತಂಡವನ್ನು ಹಜ್ ನಿರ್ವಹಣಾ ಸಮಿತಿ ವತಿಯಿಂದ ಸ್ವಾಗತಿಸಿ, ವಿಮಾನ ನಿಲ್ದಾಣದಲ್ಲಿ ದು:ಅ ನೆರವೇರಿಸಲಾಯಿತು.
ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಗೂ ಯೆನೆಪೊಯ ಸಮೂಹ ಸಂಸ್ಥೆಯ ಮುಖ್ಯಸ್ಥ ವೈ.ಮುಹಮ್ಮದ್ ಕುಂಞಿ, ನಿರ್ವಹಣಾ ಸಮಿತಿ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್‌ನ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಹಾಜಿ ಪಿ.ಪಿ.ಮಜೀದ್, ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯಾದರ್ಶಿ ಹಾಜಿ ಹನೀಫ್, ಉಪಾಧ್ಯಕ್ಷ ಪುತ್ತು ಬಾವ, ದ.ಕ.ಜಿಲ್ಲಾ ಕೇಂದ್ರ ಮದ್ರಾಸ ಸಮಿತಿ ಅಧ್ಯಕ್ಷ ಹಾಜಿ ಐ. ಮೊಯ್ದಿನಬ್ಬ, ಎಸ್.ಕೆ.ಎಸ್ ಸದಸ್ಯ ಹಾಜಿ ರಿಯಾಜುದ್ಧೀನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶುಕ್ರವಾರ ಅಪರಾಹ್ನ 3:20ಕ್ಕೆ ಆಗಮಿಸಿದ ವಿಮಾನದಲ್ಲಿ 65 ಪುರುಷರು, 67 ಮಹಿಳೆ ಯರು ಹಾಗೂ ಇಬ್ಬರು ಮಕ್ಕಳ ಸಹಿತ 134 ಹಜ್ಜಾಜ್‌ಗಳಿದ್ದರು. ಹಜ್ ಸಮಿತಿ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಒಟ್ಟು 670 ಮಂದಿ ತೆರಳಿದ್ದರು.
ಹಜ್ ಯಾತ್ರೆ ಕೈಗೊಂಡಿದ್ದ ಹಜ್ಜಾಜ್‌ಗಳ ಪ್ರವಾಸಕ್ಕೆ ಅನುಕೂಲ ಕಲ್ಪಿಸುವಲ್ಲಿ ಹಜ್ ಸಮಿತಿಯು ಬಹಳಷ್ಟು ರೀತಿಯಲ್ಲಿ ಶ್ರಮಿಸಿದೆ ಎಂದು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಈ ಸಂದರ್ಭದಲ್ಲಿ ತಿಳಿಸಿದರು.
















