ಕನ್ನಡ ವಾರ್ತೆಗಳು

ಹೆಗ್ಗಡೆ ವಿರುದ್ಧ ಅಪಪ್ರಚಾರ : ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳಿಂದ ಬೃಹತ್ ಜನಜಾಗೃತಿ ಸಭೆ

Pinterest LinkedIn Tumblr

Belthangadi_Protest_1

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳವು ಸತ್ಯಧರ್ಮದ ಕ್ಷೇತ್ರವಾಗಿದೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇಶ ವಿದೇಶಗಳಲ್ಲಿ ಅನೇಕ ಮಹತ್ವದ ಕಾರ್ಯವನ್ನು ಮಾಡಿದ ಮಹಾನುಭಾವಿಯಾ ಗಿದ್ದಾರೆ. ಇಂತಹ ಕ್ಷೇತ್ರ ಹಾಗೂ ಪೀಠದ ವಿರುದ್ದ ಯೋಗ್ಯತೆ ಇಲ್ಲದಂತಹ ವ್ಯಕ್ತಿಗಳು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇಂತವರ ವಿರುದ್ದ ಧರ್ಮದ ಮೇಲೆ ನಂಬಿಕೆಯಿರುವವರು ಸತ್ಯದ ನೆಲೆಯಲ್ಲಿ ಬದುಕುತ್ತಿರುವವರು ಹೋರಾಟ ಪ್ರಾರಂಭಿಸಿದ್ದಾರೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಕೆಲವರು ಜನರನ್ನು ಹಾದಿ ತಪ್ಪಿಸುವರೀತಿಯಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಶ್ರೀಮಂಜುನಾಧ ಸ್ವಾಮಿಯ ಭಕ್ತಾಭಿಮಾನಿಗಳು ಬುಧವಾರ ಗುರುವಾಯನಕೆರೆಯಲ್ಲಿ ಆರೋಪ ಮಾಡುತ್ತಿರುವವರ ವಿರುದ್ಧ ನಡೆಸಿದ ಬೃಹತ್ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದು ಭಕ್ತಾಧಿಗಳ ಆಕ್ರೋಶ ಜ್ವಾಲಾಮುಖಿಯಾಗಿ ಹೊರಬಂದಿದೆ. ಅದು ಲಾವಾರಸವಾಗಿ ಹರಿಯಲು ಬಿಡಬೇಡಿ ಇಂತಹ ಆರೋಪಗಳನ್ನು ನಿಲ್ಲಿಸಬೇಕು ಇಲ್ಲದಿದ್ದರೆ ದುಷ್ಟರು ಧಮನವಾಗುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸ್ವಾಮೀಜಿ ಹೇಳಿದರು.

Belthangadi_Protest_2 Belthangadi_Protest_3 Belthangadi_Protest_4

ಬಲ್ಯೋಟ್ಟು ಕ್ಷೇತ್ರದ ವಿಖ್ಯಾನಂದ ಸ್ವಾಮೀಜಿ ಮಾತನಾಡಿ ಒಂದು ಧಾರ್ಮಿಕ ಕ್ಷೇತ್ರ ಹಾಗೂ ಒಂದು ಉನ್ನತ ಸ್ಥಾನದಲ್ಲಿರುವರ ಕುರಿತು ತಪ್ಪು ಸಂದೇಶಗಳನ್ನು ನೀಡುವುದು ಸರಿಯಲ್ಲ. ಸಮಾಜದಲ್ಲಿ ಅಶಾಂತಿ ಮೂಡಿಸುವುದರಿಂದ ಯಾವ ಸಾಧನೆಯನ್ನೂ ಮಾಡಲಾಗದು. ಕೆಲವರು ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದು ಇದಕ್ಕಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಆಕ್ರೋಶಗೊಂಡು ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಮುಂದೆ ಇಂತಹ ಕಾರ್ಯಗಳು ನಡೆದರೆ ಕಠಿಣ ಹೋರಾಟ ಮಾಡಬೇಕಾಗಬಹುದು ಎಂದು ಎಚ್ಚರಿಸಿದರು.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ಕೊಂಡಯೂರು ಶ್ರೀ ಯೋಗಾನಂದ ಸ್ವಾಮೀಜಿ,ಕನ್ಯಾನ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ ಬೆಂಬಲ ಸೂಚಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ್ ಆಳ್ವ ಮಾತನಾಡಿ ಪಾರದರ್ಶಕ ರೀತಿಯಲ್ಲಿ ವ್ಯವಹರಿಸುತ್ತಾ ಸಾರ್ವಜನಿಕರ ಸೇವೆ, ಸಮಾಜದ ಉದ್ದಾರಕ್ಕೆ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಜನರನ್ನು ದಿಕ್ಕುತಪ್ಪಿಸುವ ಕಾರ್ಯ ಕೆಲವರು ಮಾಡುತ್ತಿದ್ದು ಇಂತಹ ನೀಚ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಯಾಕೆ ನಿಯಂತ್ರಿಸುತ್ತಿಲ್ಲ. ಜನ ಬೀದಿಗಿಳಿದು ಹೋರಾಡುವ ಮುನ್ನ ಇಲಾಖೆ ಇವರನ್ನು ನಿಯಂತ್ರಿಸಬೇಕು.

ಕಳೆದ 48 ವರ್ಷಗಳಲ್ಲಿ ಡಾ| ಹೆಗ್ಗಡೆಯವರು ಜಾತಿ, ಭಾಷೆ, ಮತವನ್ನು ಬಿಟ್ಟು ಮಾಡಿದ ಸೇವೆಯನ್ನು ನಾನು ಅರಿತಿದ್ದೇನೆ. ಯಾರೇ ಆಗಲಿ ಹೆಗ್ಗಡೆಯವರ ವಿರುದ್ದ ಆರೋಪಿಸುತ್ತಿರುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದರು. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಮಾತನಾಡಿ ಸರಕಾರ ಮಾಡಂತಹ ಕೆಲಸವನ್ನು ಡಾ| ಹೆಗ್ಗಡೆಯವರು ಜನಜಾಗೃತಿ, ಧ. ಗ್ರಾ. ಯೋಜನೆ ಇನ್ನಿತರ ಕ್ಷೇತ್ರಗಳಲ್ಲಿ ಮಾಡಿದ್ದಾರೆ. ಇದನ್ನು ಸಹಿಸದೆ ಆರೋಪ ಹೋರಿಸುತ್ತಿದ್ದಾರೆ. ಕ್ಷೇತ್ರದ ಭಕ್ತರಿಗೆ ತಾಳ್ಮೆಗೆ ಮಿತಿಯಿದೆ. ಭಕ್ತರು ಆಕ್ರೋಶಗೊಂಡರೆ ಪರಿಸ್ಥಿತಿ ನೆಟ್ಟಗಿರದು ಎಂದು ಎಚ್ಚರಿಸಿದರು.

ಅಶೋಕ್ ಭಟ್ ಉಜಿರೆ, ಸಿಯೋನ್ ಆಶ್ರಮದ ಯು ಸಿ ಪೌಲೂಸ್, ಬಿ. ಎ. ರೆಹಮಾನ್ ಮುಂತಾದವರು ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತನಾಡಿದರು. ನಾಗರಿಕಾ ಸೇವಾ ಸಮಿತಿಯ ಅಧ್ಯಕ್ಷ ಕೇಶವ ಗೌಡ ಬೆಳಾಲು ಸ್ವಾಗತಿಸಿ, ಚಿಂತಕ ದಯಾನಂದ ಕತ್ತರ್ಸಾಲ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಪುತ್ತೂರು ಸಹಾಯಕ ಕಮಿಷನರ್ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಸಮಾವೇಶದ ಹಿನ್ನಲೆಯಲ್ಲಿ ಬಿಗು ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುರುವಾಯನಕೆರೆ ನಾಗರಿಕ ಸೇವಾಟ್ರಸ್ಟ್ ಕಚೇರಿಗೆ ಪೋಲೀಸ್ ರಕ್ಷಣೆಯನ್ನು ಒದಗಿಸಲಾಗಿತ್ತು.

Write A Comment