ಕನ್ನಡ ವಾರ್ತೆಗಳು

ಕರಾವಳಿ ಜಿಲ್ಲೆಯಾದ್ಯಂತ 11 ಟಾಕೀಸ್‌ಗಳಲ್ಲಿ ‘ಚಂಡಿಕೋರಿ’ ತುಳು ಚಲನ ಚಿತ್ರ ಬಿಡುಗಡೆ

Pinterest LinkedIn Tumblr

Chandikori_Film_Relise_1

ಮಂಗಳೂರು,ಸೆ.25 : ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾದ ಶರ್ಮಿಳಾ ಡಿ,ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ ನಿರ್ಮಾಣದ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಂಡಿಕೋರಿ ತುಳು ಚಲನಚಿತ್ರ ಶುಕ್ರವಾರ ಸುಚಿತ್ರ ಟಾಕೀಸ್‌ನಲ್ಲಿ ಬಿಡುಗಡೆಗೊಂಡಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಸಿನಿಮಾರಂಗಕ್ಕೆ ಈಗ ಪರ್ವಕಾಲ. ಅನೇಕ ತುಳು ಸಿನಿಮಾಗಳು ತಯಾರಾಗುತ್ತಿವೆ. ಜನರ ಅಭಿರುಚಿಗೆ ತಕ್ಕಂತೆ, ಸಮಾಜಕ್ಕೂ ಒಳ್ಳೆಯ ಸಂದೇಶ ಸಾರುವ ತುಳು ಸಿನಿಮಾಗಳು ಮೂಡಿಬರಲಿ. ಸೀಮಿತ ಮಾರುಕಟ್ಟೆಯ ತುಳು ಚಿತ್ರರಂಗದಲ್ಲಿ ತೆರೆಗೆ ಬರುವ ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ನೋಡುವಂತಾಗಲಿ ಎಂದು ರಮಾನಾಥ ರೈ ಶುಭ ಹಾರೈಸಿದರು.

Chandikori_Film_Relise_2 Chandikori_Film_Relise_3 Chandikori_Film_Relise_4

ಚಲನಚಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ನಿರ್ದೇಶಕ ದೇವದಾಸ್ ಕಾಪಿಕಾಡ್, ನಿರ್ಮಾಪಕರಾದ ಶರ್ಮಿಳಾ ಡಿ.ಕಾಪಿಕಾಡ್, ಸಚಿನ್ ಎ.ಎಸ್. ಉಪ್ಪಿನಂಗಡಿ, ಸುಂದರ ಗೌಡ, ಪಿ.ಎಲ್.ರವಿ, ಗೋಪಿನಾಥ್ ಭಟ್, ಸುರೇಂದ್ರ ಬಂಗೇರ, ಅರ್ಜುನ್ ಕಾಪಿಕಾಡ್, ಕರೀಷ್ಮಾ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಮಂಗೇಶ್ ಭಟ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

11 ಟಾಕೀಸ್‌ಗಳಲ್ಲಿ `ಚಂಡಿಕೋರಿ’

`ಚಂಡಿಕೋರಿ’ತುಳು ಚಲನಚಿತ್ರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲ ದಲ್ಲಿ ತೆರೆಕಂಡಿದೆ. ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿವಿ‌ಆರ್ ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿರೋಡ್‌ನಲ್ಲಿ ನಕ್ಷತ್ರ, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಕಾರ್ಕಳದಲ್ಲಿ ರಾಧಿಕಾ ಮತ್ತು ಸುರತ್ಕಲ್‌ನ ನಟರಾಜ್ ಚಿತ್ರ ಮಂದಿರದಲ್ಲಿ ಚಂಡಿಕೋರಿ ಪ್ರದರ್ಶನ ಕಾಣುತ್ತಿದೆ.

Chandikori_Film_Relise_5 Chandikori_Film_Relise_6 Chandikori_Film_Relise_7Chandikori_Film_Relise_9 Chandikori_Film_Relise_7 Chandikori_Film_Relise_8

ಚಂಡಿಕೋರಿ ಸಿನಿಮಾವು ಒಂದು ಭಿನ್ನ ಕಥೆ, ಉತ್ತಮ ಸಂದೇಶ ಮತ್ತು ಮೌಲ್ಯಗಳನ್ನು ಹೊತ್ತು ಬರಲಿದೆ. ಜತೆಗೆ ನವಿರಾದ ಪ್ರೇಮ ಕಥೆ, ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯವೂ ಇದೆ. ಸುಮಾರು 2 ತಾಸು 20 ನಿಮಿಷಗಳ ಈ ಸಿನಿಮಾವು ಪ್ರೇಕ್ಷಕರು ತಲೆದೂಗುವಷ್ಟು ಮನೋರಂಜನೆ ಯೊಂದಿಗೆ ತುಳುವಿನ ಮತ್ತೊಂದು ಸೂಪರ್ ಹಿಟ್ ಮತ್ತು ಶ್ರೇಷ್ಠ ಸಿನಿಮಾದ ಸಾಲಿಗೆ ಸೇರಲಿದೆ ಎಂದು ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದರು.

ಚಂಡಿಕೋರಿಯಲ್ಲಿ 4 ಉತ್ತಮ ಹಾಡುಗಳಿವೆ. ಅತ್ಯಂತ ವಿಶೇಷ ವೆಂದರೆ ಈ ಸಿನಿಮಾದಲ್ಲಿ ತಂದೆ – ಮಗ ಹಾಡಿದ್ದಾರೆ. ಅಂದರೆ, ಸಿನಿಮಾದ ನಾಯಕನೂ ಆಗಿರುವ ಅರ್ಜುನ್ ಕಾಪಿಕಾಡ್ ಮತ್ತು ದೇವದಾಸ್ ಕಾಪಿಕಾಡ್ ಅವರು ಹಾಡಿರುವ ಹಾಡುಗಳಿವೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿರುವ ಈ ಸಿನಿಮಾದಲ್ಲಿ ಅವರೂ ಒಂದು ಹಾಡು ಹಾಡಿದ್ದಾರೆ. ಮತ್ತೊಂದು ಹಾಡನ್ನು ಮಧು ಬಾಲಕೃಷ್ಣನ್ ಮತ್ತು ಅಪೂರ್ವ ಶ್ರೀಧರ್ ಹಾಡಿದ್ದಾರೆ.

ಅರ್ಜುನ್ ಕಾಪಿಕಾಡ್ ಚಿತ್ರದ ನಾಯಕರಾಗಿದ್ದು, ಕರಿಷ್ಮಾ ಅಮೀನ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ ಮುಂತಾದ ತುಳು ರಂಗಭೂಮಿ ಮತ್ತು ಸಿನಿಮಾ ರಂಗದ ಪ್ರಮುಖ ಕಲಾವಿದರು ನಟಿಸಿರುವುದು ಒಂದು ಪ್ಲಸ್ ಪಾಯಿಂಟ್.

ಕಣ್ಣಿಗೆ ಕಾಣುವ ದೇವರೆಂದರೆ ಹೆತ್ತವರು. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ಹೊಂದಿರುವ ಚಂಡಿಕೋರಿಯಲ್ಲಿ ತಾಳ್ಮೆಯ ಮಹತ್ವವನ್ನೂ ತಿಳಿಸಲಾಗಿದೆ.

ಉತ್ತಮ ಸಂದೇಶ ಮತ್ತು ಯಥೇಚ್ಛ ಮನೋರಂಜನೆ ನೀಡುವಲ್ಲಿ ಎತ್ತಿದ ಕೈಯಾಗಿರುವ ದೇವದಾಸ್ ಕಾಪಿಕಾಡ್ ಅವರ ತಂಡದಿಂದ ಸಿದ್ಧವಾಗಿರುವ ಚಂಡಿಕೋರಿ ಕೂಡ ಚಿತ್ರಪ್ರೇಮಿಗಳ ಮನ ಗೆದ್ದು ಯಶಸ್ಸು ಸಾಧಿಸುವ ನಿರೀಕ್ಷೆ ಇದೆ.

ತಾರಾಗಣದಲ್ಲಿ ಗೋಪಿನಾಥ ಭಟ್, ಚೇತನ್ ರೈ ಮಾಣಿ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಉಮೇಶ್ ಮಿಜಾರ್, ಪಾಂಡುರಂಗ, ರಿಚರ್ಡ್ ಪಿಂಟೋ, ರಾಘವೇಂದ್ರ ಕಾರಂತ, ಮಾಸ್ಟರ್ ಕೃತಿನ್, ಶರ್ಮಿಳಾ ಕಾಪಿಕಾಡ್, ಮನೀಷಾ, ಸರೋಜಿನಿ ಶೆಟ್ಟಿ, ಸುಜಾತ ಶಕ್ತಿನಗರ, ಸುಮಿತ್ರಾ ರೈ, ಲಾವಣ್ಯ ಬಂಗೇರ ಮೊದಲಾದವರಿದ್ದಾರೆ. ಛಾಯಾಗ್ರಹಣ ಪಿ.ಎಲ್.ರವಿ, ಸಂಕಲನ: ಸುಜೀತ್ ನಾಯಕ್. ನೃತ್ಯ:ಅಕುಲ್, ಸಾಹಸ:ಮಾಸ್‌ಮಾಧ. ನಿರ್ಮಾಣ ನಿರ್ವಹಣೆ: ರಾಜೇಶ್ ಕುಡ್ಲ, ಹಿನ್ನಲೆ ಸಂಗೀತ ಕದ್ರಿ ಮಣಿಕಾಂತ್. ಕಥೆ, ಚಿತ್ರಕಥೆ: ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ದೇವದಾಸ್ ಕಾಪಿಕಾಡ್ ಅವರದ್ದಾಗಿದೆ.

Write A Comment