ಕನ್ನಡ ವಾರ್ತೆಗಳು

ಲ್ಯಾನ್ಸಿ ಡಿಸೋಜ ಕೊಲೆ ಯತ್ನ ಪ್ರಕರಣ : ಬಂಧಿತ ಆರೋಪಿ ಚೋನಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆಗೆ ಚಿಂತನೆ : ಮುರುಗನ್

Pinterest LinkedIn Tumblr

police_comm_1

ಮಂಗಳೂರು, ಸೆ.22: ಉಳ್ಳಾಲ ಠಾಣೆ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಯತೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲ್ಯಾನ್ಸಿ ಡಿಸೋಜ ಎಂಬಾತನನ್ನು ಕೊಲೆಗೈಯಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಸ್. ಮುರುಗನ್ ತಿಳಿಸಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೋಪಿಗಳಾದ ಉಳ್ಳಾಲ ಬಸ್ ನಿಲ್ದಾಣ ಸಮೀಪದ ನಿವಾಸಿ ಚೋನಿ ಅಲಿಯಾಸ್ ಕೇಶವ ಪೂಜಾರಿ(25), ಉಳ್ಳಾಲ ಮೊಗವೀರಪಟ್ಣದ ಪ್ರಸಾದ್ ಅಲಿಯಾಸ್ ಪಚ್ಚು(24) ಮತ್ತು ಉಳ್ಳಾಲ ಕಾಫಿಕಾಡ್‌ನ ರಕ್ಷಿತ್ ಯಾನೆ ಡಿಕೆ(22) ಎಂಬವರನ್ನು ಬಿ.ಸಿ.ರೋಡ್‌ನ ಮೆಲ್ಕಾರ್‌ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

police_comm_3

ಆರೋಪಿಗಳು ಹಳೆ ವೈಷಮ್ಯದಿಂದ ಲ್ಯಾನ್ಸಿ ಡಿಸೋಜರ ಹತ್ಯೆಗೆ ಯತ್ನಿಸಿದ್ದಾರೆ ಎಂದವರು ತಿಳಿಸಿದ್ದಾರೆ.

2014ರ ಆಗಷ್ಟ್ ನಲ್ಲಿ ತೊಕ್ಕೊಟ್ಟು ಬಾರೊಂದರಲ್ಲಿ ಯತೀಶ್ ಪೂಜಾರಿಯನ್ನು ಉದಯ ಯಾನೆ ಉದಯರಾಜ್ ಮತ್ತು ಲಾನ್ಸಿ ಡಿಸೋಜಾ ಕೊಲೆ ನಡೆಸಿದ್ದಾಗಿ ದೂರು ದಾಖಲಾಗಿತ್ತು. ಈ ಕೊಲೆಗೆ ಪ್ರತೀಕಾರವಾಗಿ ಲ್ಯಾನ್ಸಿ ಡಿಸೋಜರನ್ನು ಸೆ.10ರಂದು ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ಗಂಭೀರ ಗಾಯಗೊಂಡ ಲಾನ್ಸಿ ಡಿಸೋಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೋನಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆ – ಪರಿಶೀಲನೆ:

ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಚೋನಿ ಯಾನೆ ಕೇಶವ ಪೂಜಾರಿ ವಿರುದ್ಧ ಒಟ್ಟು 5 ಪ್ರಕರಣ ದಾಖಲಾಗಿವೆ. 2011ರಲ್ಲಿ ಸೋಮೇಶ್ವರದ ಸಂದೀಪ್ ಶೆಟ್ಟಿ ಎಂಬಾತನ ಕೊಲೆ ಪ್ರಕರಣ, ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಲಾಳ್‌ಬಾಗ್‌ನಲ್ಲಿ ಉದ್ಯಮಿ ವಿಜಯೇಂದ್ರ ಭಟ್ ಎಂಬವರಿಗೆ ಶೂಟೌಟ್ ಮಾಡಿದ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸಿ.ರೋಡ್‌ನಲ್ಲಿ ನಡೆದ ಕೊಲೆಯತ್ನ, ಸೋಮೇಶ್ವರ ಬೀಚ್ ಬಳಿಯಲ್ಲಿ ನಡೆದ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು. ಆತನು ಗೂಂಡಾ ಕಾಯ್ದೆಯಡಿಯಲ್ಲಿ ಬಳ್ಳಾರಿ ಜೈಲ್‌ನಲ್ಲಿದ್ದು, 2015 ಜುಲೈಯಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು.

police_comm_4

ಚೋನಿ ಯಾನೆ ಕೇಶವ ಪೂಜಾರಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆಯನ್ನು ಹಾಕುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದವರು ತಿಳಿಸಿದರು.

ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೋರ್ವ ಆರೋಪಿ ಪ್ರಸಾದ್ ಯಾನೆ ಪಚ್ಚು ವಿರುದ್ಧ ಈ ಹಿಂದೆ ಮೂರು ಪ್ರಕರಣಗಳು ದಾಖಲಾಗಿತ್ತು. 2012ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರು ಎಂಬಾತನ ಕೊಲೆ ಪ್ರಕರಣ, 2014ರಲ್ಲಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಕೊಲೆಯತ್ನ ಪ್ರಕರಣಗಳು ಆತನ ಮೇಲೆ ದಾಖಲಾಗಿವೆ.

ಆರೋಪಿ ರಕ್ಷಿತ್ ಎಂಬಾತ 2015ರ ಜನವರಿಯಲ್ಲಿ ಕುಂಪಲದ ಮುಖೇಶ್ ಎಂಬಾತನ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಕಮಿಷನರ್ ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ಎಂ. ಶಾಂತರಾಜು ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಡಾ. ಸಂಜೀವ್ ಎಂ. ಪಾಟೀಲ್  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment