ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ : ಉತ್ತರ ನೀಡಿ ಕಾರ್ಯಕ್ರಮಕ್ಕೆ ಎಂಟು ಮಂದಿ ಜನಪ್ರತಿನಿಧಿಗಳ ಗೈರು – ತಡವಾಗಿ ಬಂದವರಿಂದ ತೃಪ್ತಿ ನೀಡದ ಉತ್ತರ

Pinterest LinkedIn Tumblr

Roshani_Nilaya_Meet_1

ಮಂಗಳೂರು, ಸೆ. 20: ಎತ್ತಿನಹೊಳೆ ಯೋಜನೆಯ ವಿರುದ್ಧ್ದ ಸಹ್ಯಾದ್ರಿ ಸಂಚಯ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಹೋರಾಟದ ಅಂಗವಾಗಿ ಇಂದು ನಗರದ ರೋಶನಿ ನಿಲಯದಲ್ಲಿ ಎತ್ತಿನಹೊಳೆ ಉತ್ತರ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾದ ಆರೋಗ್ಯ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊಯ್ದಿನ್‌ಬಾವ, ಎಸ್.ಅಂಗಾರ, ಕ್ಯಾ. ಗಣೇಶ್ ಕಾರ್ಣಿಕ್ ಸಮರ್ಪಕ ಉತ್ತರ ನೀಡಲು ವಿಫಲರಾದರು.

ರೋಶನಿ ನಿಲಯದಲ್ಲಿ ಆಯೋಜಿಸಲಾಗಿದ್ದ ಸಭೆಗೆ ಸುಮಾರು ಎರಡು ಗಂಟೆ ತಡವಾಗಿ ಬಂದ ಐವರು ಜನಪ್ರತಿನಿಧಿಗಳು ಎತ್ತಿನಹೊಳೆ ಯೋಜನೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ.

ಆರೋಗ್ಯ ಸಚಿವ ಯು.ಟಿ. ಖಾದರ್, ಎತ್ತಿನಹೊಳೆ ವಿಚಾರವಾಗಿ ಕೇಳಲಾದ ಹತ್ತು ಪ್ರಶ್ನೆಗಳಿಗೆ ಉತ್ತರ ನೀಡದೆ ಸಂಬಂಧಪಟ್ಟ ಇಲಾಖೆಯಿಂದ ಪ್ರಶ್ನೆಗೆ ಉತ್ತರಿಸಿದ್ದು, ಲಿಖಿತವಾಗಿರುವ ಉತ್ತರವನ್ನು ಸಭೆಗೆ ನೀಡಿದರು. ಆರಂಭದಲ್ಲಿ ತಾನು ತಾಂತ್ರಿಕ ಪರಿಣತನಲ್ಲ ಎಂದು ಮಾಹಿತಿ ನೀಡಿದ ಖಾದರ್, ಈ ಹೋರಾಟ ದಲ್ಲಿ ಜನಪ್ರತಿನಿಧಿ ಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದೆ ಹೋಗಬೇಕು ಎಂದು ಸಲಹೆ ನೀಡಿದರು.

ಎತ್ತಿನಹೊಳೆ ಯೋಜನೆಯಿಂದ ಕೋಲಾರದ ಭಾಗಕ್ಕೆ ನೀರು ಬರುವುದಿಲ್ಲ ಮತ್ತು ಹಣ ಪೋಲಾಗುತ್ತದೆ ಎಂಬ ಸಹ್ಯಾದ್ರಿ ಸಂಚಯದ ಕಾಳಜಿಯನ್ನು ಕೋಲಾರದ ಜನತೆಗೆ ನಾನು ತಿಳಿಸುತ್ತೇನೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲ್ಲ ಮಾಹಿತಿಗಳನ್ನು ಹಾಕುವಂತೆ ಸೂಚಿಸಲಾಗುವುದೆಂದು ಅವರು ಹೇಳಿದರು. ಈ ಬಗ್ಗೆ ಇರುವ ಎಲ್ಲಸಂಶಯಗಳನ್ನು ನಿವಾರಿಸಲು ನೀರಾವರಿ ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳ ಜೊತೆ ಸಮಗ್ರ ಚರ್ಚೆ ನಡೆಸುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

Roshani_Nilaya_Meet_2 Roshani_Nilaya_Meet_3 Roshani_Nilaya_Meet_4 Roshani_Nilaya_Meet_5 Roshani_Nilaya_Meet_6 Roshani_Nilaya_Meet_7

ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಎತ್ತಿನಹೊಳೆ ಯೋಜನೆಯ ಹೋರಾಟವನ್ನು ನಿಲ್ಲಿಸಬೇಡಿ. ಈ ಹೋರಾಟವನ್ನು ಮುಂದುವರಿಸಬೇಕು. ಹೋರಾಟಗಾರರಲ್ಲೂ ಸ್ಪಷ್ಟ ಗುರಿಯಿರಬೇಕು. ತಾನು ಕಾನೂನು ಹೋರಾಟಕ್ಕೂ ಬೆಂಬಲ ನೀಡುವುದಾಗಿ ತಿಳಿಸಿದರು.

ಶಾಸಕ ಬಿ.ಎ.ಮೊಯ್ದಿನ್ ಬಾವ ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಆಗುವ ಸಮಸ್ಯೆ ಬಗ್ಗೆ ಹೋರಾಟಗಾರರಿಗೆ ಇರುವ ನೋವು ನನ್ನಲ್ಲಿಯೂ ಇದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಜಿಲ್ಲೆಗೆ ಎದುರಾಗಿರುವ ಈ ಸಮಸ್ಯೆ ನಿವಾರಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಹ್ಯಾದ್ರಿ ಹೋರಾಟ ಸಮಿತಿಯ ಸುಂದರ್‌ರಾವ್, ಐಸಾಕ್‌ಪ್ರಿನ್ಸ್, ಯತಿರಾಜ್, ಸೋಮಶೇಖರ್, ದಿನೇಶ್ ಪೈ ,ಶಶಿಧರ್ ಶೆಟ್ಟಿ, ದಿನೇಶ್ ಹೊಳ್ಳ ಉಪಸ್ಥಿತರಿದ್ದರು.

ಎರಡು ಗಂಟೆ ತಡವಾಗಿ ಆಗಮಿಸಿದ ಜನಪ್ರತಿನಿಧಿಗಳು:

ಸಂಜೆ 4 ಗಂಟೆಗೆ ಆರಂಭವಾದ ಸಭೆಯಲ್ಲಿ ಎರಡು ಗಂಟೆಗಳ ಕಾಲ ಯಾವೊಬ್ಬ ಜನಪ್ರತಿನಿಧಿಯು ಹಾಜರಾಗಿರಲಿಲ್ಲ. ಎರಡು ಗಂಟೆಗಳ ಕಾಲ ವೇದಿಕೆಯಲ್ಲಿ 13 ಕುರ್ಚಿಗಳು ಖಾಲಿಯಾಗಿದ್ದವು. ಆ ನಂತರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕ್ಯಾ. ಗಣೇಶ್ ಕಾರ್ಣಿಕ್, ಎಸ್. ಅಂಗಾರ , ಮೊಯ್ದಿನ್ ಬಾವ, ಯು.ಟಿ. ಖಾದರ್ ಬಂದರು.

ಸಭೆಯ ಕೊನೆಯವರೆಗೂ ಉಳಿದ ಎಂಟು ಕುರ್ಚಿಗಳು ಖಾಲಿಯಾಗಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಅಭಯಚಂದ್ರ ಜೈನ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ವೀರಪ್ಪ ಮೊಯ್ಲಿ ಶಾಸಕಿ ಶಕುಂತಳಾ ಶೆಟ್ಟಿ, ಶಾಸಕರಾದ ವಸಂತ ಬಂಗೇರ, ಜೆ.ಆರ್.ಲೋಬೊ, ವಿಧಾನಪರಿಷತ್ ಸದಸ್ಯ ಐವನ್ ಡಿ ಸೋಜ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಡಿಪಿಆರ್‌ನಲ್ಲಿ ತಪ್ಪು ಮಾಹಿತಿ ಕೊಡಲಾಗಿದೆ. ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಸಿಗಲು ಸಾಧ್ಯವಿಲ್ಲ. ಸದನದಲ್ಲಿ ಚರ್ಚೆಗೆ ಉತ್ತರ ಸಿಕ್ಕಿಲ್ಲ. ಇದು ಕಾರ್ಯಸಾಧು ಯೋಜನೆ ಅಲ್ಲ. ಕುಡಿಯುವ ನೀರಿನ ಸಮಸ್ಯೆ ಈಗಲೆ ಜಿಲ್ಲೆಯಲ್ಲಿ ಇದ್ದು, ಈ ಯೋಜನೆ ಬಂದರೆ ಕುಡಿಯುವ ನೀರು ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ.

ಮಳೆ ಪ್ರಮಾಣದ ಬಗ್ಗೆ ತಪ್ಪು ಮಾಹಿತಿಯನ್ನು ಇಲಾಖೆ ಸಂಗ್ರಹ ಮಾಡಿದೆ. ಬಂಟ್ವಾಳದ ಮಳೆ ಪ್ರಮಾಣವನ್ನು ಎಲ್ಲೆಡೆಗೆ ತೋರಿಸಲಾಗಿದೆ. ಈ ಯೋಜನೆಗೆ ಬೇಕಾಗುವ 370 ಮೆ.ವ್ಯಾ. ವಿದ್ಯುತ್ ಎಲ್ಲಿ ಉತ್ಪಾದನೆ ಮಾಡುತ್ತಾರೆ ಎಂಬ ಮಾಹಿತಿ ಇಲ್ಲ. ಆನೆ ಕಾರಿಡಾರ್ ಸೇರಿದಂತೆ ಎಲ್ಲ ಸೂಕ್ಷ್ಮ ಸಂವೇದಿ ಜೀವತಾಣಗಳನ್ನು ಉಳಿಸಬೇಕಾಗಿದೆೆ. ಮೀನುಗಾರಿಕೆಗೆ ತೊಂದರೆಯಾಗಲಿದೆ. ಮೀನಿನ ಸಂತತಿ ಮತ್ತು ಆಹಾರಕ್ಕೆ ತೊಂದರೆಯಾಗಲಿದೆ. ಕೃಷಿ ಭೂಮಿ ಬಂಜರು ಆಗುತ್ತದೆ. – ಕ್ಯಾ.ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ

ಸಚಿವ ಖಾದರ್ ಲಿಖಿತ ಉತ್ತರ :

ಭಾರತೀಯ ವಿಜ್ಞಾನ ಸಂಸ್ಥೆಯು ಎತ್ತಿನಹೊಳೆ ಯೋಜನೆಯಡಿ ಲಭ್ಯವಾಗುವ ನೀರಿನ ಪ್ರಮಾಣದ ಕುರಿತು ಯಾವುದೇ ಅಧಿಕೃತ ವರದಿ ಪ್ರಕಟಿಸಿಲ್ಲ. ಆದರೆ ಈ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರೊಫೆೆಸರ್ ಒಬ್ಬರು ಈ ಕುರಿತಂತೆ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಪ್ರಕಟಿಸಿರುವ ಅಂಶಗಳು ಅವರ ವೈಯಕ್ತಿಕವೇ ಹೊರತು ಸಂಸ್ಥೆಯದಲ್ಲವೆಂದು ಭಾರತೀಯ ವಿಜ್ಞಾನ ಸಂಸ್ಥೆಯು ಸೃಷ್ಟಿಕರಣ ನೀಡಿದೆ. ನಿಗಮವು ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಲಭ್ಯ ವಿರುವ ನೀರಿನ ಪ್ರಮಾಣದ ಕುರಿತು ಜಲವಿಜ್ಞಾನ ಕ್ಷೇತ್ರದ ಪರಿಣತ ತಂತ್ರಜ್ಞರಿಂದ ವೈಜ್ಞಾನಿಕವಾಗಿ ನೀರಿನ ಲೆಕ್ಕಾಚಾರ ಮಾಡಿಸಿದ್ದು, ಇದರನ್ವಯ ಯೋಜನೆಗೆ ಲಭ್ಯವಾಗುವ 24 ಟಿಎಂಸಿ ನೀರನ್ನು ತಿರುವುಗೊಳಿಸಲು ವಿವರವಾದ ಯೋಜಾ ವರದಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ನೀರಿನ ಲಭ್ಯತೆಯ ಕುರಿತಂತೆ ಈ ಕೆಳಗಿನ ಸಂಸ್ಥೆಗಳಿಂದ ದೃಢೀಕರಣ ಮಾಡಿಕೊಳ್ಳಲಾಗಿದೆ

1. ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ  / 2. ಕೇಂದ್ರ ಜಲ ಆಯೋಗ

*ಯೋಜನಾ ವರದಿಯಲ್ಲಿ ಅಳವಡಿಸಿಕೊಂಡಿರುವ ನೀರಿನ ಪ್ರಮಾಣ ಮತ್ತು ಈ ಸಂಸ್ಥೆಗಳು ಲೆಕ್ಕಹಾಕಿರುವ ನೀರಿನ ಪ್ರಮಾಣದಲ್ಲಿ ಬಹುತೇಕ ಸಾಮ್ಯತೆಯಿದೆ. ಎತ್ತಿನಹೊಳೆ ಯೋಜನೆಯಡಿ ಪಶ್ಚಿಮಘಟ್ಟದ ಆರ್ ಎಲ್ 730 ಮೀ. ಮೇಲ್ಭ್ಬಾಗದಲ್ಲಿನ 8 ಸಣ್ಣ ಹಳ್ಳಗಳಿಂದ ಮಳೆಗಾಲದಲ್ಲಿ ಮಾತ್ರ ನೀರನ್ನು ತಿರುವುಗೊಳಿಸಲು ಯೋಜಿಸಿರುವುದರಿಂದ ಕೆಲಭಾಗದ ಜನರ ಬೇಡಿಕೆಗೆ ಯಾವುದೆ ತೊಂದರೆಯಾಗುವುದಿಲ್ಲ. ಜೊತೆಗೆ ಈ ಯೋಜನೆಯಡಿ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಿಂದ ಯಾವುದೇ ನೀರನ್ನು ನೇರವಾಗಿ ಬಳಸುತ್ತಿಲ್ಲವಾದರಿಂದ ದ.ಕ. ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ಉಂಟಾಗದು.

* ನೀರಿನ ಲಭ್ಯತೆಯನ್ನು ಜಲವಿಜ್ಞಾನ ಕ್ಷೇತ್ರದ ತಂತ್ರಜ್ಞರಿಂದ ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿಸಿದ್ದು ಮತ್ತು ಜಲವಿಜ್ಞಾನ ಅಧಿಕೃತ ಸಂಸ್ಥೆಗಳಿಂದ ದೃಢೀಕರಣ ಪಡೆದುಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಮಳೆಗಾಲ ಅವಧಿಯು ಜೂನ್‌ನಿಂದ ನವೆಂಬರ್‌ವರೆಗೆ ಮಾತ್ರ 24.01 ಟಿಎಂಸಿ ನೀರನ್ನು 8 ಹಳ್ಳಗಳಿಂದ ತಿರುವುಗೊಳಿಸಲು ಯೋಜಿಸಲಾಗಿದೆ. ಉಳಿದ ಸಮಯದಲ್ಲಿ ಯಾವುದೇ ನೀರನ್ನು ಈ ಯೋಜನೆಯಿಂದ ತಿರುವುಗೊಳಿಸುವುದಿಲ್ಲ. ಈ 8 ಹಳ್ಳಗಳಿಂದ ಮಳೆಗಾಲದಲ್ಲಿ ಒಟ್ಟಾರೆಯಾಗಿ 34.26 ಟಿಎಂಸಿ ನೀರಿನ ಲಭ್ಯತೆ ಇದ್ದು, ಇದರ ಪೈಕಿ 24.01 ಟಿಎಂಸಿ ನೀರನ್ನು ಮಾತ್ರ ತಿರುವುಗೊಳಿಸಲು ಯೋಜಿಸಿದೆ.

*ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಮೊದಲನೆ ಹಂತದ ಕಾಮಗಾರಿಗೆ ಪಶ್ಚಿಮ ಘಟ್ಟದಲ್ಲಿ ಕೇವಲ 13.93 ಹೆ.ನಷ್ಟು ಅರಣ್ಯ ಭೂಮಿಯ ಆವಶ್ಯಕತೆಯಿದ್ದು ಅರಣ್ಯ (ಸಂರಕ್ಷಣಾ) ಕಾಯ್ದೆ, 1980 ರನ್ವಯ ಯೋಜನೆಗೆ ಅನುಮತಿ ಪಡೆದು ಮೇಲೆ ತಿಳಿಸಿದ 13.93 ಹೆ. ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ಭೂಮಿಯ ಲಭ್ಯತೆಯ ಆಧಾರದ ಮೇಲೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ಎನ್ವೈರನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ ತೀರುವಳಿ ಕುರಿತು ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಸಚಿವ ಖಾತೆಯವರು ಈ ಯೋಜನೆಯು ಕುಡಿಯುವ ನೀರು ಒದಗಿಸುವ ಯೋಜನೆಯಾಗಿರುವುದರಿಂದ ಇಐಎ ನೋಟಿಫಿಕೇಶನ್ 2006 ಅನ್ವಯವಾಗುವುದಿಲ್ಲವೆಂದು ವಿನಾಯಿತಿ ನೀಡಿರುತ್ತದೆ.

*ಈ ಯೊಜನೆಯಡಿ 24.01 ಟಿಎಂಸಿ ನೀರನ್ನು ಮಳೆಗಾಲ ಅವಧಿಯಲ್ಲಿ ಮಾತ್ರ ತಿರುವುಗೊಳಿಸಲು ಯೋಜಿಸಲಾಗಿರುವುದರಿಂದ ಈ ಅವಧಿಯಲ್ಲಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇರುವುದರಿಂದ ಮತ್ತು ವಿದ್ಯುತ್ ಬೇಡಿಕೆ ಕಡಿಮೆ ಇರುವುದರಿಂದ ಯೋಜನೆಗೆ ಬಹುತೇಕ ವಿದ್ಯುತ್ ಕೊರತೆ ಉಂಟಾಗುವುದಿಲ್ಲ. ಎತ್ತಿನಹೊಳೆ ಯೋಜನೆಯನ್ನು ರೂ. 12,912.36 ಕೋಟಿ ಮೊತ್ತಕ್ಕೆ ಅನುಷ್ಠಾನಗೊಳಿಸಲು ಸರಕಾರವು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

*ಈ ಯೋಜನೆಯಿಂದ ಮೀನುಗಾರಿಕೆಯ ಮೇಲಾ ಗುವ ಪರಿಣಾಮದ ಅಧ್ಯಯನವನ್ನು ಈಗಾಗಲೇ ಎನ್‌ಜಿಟಿ ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಇದರಲ್ಲಿ ಈ ಬಗ್ಗೆ ಮೀನುಗಾರಿಕೆ ತಜ್ಞರಾದ ಎಂ.ಎಫ್.ರೆಹಮಾನ್‌ರವರು ವರದಿ ನೀಡಿದ್ದು, ಇದರಿಂದ ಮಿನುಗಾರಿಕೆಗೆ ಯಾವುದೇತೊಂದರೆ ಇಲ್ಲವೆಂದು ಉಲ್ಲೇಖಿಸಿರುತ್ತಾರೆ.

ಈ ಯೋಜನೆಯಡಿ ಎತ್ತಿನಹೊಳೆ ನೀರನ್ನು ಪಾಲಾರ್ ನದಿಗೆ ಹಾಕುವ ಪ್ರಸ್ತಾಪವಿರುವುದಿಲ್ಲ. ಈ ಯೋಜನೆ ಯಡಿಯಲ್ಲಿ ಕುಡಿಯುವ ನೀರಿಗಾಗಿ ಪಾಲಾರ್ ಬೇಸಿನ್‌ನಲ್ಲಿ ಬರುವ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ನೀರು ಪೂರೈಸಲು ಯೋಜಿಸಲಾಗಿದ್ದು ಯಾವುದೆ ಅಂತಾರಾಜ್ಯ ಜಲ ವಿವಾದಗಳಿಗೆ ಆಸ್ಪದವಿರುವುದಿಲ್ಲ. ನೇತ್ರಾವತಿ ಮತ್ತು ಹೇಮಾವತಿ ಜೋಡಣೆ ಈ ಯೋಜನೆಯಲ್ಲಿ ಇರುವುದಿಲ್ಲ.

ವರದಿ ಕೃಪೆ : ವಾಭಾ

Write A Comment