ಕಾಸರಗೋಡು, ಸೆ.18 ಹತ್ತು ದಿನಗಳ ಹಿಂದೆ ನಡೆದಿದ್ದ ಕಾಸರಗೋಡಿನ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಬ್ಯಾಂಕಿನಿಂದ ದೋಚಲಾಗಿದ್ದ ಚಿನ್ನಾಭರಣಗಳ ಪೈಕಿ 10 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ.
ಪ್ರಮುಖ ಆರೋಪಿ, ಬಂದ್ಯೋಡು ಪಚಂಬಳ ನಿವಾಸಿ ಶರೀಫ್ (41) ಎಂಬಾತ ನಿನ್ನೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದು, ನಿನ್ನೆ ಸಂಜೆಯೇ ಕಾಸರಗೋಡಿಗೆ ಕರೆತರಲಾಗಿದೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಶೂಕ್ (25) ಎಂಬಾತನನ್ನು ಬೆಂಗಳೂರಿನಿಂದ ಮತ್ತು ಶಬ್ಬೀರ್ ಎಂಬಾತನನ್ನು ಗೋವಾದಿಂದ ಬಂಧಿಸಲಾಗಿತ್ತು.
ಶರೀಫ್ ಪಚಂಬಳದ ತನ್ನ ಮನೆಯ ಸಮೀಪ ತೆಂಗಿನ ಮರದ ಬುಡದಲ್ಲಿ ಬಚ್ಚಿಟ್ಟಿದ್ದ 10 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣಗಳಿದ್ದ 416 ಪ್ಯಾಕೆಟ್ ಗಳನ್ನು ಚೀಲವೊಂದರಲ್ಲಿ ಹಾಕಿ ನೆಲದಲ್ಲಿ ಹುಗಿದಿರಿಸಲಾಗಿತ್ತು. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನದ ಬಳಿಕವೇ ಉಳಿದ ಚಿನ್ನಾಭರಣ ಮತ್ತು ನಗದು ಹಮ ಪತ್ತೆಯಾಗಬೇಕಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದರೋಡೆಯ ಬಲಿಕ ಶರೀಫ್ ಮಂಗಳೂರಿಗೆ ಪರಾರಿಯಾಗಿದ್ದು, ಅಲ್ಲಿಂದ ಕೊಚ್ಚಿಗೆ ತೆರಳಿದ್ದ. ಮೂರು ದಿನಗಳ ಹಿಂದೆ ವಿಮಾನದ ಮೂಲಕ ಮುಂಬೈಗೆ ಪ್ರಯಾಣಿಸಿದವನು ಅಲ್ಲಿಂದ ಕಾರವಾರಕ್ಕೆ ಬಂದಿಳಿದಿದ್ದ. ಆತನ ಜಾಡು ಹಿಡಿದಿದ್ದ ಪೊಲೀಸರು ಕಾರವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರೀಫ್ ವಿದೇಶಕ್ಕೆ ಪರಾರಿಯಾಗಿರಬಹುದೆಂದು ಪೊಲೀಸರು ಈ ಮೊದಲು ಶಂಕಿಸಿದ್ದರು. ಇದೀಗ ಆತನ ಪಾಸ್ ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಸೆ. 7ರಂದು ಮಧ್ಯಾಹ್ನ ಕಾಸರಗೋಡು ಎರಿಯಾಲದ ಕೂಡ್ಲು ಸೇವಾ ಸಹಕಾರಿ ಬ್ಯಾಂಕಿಗೆ ನುಗ್ಗಿದ ಐವರು ಮುಸುಕುಧಾರಿಗಳ ತಂಡ ಇಬ್ಬರು ಮಹಿಳಾ ಸಿಬ್ಬಂದಿಗಳು ಮತ್ತು ಓರ್ವ ಗ್ರಾಹಕಿಯನ್ನು ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆಯೊಡ್ಡಿ ಕೇವಲ ಐದೇ ನಿಮಿಷಗಳಲ್ಲಿ 21 ಕೆ.ಜಿ. ಚಿನ್ನಾಭರಣಗಳು ಮತ್ತು 13 ಲ.ರೂ. ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.



