ಮಂಗಳೂರು, ಸೆ.16: ಪಾಂಡೇಶ್ವರ ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯೊಂದರಲ್ಲಿ ನಗರದ ವಿವಿಧೆಡೆಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕಳವು ಪ್ರಕರಣಗಳನ್ನು ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹಾವೇರಿಯ ಕಿರಣ್ (22), ಬಜ್ಪೆ ಪೊರ್ಕೋಡಿಯ ನಿವಾಸಿ ಸಂದೀಪ್ (23) ಹಾಗೂ ತಮಿಳುನಾಡಿನ ಅಶೋಕ್ ಕುಮಾರ್ (28) ಎಂದು ಗುರುತಿಸಲಾಗಿದೆ. ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರು ದಕ್ಷಿಣ ಠಾಣೆ, ಸುರತ್ಕಲ್ ಠಾಣೆ, ಮಂಗಳೂರು ಪೂರ್ವ ಠಾಣೆ, ಗ್ರಾಮಾಂತರ ಠಾಣೆ ಹಾಗೂ ಹಾಸನ ಜಿಲ್ಲೆಯ ಠಾಣೆಗಳಲ್ಲಿ ವರದಿಯಾದ ಒಟ್ಟು 11 ಕಳವು ಪ್ರಕರಣಗಳನ್ನು ಭೇದಿಸಿ 128 ಗ್ರಾಂ ತೂಕದ ಚಿನ್ನಾಭರಣ, 10 ತಾಮ್ರದ ಕಟಾರಗಳು, ಐದು ಗಂಟೆಗಳು, 20 ಕಾಲುದೀಪಗಳು, ಎರಡು ಲ್ಯಾಪ್ಟ್ಯಾಪ್ ಸೇರಿದಂತೆ 4.55 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಕಿರಣ್ ಹಾಗೂ ಅಶೋಕುಮಾರ್ ಊರೂರು ಅಲೆಯುತ್ತ ಅಪರಾಧಗಳನ್ನು ಎಸಗುವ ಪ್ರವೃತ್ತಿಯವ ರಾಗಿದ್ದಾರೆ. ಅವರಿಗೆ ಮಂಗಳೂರಿನಲ್ಲಿ ನಾಲ್ಕೈದು ವರ್ಷಗಳ ಹಿಂದೆ ಸಂದೀಪ್ನ ಪರಿಚಯವಾಗಿತ್ತು. ನಂತರ ಈ ಮೂವರು ಗುಜರಿ ಹೆಕ್ಕುವ ನೆಪದಲ್ಲಿ ಊರೂರು ಅಲೆದಾಡಿ, ಜನನಿಬಿಡ ಪ್ರದೇಶಗಳನ್ನು, ದೈವ ಸ್ಥಾನಗಳನ್ನು ಗುರುತಿಸಿ ರಾತ್ರಿ ವೇಳೆ ಮನೆ ಹಾಗೂ ದೇವಸ್ಥಾನಗಳ ಬಾಗಿಲು ಒಡೆದು ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಣ್ ಹಾಗೂ ಸಂದೀಪ್ ವಿರುದ್ಧ ಮಂಗಳೂರು ಬಂದರು ಠಾಣೆಯಲ್ಲಿ ಹಾಗೂ ಅಶೋಕ್ ಕುಮಾರ್ ವಿರುದ್ಧ ಪಾಂಡೇಶ್ವರ ಠಾಣೆ ಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಒಂದು ಪ್ರದೇಶ ದಲ್ಲಿ ಕಳ್ಳತನ ಮಾಡಿ, ಬಳಿಕ ಬೇರೆ ಊರಿಗೆ ಪಲಾಯನ ಮಾಡುತಿದ್ದು, ಕಿರಣ್ನ ಅಣ್ಣಂದಿರಾದ ಅಶೋಕ ಹಾಗೂ ಕುಮಾರ ಎಂಬವರು ಕೂಡ ಕಳವು ಪ್ರಕರಣಗಳ ಹಳೆ ಆರೋಪಿಗಳಾಗಿದ್ದು, ಕುಮಾರ್ ಪ್ರಸ್ತುತ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಎಸ್.ಮುರು ಗನ್, ಉಪ ಪೊಲೀಸ್ ಆಯುಕ್ತರಾದ ಕೆ.ಎಂ ಶಾಂತರಾಜ್, ಡಾ. ಸಂಜೀವ ಎಂ ಪಾಟೀಲ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಆರ್. ಕಲ್ಯಾಣಶೆಟ್ಟಿ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ನಿರೀಕ್ಷಕ ದಿನಕರ ಶೆಟ್ಟಿ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ. ಪತ್ತೆ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಠಾಣಾ ಪಿಎಸ್ಐ ಮುಹಮ್ಮದ್ ಶರೀಫ್, ಅಪರಾಧ ಪತ್ತೆ ವಿಭಾಗದ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
