ಕನ್ನಡ ವಾರ್ತೆಗಳು

ರೈತರ ಆತ್ಮಹತ್ಯೆ ತಡೆಯಲು ಅವರಿಗೆ ವೈಜ್ಞಾನಿಕವಾದ ಚಿಂತನೆ ಅಗತ್ಯವಿದೆ : ನ್ಯಾ. ಉಮಾ ಎಂ.ಜಿ.

Pinterest LinkedIn Tumblr

Zp_news_photo_1

ಮಂಗಳೂರು, ಸೆ.11: ರೈತರಿಗೆ ಸರಕಾರದಿಂದ ನೀಡಲಾಗುವ ಸಾಲವನ್ನು ವೈಭವೀಕರಿಸುವ ರಾಜಕಾರಣಿಗಳು ನಮ್ಮಲ್ಲಿ ಇದ್ದರಾದರೂ, ಅನ್ನದಾತನ ನೋವನ್ನು ಪರಿಗಣಿಸಿ ಪರಿಹಾರ ಸೂಚಿಸುವ ದೂರದೃಷ್ಟಿಯ ರಾಜಕೀಯ ಮುತ್ಸದ್ದಿಗಳ ಕೊರತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ. ಖೇದ ವ್ಯಕ್ತಪಡಿಸಿದ್ದಾರೆ.

ಅವರು ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲೆಯ ರೈತರಿಗೆ ಧೈರ್ಯ ತುಂಬುವ ಕುರಿತಾದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರೈತರನ್ನು ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ನಾವು ಆ ಬೆನ್ನೆಲುಬನ್ನು ನಿರ್ಲ ಕ್ಷಿಸಿದ್ದೇವೆ. ಮೊಬೈಲ್ ಫೋನ್ ಸೇರಿದಂತೆ ಯಂತ್ರೋಪಕರಣಗಳನ್ನು ಎಷ್ಟೇ ಬೆಲೆ ಕೊಟ್ಟಾ ದರೂ ಖರೀದಿಸುವ ನಾವು ಆಹಾರ ಪದಾರ್ಥಗಳ ಬೆಲೆ ಏರಿಕೆಯಾದಾಗ ಹಾಹಾಕಾರ ಸೃಷ್ಟಿಸುತ್ತೇವೆ. ಈ ನಡುವೆ ಬೆಲೆ ಏರಿಕೆಯ ಲಾಭ ಪಡೆಯುವುದು ಮಧ್ಯವರ್ತಿಗಳು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಣೆಯಾಗುತ್ತಿಲ್ಲ. ಇಂದಿಗೂ ಬಹುತೇಕವಾಗಿ ಕೃಷಿಗೆ ರೈತರು ಮಳೆಯನ್ನೇ ಅವಲಂಬಿಸಬೇಕಾಗಿದೆ. ಅನಿಶ್ಚಿತ ಮಳೆಯಿಂದಾಗಿ ಬೆಳೆ ಬೆಳೆದ ರೈತ ನಿರಾಶನಾಗುತ್ತಾನೆ.

Zp_news_photo_2 Zp_news_photo_3 Zp_news_photo_4

ಅವನ ಕುಟುಂಬ ಸಂಕಷ್ಟಕ್ಕೀಡಾಗುತ್ತಿದೆ. ಇದರಿಂದ ದುರ್ಬಲ ಮನಸ್ಸಿನವರು ಬಹುಬೇಗ ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂತಹ ಪರಿಸ್ಥಿತಿಗೆ ಕಾರಣದ ಬಗ್ಗೆ ವೈಜ್ಞಾನಿಕವಾದ ಚಿಂತನೆಯ ಅಗತ್ಯವಿದೆ ಎಂದು ಅವರು ಹೇಳಿದರು. ಮಳೆಯನ್ನೇ ಆಧರಿಸಿರುವ ಕೃಷಿಗೆ ಪರ್ಯಾಯವಾಗಿ ನಿರ್ದಿಷ್ಟ ನೀರಾವರಿ ಯೋಜನೆಗಳನ್ನು ರೈತರಿಗೆ ಒದಗಿಸುವಲ್ಲಿ ನಾವಿನ್ನೂ ತೀರಾ ಹಿಂದಿದ್ದೇವೆ. ಅಂಕಿಅಂಶಗಳ ಪ್ರಕಾರ ರೈತರಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯುವವರು ಶೇ. 25ರಷ್ಟು ಮಂದಿ ಮಾತ್ರ. ಉಳಿದವರು ಲೇವಾದೇವಿ, ಬಡ್ಡಿ ಯವರಿಂದ ಹಣ ಪಡೆಯುತ್ತಾರೆ. ಹಾಗಾಗಿ ಸಾಲಮನ್ನಾ ಘೋಷಣೆ ಆಗುತ್ತಿದೆ. ಆದರೆ ರೈತರಿಗೆ ಸಮರ್ಪಕವಾಗಿ ಇದರ ಪ್ರಯೋಜನ ದೊರಕುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ ಎಂದು ನ್ಯಾ. ಉಮಾ ಹೇಳಿದರು.

ಸಂಕಷ್ಟದ ಪರಿಸ್ಥಿತಿಯಲ್ಲೂ ಯಶಸ್ಸು ಸಾಧಿಸಿದ ರೈತರ ಯಶೋಗಾಥೆಗಳಿಗೆ ನಾವು ಕಿವಿಕೊಡುವ ಮೂಲಕ ರೈತರಲ್ಲಿ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದು ಅವರು ಅಭಿಪ್ರಾಯಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾ ಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಕೃಷಿಗೆ ಅಗತ್ಯವಾದ ನೀರಾವರಿ ಯೋಜನೆಗಳನ್ನು ನಾವು ಇನ್ನಷ್ಟು ಸದೃಢಗೊಳಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡಬೇಕು ಎಂದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ ಮಾತನಾಡಿ, ಸ್ಮಾರ್ಟ್ ಸಿಟಿಯ ಬಗ್ಗೆ ಮಾತನಾಡುವ ನಾವು ಸ್ಮಾರ್ಟ್ ಕೃಷಿ ಸ್ಮಾರ್ಟ್ ಗ್ರಾಮದ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ರಾಜ್ಯದಲ್ಲಿ ಈವರೆಗೆ 456 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದರೂ, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯ ರೈತರು ಕೃಷಿಯ ಜತೆ ವಾಣಿಜ್ಯ ಬೆಳೆಗಳನ್ನೂ ಅವಲಂಬಿಸಿರುವುದು ಮತ್ತು ಇಲ್ಲಿನ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿರುವುದು ಎಂದರು.

Zp_news_photo_5 Zp_news_photo_6 Zp_news_photo_7

ಕಾರ್ಯಕ್ರಮದಲ್ಲಿ ಪಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿರುವ ‘ರಕ್ಷಕ್’ (ಅಟೊಮೇಟೆಡ್ ಡಿಸ್‌ಟ್ರೆಸ್ ನೋಟಿಫಿಕೇಶನ್ ಅಪ್ಲಿಕೇಶನ್) ಎಂಬ ರೈತರಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಂದ ರಕ್ಷಣೆ ಒದಗಿಸುವ ಮೊಬೈಲ್ ಆ್ಯಪನ್ನು ಬಿಡುಗಡೆಗೊಳಿಸಲಾಯಿತು.

ರೈತರು ತಮ್ಮ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಮೊಬೈಲ್‌ನಲ್ಲಿ ಅಳವಡಿಸಲಾಗುವ ಈ ಆ್ಯಪ್‌ನ್ನು ‘ಪ್ರೆಸ್’ ಮಾಡಿದಾಗ ಆ್ಯಪ್‌ಗೆ ಸಂಪರ್ಕ ಕಲ್ಪಿಸಿರುವ ವಿವಿಧ ಇಲಾಖೆಗಳಿಗೆ ಸಂದೇಶ ರವಾನೆಯಾಗುತ್ತದೆ. ಈ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವು ಒದಗಿಸಬಹುದಾಗಿದೆ ಎಂದು ಪಿ.ಎ. ಕಾಲೇಜಿನ ಗಣಕ ವಿಭಾಗದ ಮುಖ್ಯಸ್ಥೆ ಡಾ.ಶರ್ಮಿಳಾ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಮಂಗಳೂರು ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್, ವೆನ್ಲಾಕ್ ಆಸ್ಪತ್ರೆಯ ಡಿಎಎಂಒ ಡಾ. ರಾಜೇಶ್ವರಿ ದೇವಿ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎ.ಜೆ. ಮಹಾವಿದ್ಯಾಲಯದ ಪ್ರೊ. ಮತ್ತು ಮುಖ್ಯಸ್ಥ ಡಾ. ರವೀಶ್ ತುಂಗಾ, ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಡಾ. ಶ್ರೀನಿವಾಸ್ ಭಟ್ ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ. ಸ್ವಾಗತಿಸಿದರು. ರಾಮಣ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ವಂದಿಸಿದರು.

Write A Comment