ಕನ್ನಡ ವಾರ್ತೆಗಳು

ಅಕ್ರಮ ಜಾನುವಾರು ಸಾಗಾಟ – ಆರೋಪಿಗಳು ಪರಾರಿ : 11 ಜಾನುವಾರುಗಳ ರಕ್ಷಣೆ

Pinterest LinkedIn Tumblr

karkal_cattel_theft_3

ಕಾರ್ಕಳ, ಸೆ.08 :  ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಾರುತಿ ಓಮ್ನಿಯೊಂದನ್ನು ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ಅದನ್ನು ಪೊಲೀಸರಿಗೊಪ್ಪಿಸಿದ ಘಟನೆ ನಿನ್ನೆ ಮಧ್ಯಾಹ್ನ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ನಡೆದಿದೆ.

ವಾಹನದಲ್ಲಿದ್ದ ಮೂವರು ಆರೋಪಿಗಳು ಕಾರ್ಯಕರ್ತರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮ ಜಾನುವಾರು, ಅಕ್ರಮ ಕಸಾಯಿಖಾನೆಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ ಘಟನೆಯೂ ನಡೆದಿದೆ.

karkal_cattel_theft_2 karkal_cattel_theft_3 karkal_cattel_theft_4 karkal_cattel_theft_5 karkal_cattel_theft_6 karkal_cattel_theft_9

ನಿನ್ನೆ ಮಧ್ಯಾಹ್ನ ರೆಂಜಾಳಧ ಹಾಡಿಯೊಂದರಲ್ಲಿ ಮೇಯಲು ಬಿಟ್ಟಿದ್ದ ಎರಡು ದನಗಳು ಮತ್ತು ಮೂರು ಕರುಗಳನ್ನು ಆರೋಪಿಗಳು ಮಾರುತಿ ಓಮ್ಮಿಯೊಂದರಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರು. ಇದನ್ನು ಕಂಡ ಬಜರಂಗ ದಳದ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿದ್ದು, ಈ ಸಂದರ್ಭ ಅದರಲ್ಲಿದ್ದವರು ತಲವಾರು ಮತ್ತು ಕಬ್ಬಿಣದ ರಾಡ್ ಗಳನ್ನು ಝಳಪಿಸಿ ಬೆದರಿಸಿದ್ದರು. ಕಾರ್ಯಕರ್ತರು ಕಲ್ಲುಗಳನ್ನೆಸೆದಾಗ ಆರೋಪಿಗಳು ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಸರದಲ್ಲಿ ಸ್ಥಳೀಯ ವ್ಯಕ್ತಿಯೋರ್ವನಿಗೆ ಸೇರಿದ ಸ್ಕೂಟರ್ ಸಹ ಪತ್ತೆಯಾಗಿದ್ದು, ಓಮ್ನಿಯ ಎದುರಿನಿಂದ ಇನ್ನಿಬ್ಬರು ಆರೋಪಿಗಳು ಅದರಲ್ಲಿ ಹೋಗುತ್ತಿದ್ದರೆನ್ನಲಾಗಿದೆ.

ಆರೋಪಿಗಳು ಓಮ್ನಿಯಲ್ಲಿದ್ದ ಜಾನುವಾರುಗಳ ಪೈಕಿ ಎರಡು ದನಗಳ ಕಾಲುಗಳಿಗೆ ಮಾರಕಾಯುಧಗಳಿಂದ ಕಡಿದು ತೀವ್ರವಾಗಿ ಗಾಯಗೊಳಿಸಿದ್ದು ಕಂಡು ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ದನಕರುಗಳು, ಓಮ್ನಿ ಮತ್ತು ಸ್ಕೂಟರ್ ರನ್ನು ವಶಪಡಿಸಿಕೊಂಡಿದ್ದಾರೆ. ಸ್ಕೂಟರ್ ನ ಮಾಲಕನೆನ್ನಲಾಗಿರುವ ಸ್ಥಳೀಯ ವ್ಯಕ್ತಿ ಅಕ್ರಮ ಜಾನುವಾರು ಸಾಗಾಟಕ್ಕೆ ನೆರವಾಗುತ್ತಿದ್ದ ಎಂದು ಆರೋಪಿಸಲಾಗಿದೆ. ಪೊಲೀಸರು ಆತನ ಮನೆಗೆ ದಾಳಿ ನಡೆಸಿದಾಗ ಆತ ಪರಾರಿಯಾಗಿದ್ದು, ಅಲ್ಲಿ ಕೂಡಿ ಹಾಕಲಾಗಿದ್ದ 4 ಕರುಗಳು ಸೇರಿದಂತೆ ಆರು ದನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೂಡಬಿದಿರೆ ಗಂಟಾಲಕಟ್ಟೆಯ ಕಲಂದರ್, ರೆಂಜಾಳದ ಹಂಸ ಮತ್ತು ಇತರ ಏಳು ಜನರು ಈ ಅಕ್ರಮ ಜಾನುವಾರು ಸಾಗಾಟದ ತಂಡದಲ್ಲಿದ್ದಾರೆ ಎನ್ನಲಾಗಿದೆ.

ವಶಪಡಿಸಿಕೊಳ್ಳಲಾದ ಜಾನುವಾರುಗಳು ಮತ್ತು ವಾಹಗಳನ್ನು ಕಾರ್ಕಳ ಗ್ರಾಮಾಂತರ ಠಾಣೆಗೆ ತರಲಾಗಿದ್ದು, ಈ ಸಂದರ್ಭ ಸುಮಾರು 300ರಷ್ಟಿದ್ದ ಬಜರಂಗ ದಳ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಅಕ್ರಮ ಜಾನುವಾರು ಸಾಗಾಟ ಮತ್ತು ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment