ಕನ್ನಡ ವಾರ್ತೆಗಳು

ಗಡಿಪಾರು : ಎಚ್ಚರಿಕೆ / ರೌಡಿಸಂ ತಡೆಗೆ ಸೂಕ್ತ ಕ್ರಮ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರಿಂದ ಸೂಚನೆ

Pinterest LinkedIn Tumblr

Home_mistr_photo_3

ಮಂಗಳೂರು, ಸೆ.8: ರೌಡಿಸಂನಲ್ಲಿ ನೈತಿಕ ಮತ್ತು ಅನೈತಿಕ ಎಂಬುದಿಲ್ಲ. ಅದಕ್ಕೆ ಸಮರ್ಥನೆಯೇ ಇಲ್ಲ. ರೌಡಿಸಂ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗೂಂಡಾಗಿರಿಯಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೌಡಿಗಳ ವಿರುದ್ಧ ರೌಡಿ ಶೀಟ್ ತೆರೆದು, ಕೆಲವೊಂದು ಸಂದರ್ಭಗಳಲ್ಲಿ ಅವರನ್ನು ಜಿಲ್ಲೆಯಿಂದ ಗಡಿ ಪಾರು ಮಾಡಬೇಕಾಗುತ್ತದೆ. ಮತ್ತು ಅವರ ವಿರುದ್ಧ ಸೂಕ್ತ ಶಿಕ್ಷೆಯನ್ನು ವಿಧಿಸಬೇಕಾಗುತ್ತದೆ ಎಂದು ಹೇಳಿದರು.

ಸಿಐಡಿ ತನಿಖೆ ವಿಳಂಬದ ಬಗ್ಗೆ ಪರಿಶೀಲನೆ

ದ.ಕ. ಜಿಲ್ಲೆಯಲ್ಲಿ ಸುಮಾರು 12 ಪ್ರಕರಣಗಳನ್ನು ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬರುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ಬಳಿಕ ಬಹುತೇಕವಾಗಿ ಸರಕಾರ ಮಧ್ಯಪ್ರವೇಶಿಸುವುದಿಲ್ಲ. ಆದರೆ ಯಾಕೆ ವಿಳಂಬ ಆಗುತ್ತಿದೆ ಎಂಬ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.

ಪ್ರಚೋದನಕಾರಿ ಮತ್ತು ಅಪರಾಧಕ್ಕೆ ಕಾರಣವಾಗುವ ಹೇಳಿಕೆ ನೀಡಿ ಮತೀಯ ಸೌಹಾರ್ದಕ್ಕೆ ಧಕ್ಕೆ ತರುವಂತಹ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತವಾಗಿಯೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಆದರೆ ಇದುವರೆಗೂ ಯಾವುದೇ ಸಾಹಿತಿ ಯಾರನ್ನೋ ಕೊಲೆ ಮಾಡುವ ರೀತಿಯಲ್ಲಿ, ಕೊಲೆಯಾದ ಬಗ್ಗೆ ಪ್ರಚೋದನಕಾರಿಯಾಗಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ಮಾತನಾಡುವುದು ಪ್ರಚೋದನಕಾರಿ, ಪಿತೂರಿ ಆಗುತ್ತದೆ. ಅಂತಹವರ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲೇಬೇಕಾಗುತ್ತದೆ ಎಂದು ಸಚಿವ ಜಾರ್ಜ್ ಸ್ಪಷ್ಟಪಡಿಸಿದರು.

ಸಾಹಿತಿ ಪ್ರೊ.ಭಗವಾನ್ ಇತ್ತೀಚೆಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹದ್ದೇ ವಿಚಾರವಾಗಿ ಪ್ರಸಾದ್ ಅತ್ತಾವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿ ಇಲಾಖೆ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಇಬ್ಬಗೆ ನಿಲುವು ತಳೆಯುತ್ತಿದೆಯೇ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಸಚಿವರು ಈ ಸ್ಪಷ್ಟನೆ ನೀಡಿದರು.

ಕಲಬುರ್ಗಿ ಹತ್ಯೆ : ಸಿಬಿಐಗೆ ವಹಿಸಲು ಸಿದ್ಧ

ಡಾ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಈಗ ಅದನ್ನು ಸಿಐಡಿಗೆ ವಹಿಸಲಾಗಿದೆ. ಮಹಾರಾಷ್ಟ್ರದಲ್ಲೂ ಇಂತಹದ್ದೇ ಎರಡು ಪ್ರಕರಣಗಳು ನಡೆದಿದ್ದು, ಅದನ್ನು ಸಿಬಿಐಗೆ ವಹಿಸಲಾಗಿದೆ. ಆ ಪ್ರಕರಣ ಹಾಗೂ ಇದರಲ್ಲಿ ಸಾಮ್ಯತೆ ಇರುವುದರಿಂದ ಸಿಬಿಐಗೆ ವಹಿಸಲು ಸರಕಾರ ಸಿದ್ಧ. ನಮ್ಮ ಅಧಿಕಾರಿಗಳ ತನಿಖೆ ಬಗ್ಗೆ ವಿಶ್ವಾಸ ಇದೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸಬೇಕೆಂಬುದೇ ನಮ್ಮ ಆಶಯ ಕೂಡಾ ಎಂದರು.

ಮಾದಕ ದ್ರವ್ಯ ಜಾಲ ಪತ್ತೆ ಹಚ್ಚುವಲ್ಲಿ ಜಿಲ್ಲಾ ಅಪರಾಧ ದಳ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲು ಜವಾಬ್ದಾರರಾಗಿರುತ್ತಾರೆ ಎಂದವರು ನುಡಿದರು

ಈ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್.ಲೋಬೊ, ಎಡಿಜಿಪಿ ಅಲೋಕ್ ಮೋಹನ್, ಐಜಿಪಿ ಅಮೃತ್ ಪಾಲ್, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಂಗಳೂರು ಪೊಲೀಸ್ ಆಯುಕ್ತ ಮುರುಗನ್, ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಉಡುಪಿ ಎಸ್ಪಿ ಅಣ್ಣಾಮಲೈ ಮೊದಲಾದವರು ಉಪಸ್ಥಿತರಿದ್ದರು.

Write A Comment