ಕನ್ನಡ ವಾರ್ತೆಗಳು

ಬನ್ನಂಜೆ ರಾಜಾ ಉಡುಪಿ ನ್ಯಾಯಾಲಯಕ್ಕೆ ಹಾಜರು: 9 ದಿನಗಳ ಕಾಲ ಉಡುಪಿ ಪೊಲೀಸ್ ಕಸ್ಟಡಿಗೆ

Pinterest LinkedIn Tumblr

Bannanje-raja-Aug-15_2015-002

ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜ ಅಲಿಯಾಸ್ ರಾಜೇಂದ್ರ ಕುಮಾರ್ (47) ನನ್ನು ಬೆಳಗಾವಿಯಿಂದ ಶಸ್ತ್ರಸಜ್ಜಿತ ಪೊಲೀಸರ ಬಿಗಿ ಭದ್ರತೆಯೊಂದಿಗೆ ಉಡುಪಿಗೆ ಕರೆ ತಂದು ಆ. 29ರಂದು ಉಡುಪಿಯ ಪ್ರಧಾನ ಸಿವಿಲ್ ಜಡ್ಜ್ (ಹಿ.ವಿ.) ಮತ್ತು ಸಿಜೆ‌ಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಎ. ನಾಗಜ್ಯೋತಿ ಅವರು ರಾಜಾನನ್ನು 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರು. ಅಂಕೋಲಾ ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣದಲ್ಲಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರಿಂದ ಆ. 14ರಂದು ಬೆಳಗಾವಿಯ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಆ. 28ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆ. 28ರಂದು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದಾಗ ಸೆ. 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಳಗಾವಿ ಜೈಲಿಗೆ ರಾಜನನ್ನು ಕರೆದೊಯ್ಯಲಾಗಿತ್ತು.

Bannanje Raja_Udp_Court (2) Bannanje Raja_Udp_Court (1)

ಐರೋಡಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಉಡುಪಿಯಲ್ಲಿ 2011ರ ಆ. 19ರ ರಾತ್ರಿ 7.25ಕ್ಕೆ ಐರೋಡಿ ಜುವೆಲರಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಉಡುಪಿ ಪೊಲೀಸರು ಬಾಡಿ ವಾರಂಟ್ ಮೂಲಕ ಬೆಳಗಾವಿ ಜೈಲಿನಿಂದ ಆರೋಪಿ ರಾಜನನ್ನು ಕರೆತಂದು ಉಡುಪಿ ನ್ಯಾಯಾಲಯಕ್ಕೆ ಆ. 29ರ ಮಧ್ಯಾಹ್ನ ಹಾಜರುಪಡಿಸಿದ್ದಾರೆ.

ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 15 ದಿನ ನಡೆದ ವಿಚಾರಣೆಯಲ್ಲಿ ಬನ್ನಂಜೆ ರಾಜ ಹಲವು ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ತನಿಖೆ ದ್ರಷ್ಟಿಯಿಂದ ಈಗಲೇ ಎಲ್ಲವನ್ನು ಹೇಳಲಾಗುವುದಿಲ್ಲ. ತನಿಖೆಗೆ ಉತ್ತಮವಾಗಿ ಸ್ಪಂದಿಸಿದ್ದಾನೆ ಎಂದು ಉಡುಪಿ ಎಸ್‌.ಪಿ. ಅಣ್ಣಾಮಲೈ  ತಿಳಿಸಿದ್ದಾರೆ.

Write A Comment