ಕನ್ನಡ ವಾರ್ತೆಗಳು

ಹಲ್ಲೆ ನಡೆಸಿದ ತಂಡದಿಂದ ನಗದು,ಸೊತ್ತು ದರೋಡೆ : ಇದು ಪೂರ್ವಯೋಜಿತ ಕೃತ್ಯ – ಹಲ್ಲೆಗೊಳಗಾದ ವ್ಯಕ್ತಿಯಿಂದ ಆರೋಪ

Pinterest LinkedIn Tumblr

Shakir_State_Ment_1

ಮಂಗಳೂರು, ಆ.26: ‘‘ಹಣದ ಅಗತ್ಯವಿದೆ ಎಂದು ನನ್ನನ್ನು ಅತ್ತಾವರದ ಕೆಎಂಸಿ ಆಸ್ಪತ್ರೆಯ ಬಳಿ ಕರೆಸಿ ಸಂಘ ಪರಿವಾರಕ್ಕೆ ಸೇರಿದ ತಂಡವೊಂದು ಹಲ್ಲೆ ನಡೆಸಿರುವುದು ಪೂರ್ವ ಯೋಜಿತ ಕೃತ್ಯ’’ ಎಂದು ಮಾರಣಾಂತಿಕ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಲ್‌ವೊಂದರ ಮ್ಯಾನೇಜರ್ ಶಾಕಿರ್ ಆರೋಪಿಸಿದ್ದಾರೆ.

‘‘ನಾನು ಅತ್ತಾವರದ ಮಾಲ್‌ವೊಂದರಲ್ಲಿ ನಾಲ್ಕು ವರ್ಷಗಳಿಂದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸೋಮವಾರ ಸಂಜೆ ಕೆಲಸ ಮುಗಿಸಿ ಕೂಳೂರಿನಲ್ಲಿರುವ ನನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಾನು ಕೆಲಸಕ್ಕಿರುವ ಮಾಲ್‌ನ ಸಿಬ್ಬಂದಿ ಯುವತಿ ನನಗೆ ಕರೆ ಮಾಡಿ 2,000 ರೂ. ಅಗತ್ಯವಿದ್ದು, ಕೂಡಲೇ ತಂದು ಕೊಡುವಂತೆ ಕೋರಿದ್ದಾಳೆ. ಅದರಂತೆ ನಾನು ಆಕೆ ಸೂಚಿಸಿದ ಅತ್ತಾವರದ ಕೆಎಂಸಿ ಆಸ್ಪತ್ರೆಯ ಬಳಿ ಹಣ ಕೊಡಲೆಂದು ತೆರಳಿದ್ದೆ. ಆಸ್ಪತ್ರೆಯ ಎದುರು ನಾನು ಕಾರು ನಿಲ್ಲಿಸುತ್ತಿದ್ದಂತೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ಸಂಘ ಪರಿವಾರ ದವರೆನ್ನಲಾದ ಎಂಟು ಮಂದಿಯ ತಂಡ ನನ್ನ ಕಾರಿನ ಬಾಗಿಲನ್ನು ಬಲವಂತವಾಗಿ ತೆರೆದು ಹೆಸರು ಕೇಳಿದರು. ಶಾಕಿರ್ ಎಂದು ಹೇಳುತ್ತಿದ್ದಂತೆ ಏಕಾಏಕಿ ಕಾರಿನಿಂದ ನನ್ನನ್ನು ಎಳೆದುಹಾಕಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದರು. ಅನಂತರ ಅವರು ನನ್ನನ್ನು ಎಳೆದುಕೊಂಡು ಹೋಗಿ ಅಲ್ಲೇ ಸಮೀಪದಲ್ಲಿದ್ದ ವಿದ್ಯುತ್ ಕಂಬವೊಂದಕ್ಕೆ ಕಟ್ಟಿ ಹಾಕಿ ಬಟ್ಟೆಗಳನ್ನು ಬಿಚ್ಚಿ ಅರೆನಗ್ನಗೊಳಿಸಿ ಒಳ ಉಡುಪಿನಲ್ಲಿ ನಿಲ್ಲಿಸಿದರು. ಅವರು ಮೊದಲೇ ತಂದಿದ್ದ ರಾಡ್‌ಗಳಿಂದ ನನ್ನ ತಲೆಗೆ ಹೊಡೆದರು. ಆನಂತರ ಕೈಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಕಲ್ಲುಗಳನ್ನು ಎತ್ತಿ ಮನಬಂದಂತೆ ಥಳಿಸಿದರು’’ ಎಂದು ಶಾಕಿರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

‘‘ಹಲ್ಲೆ ನಡೆಸಿದ ತಂಡದವರು ನನ್ನಿಂದ 2,000 ರೂ. ನಗದು, ವಾಚ್ ಮತ್ತು ಮೊಬೈಲ್ ಫೋನನ್ನು ಕಸಿದುಕೊಂಡಿದ್ದಾರೆ. ಸೋಮವಾರ ಸಂಜೆ ಸುಮಾರು 5:20ಕ್ಕೆ ನನ್ನನ್ನು ಕಂಬಕ್ಕೆ ಕಟ್ಟಿ ಹಾಕಿ 6:45ರವರೆಗೆ ‘ಜೈ ಶ್ರೀ ರಾಂ’ ಎಂದು ಹೆಸರು ಹೇಳಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ ಘಟನೆಯನ್ನು ಅಲ್ಲಿ ಸೇರಿದ್ದ ನೂರಾರು ಮಂದಿ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದು, ಯಾರೂ ನೆರವಿಗೆ ಬಂದಿಲ್ಲ. ಆನಂತರ ಸ್ಥಳಕ್ಕೆ ಪಾಂಡೇಶ್ವರ ಠಾಣಾ ಎಸ್ಸೈ ಹಾಗೂ ಸಿಬ್ಬಂದಿ ಧಾವಿಸಿ ಬಂದರು’’ ಎಂದು ಶಾಕಿರ್ ನಡೆದ ಘಟನೆಯನ್ನು ವಿವರಿಸಿದ್ದಾರೆ.

‘‘ಅತ್ತಾವರದ ಆ ಮಾಲ್‌ನಲ್ಲಿ ನಾನೊಬ್ಬನೇ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಅದರಲ್ಲೂ ಮ್ಯಾನೇಜರ್ ಹುದ್ದೆಯಲ್ಲಿದ್ದುದು ಹೊರಗಿನ ಕೆಲವು ಸಂಘಪರಿವಾರದ ಕಾರ್ಯಕರ್ತರಿಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ನನ್ನನ್ನು ಈ ಹಿಂದೆ ಸಂಘ ಪರಿವಾರದ ಕೆಲವರು ಪ್ರಶ್ನಿಸಿದ್ದು, ನಿಂದಿಸಿದ್ದೂ ಇದೆ. ಈ ಎಲ್ಲಾ ಘಟನೆಗಳಿಂದಾಗಿ ಸಂಘ ಪರಿವಾರದವರು ನಿನ್ನೆ ನಾನು ಕೆಲಸದಲ್ಲಿರುವ ಮಾಲ್‌ನ ಸಿಬ್ಬಂದಿಯನ್ನೇ ಮುಂದಿಟ್ಟುಕೊಂಡು ನನ್ನನ್ನು ಸ್ಥಳಕ್ಕೆ ಕರೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಸಿಬ್ಬಂದಿ ಯುವತಿಯ ಹಿರಿಯ ಸಹೋದರಿ ಸಂಘಪರಿವಾರಕ್ಕೆ ಸೇರಿದ ಮಹಿಳಾ ಸಂಘಟನೆಯೊಂದರ ಮುಖಂಡೆಯಾಗಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಯ ಬಂಧನ : ಪೊಲೀಸ್ ಕಮಿಷನರ್

ಅತ್ತಾವರದಲ್ಲಿ ಸೋಮವಾರ ಸಂಜೆ ಶಾಕಿರ್ ಎಂಬ ಯುವಕನನ್ನು ಅರೆಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ 13 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ಭಾಗಿಯಾಗಿರುವ ಇತರ ಆರೋಪಿಗಳನ್ನು ಕೂಡ ಶೀಘ್ರದಲ್ಲೇ ಬಂಧಿಸುವುದಾಗಿ ಅವರು ಹೇಳಿದ್ದಾರೆ.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳನ್ನು ಸಂತೋಷ್ ಪೂಜಾರಿ, ಅಭಿರಾಂ ಯಾನೆ ಅಭಿ, ಕಿರಣ್, ಪ್ರವೀಣ್ ಶೆಟ್ಟಿ, ಭುಜಂಗ ಶೆಟ್ಟಿ, ಚಂದ್ರಕಾಂತ ರಾವ್, ಘನಶ್ಯಾಂ, ಧನುಷ್, ಮುತ್ತುರಾಜ್, ಕಿಸಾನ್, ನವೀನ್, ವಿವೇಕ್ ಮತ್ತು ಕಿರಣ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳ ಮೇಲೆ ಸೆಕ್ಷನ್ 143, ಸೆ.147, ಸೆ.148, ಸೆ.341, ಸೆ.504, ಸೆ.307, ಸೆ.395, ಸೆ.397, ಸೆ.506, ಸೆ.149 ಪ್ರಕಾರ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ: ಶಾಸಕ ಲೋಬೊ

ಹಲ್ಲೆಗೊಳಗಾದ ಶಾಕಿರ್ ಚಿಕಿತ್ಸೆ ಪಡೆಯು ತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು. ಈ ಬಗ್ಗೆ ತಾನು ಪೊಲೀಸರಿಗೆ ಸೂಚನೆ ನೀಡಿದ್ದು, ನಗರದ ಸೌಹಾರ್ದ ವಾತಾವರಣವನ್ನು ಕೆಡಿಸುವವರ ವಿರುದ್ಧ ಜಾತಿ, ಭೇದವಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಯುವತಿಯಿಂದ ದೂರು

ಅನೈತಿಕ ಗೂಂಡಾಗಿರಿಯಿಂದ ಹಲ್ಲೆಗೊಳಗಾದ ಶಾಕಿರ್ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದಾಗಿ ಹಲ್ಲೆಗೊಳಗಾದ ಸಂದರ್ಭ ಆತನೊಂದಿಗೆ ಇದ್ದ ಯುವತಿ ತಿಳಿಸಿದ್ದಾಳೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಯುವತಿ, ‘‘ಹುಟ್ಟೂರಾದ ಬೇಲೂರಿನಿಂದ ಕೆಲಸಕ್ಕಾಗಿ 2 ವರ್ಷಗಳ ಹಿಂದೆ ನಾನು ಮಂಗಳೂರಿಗೆ ಬಂದೆ. ಇಲ್ಲಿ ನನ್ನ ದೊಡ್ಡಮ್ಮಳ ಮನೆಯಲ್ಲಿ ವಾಸವಾಗಿದ್ದು, 3 ತಿಂಗಳ ಹಿಂದೆ ಅತ್ತಾವರದ ಮಾಲ್‌ನಲ್ಲಿ ಕೆಲಸಕ್ಕೆ ಸೇರಿದ್ದೇನೆ. ಅಲ್ಲಿ ನನಗಿಂತ ಉನ್ನತ ಹುದ್ದೆಯಲ್ಲಿದ್ದ ಶಾಕಿರ್ ನನಗೆ ಪರಿಚಯವಿತ್ತು. ಕೆಲಸದ ವಿಚಾರದಲ್ಲಿ ನಾವು ಮಾತನಾಡುತ್ತಿದ್ದೆವು.

ಒಂದು ದಿನ ಮಾಲ್‌ನಿಂದ ಮನೆಗೆ ಹೋಗುವಾಗ ನಂದಿಗುಡ್ಡೆ ಬಸ್ ತಂಗುದಾಣದವರೆಗೆ ಡ್ರಾಫ್ ಕೊಡುವುದಾಗಿ ಕರೆದಾಗ ನಾನು ಆತನ ಕಾರಿನಲ್ಲಿ ತೆರಳಿದ್ದೇನೆ. ಆ ವೇಳೆ ಆತ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದಾದ ಬಳಿಕ ಆತ ಹಣದ ಆಮಿಷ ತೋರಿಸಿ ಜೊತೆಗೆ ಬರುವಂತೆ ಒತ್ತಾಯಿಸುತ್ತಿದ್ದ.

ಆ.24ರಂದು ಸಂಜೆ 5 ಗಂಟೆಗೆ ಡ್ರಾಫ್ ಕೊಡುವುದಾಗಿ ಹೇಳಿ ಅತ್ತಾವರ ಆಸ್ಪತ್ರೆಯ ಬಳಿ ನನಗಾಗಿ ಕಾದು ಕುಳಿತಿದ್ದ. ನನ್ನನ್ನು ನೋಡಿ ಬಲವಂತವಾಗಿ ಕಾರಿನೊಳಗೆ ಆತ ಸೆಳೆದಾಗ ನಾನು ಸಹಾಯಕ್ಕೆ ಕೂಗಿಕೊಂಡೆ. ಆಗ ಅಲ್ಲಿದ್ದವರು ನನ್ನನ್ನು ಆತನಿಂದ ಬಿಡಿಸಿದ್ದಾರೆ. ಈ ಸಂದರ್ಭ ಆತ ತನ್ನೊಂದಿಗಿರುವ ವೀಡಿಯೊ ಇದ್ದು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನನಗೆ ಆತನಿಂದ ರಕ್ಷಣೆ ನೀಡಬೇಕು ’’ ಎಂದು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾಳೆ.

ವರದಿ ಕೃಪೆ :ವಾಭಾ

Write A Comment