ಮಂಗಳೂರು, ಆ.26: ಕರಾವಳಿ ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿಯ ವಿರುದ್ಧ ಚಳವಳಿ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ನಿರಂತರ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು, ಸಿದ್ದರಾಮಯ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅತ್ತಾವರದಲ್ಲಿ ಭಿನ್ನಕೋಮಿನ ಯುವತಿಯೊಂದಿಗಿದ್ದ ಯುವಕನಿಗೆ ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿರುವುದರ ವಿರುದ್ಧ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ ಪ್ರತಿಭಟನೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದ ಸಂದರ್ಭದಲ್ಲಿ ಈಗ ಸಚಿವರಾಗಿರುವ ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ.ಖಾದರ್, ವಿನಯಕುಮಾರ್ ಸೊರಕೆ, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೊ ವಿರುದ್ಧ್ದ ಧ್ವನಿಯೆತ್ತಿ ಅಧಿಕಾರಕ್ಕೇರಿದ್ದರು. ಆದರೆ ಅವರು ಸಚಿವರಾದ ನಂತರ ಮಂಗಳೂರಿನಲ್ಲಿ ಅನೈತಿಕ ಗೂಂಡಾಗಿರಿ ಪ್ರಕರಣಗಳು ಕಡಿಮೆಯಾಗಿಲ್ಲ. ಜಾತ್ಯತೀತ ಸರಕಾರದಲ್ಲಿ ಅಲ್ಪಸಂಖ್ಯಾತರು ಪೆಟ್ಟು ತಿನ್ನುತ್ತಿದ್ದಾರೆ. ಸಚಿವರು ಜಿಲ್ಲೆಯ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಆರೋಪಿಸಿದರು.
ಸೊಮವಾರ ಅತ್ತಾವರದಲ್ಲಿ ನಗ್ನಗೊಳಿಸಿ ಹಲ್ಲೆ ಮಾಡಿದ್ದು ಶಾಕೀರ್ ಎಂಬ ಯುವಕನಿಗೆ ಅಲ್ಲ. ಅದು ಸಿದ್ದರಾಮಯ್ಯ ಅವರನ್ನು ಬೆತ್ತಲೆ ಮಾಡಿ ಅವರ ಸರಕಾರಕ್ಕೆ ಸಂಘಪರಿವಾರ ಕೊಟ್ಟ ಏಟು. ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ 2 ಕಿ.ಮೀ. ದೂರದಲ್ಲಿ ಇರುವ ಅತ್ತಾವರದಲ್ಲಿ ಈ ಘಟನೆ ನಡೆದು ಒಂದು ಗಂಟೆ ತನಕ ಪೊಲೀಸರಿಗೆ ಘಟನಾಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದಾದರೆ ದಕ್ಷಿಣ ಕನ್ನಡದ ಕಾನೂನುಪಾಲನೆ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ಶರಣ್ ಪಂಪ್‌ವೆಲ್ ಬಂಧನಕ್ಕೆ ಆಗ್ರಹ:
ಬಜರಂಗದಳ ಸಂಘಟನೆ ಗೂಂಡಾಗಿರಿ ಮಾಡಲು ಹುಟ್ಟಿದ ಸಂಘಟನೆಯಾಗಿದೆ. ಶಾಕಿರ್‌ನೊಂದಿಗಿದ್ದ ಯುವತಿಯಿಂದ ಸುಳ್ಳು ದೂರುಗಳನ್ನು ನೀಡಿ ಪ್ರಕರಣ ಹಾದಿ ತಪ್ಪಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಯುವತಿ ರಕ್ಷಣೆ ಕೋರಿದ್ದಳು ಎಂದು ಹಾದಿ ತಪ್ಪಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟು ಹರಿದಾಡುತ್ತಿರುವ ವೀಡಿಯೋದಲ್ಲಿ ಯುವತಿಗೆ ಕೆಲವು ವ್ಯಕ್ತಿಗಳು ಬೈಯುತ್ತಿರುವುದು ದಾಖಲಾಗಿದೆ. ಆಕೆಯ ಪೊಟೊ ತೆಗೆಯುವಾಗ ಆಕೆ ಮುಖ ಮುಚ್ಚಿಕೊಂಡಿದ್ದಾಳೆ.
ಘಟನೆ ಆದ ನಂತರ ಸಂಘಪರಿವಾರದಿಂದ ಯುವತಿಯಿಂದ ಹಲ್ಲೆ ಮಾಡಿದ ಗೂಂಡಾಗಳನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ಆಕೆಯಿಂದ ಸುಳ್ಳು ದೂರನ್ನು ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ನೀಡಿಸಿದ್ದಾರೆ. ಶರಣ್ ಪಂಪ್ ವೆಲ್ ಅವರ ಖಾಸಗಿ ಕಚೇರಿಯಲ್ಲಿ ಯುವತಿಯಿಂದ ಪತ್ರಿಕಾಗೋಷ್ಠಿಯನ್ನು ನಡೆಸಲಾಗಿದೆ. ಇದೆಲ್ಲ ನೋಡಿದರೆ ಶರಣ್ ಪಂಪ್‌ವೆಲ್ ಈ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದಾರೆ ಎಂಬುದು ತಿಳಿಯುತ್ತದೆ. ಶಾಕಿರ್ ಮೇಲಿನ ದೂರನ್ನು ರದ್ದುಗೊಳಿಸಬೇಕು ಮತ್ತು ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಶರಣ್ ಪಂಪ್‌ವೆಲ್‌ರನ್ನು ಬಂಧಿಸಬೇಕೆಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಪ್ರತಿಭಟನ ಸಭೆಯಲ್ಲಿ ಬ್ಯಾಂಕ್ ನೌಕರರ ಸಂಘದ ಮುಖಂಡ ಬಿ.ಎಂ. ಮಾಧವ, ಸಿಪಿಎಂ ಮುಖಂಡ ವಾಸುದೇವ ಉಚ್ಚಿಲ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಇಮ್ತಿಯಾಝ್, ಸಂತೋಷ್ ಬಜಾಲ್, ಮುಹಮ್ಮದ್ ಸ್ವಾಲಿ ಬಜ್ಪೆ, ರಫೀಕ್ ಹರೇಕಳ, ಪ್ರಮೀಳಾ ಶಕ್ತಿನಗರ, ಜೀವನ್‌ರಾಜ್ ಕುತ್ತಾರ್, ಶಾಕೀರ್ ಸಹೋದರರಾದ ಮುಸ್ತಫಾ, ನಿಸಾರ್ ಉಪಸ್ಥಿತರಿದ್ದರು.