ಮಂಗಳೂರು, ಆಗಸ್ಟ್.21 : ಬಾಲಾಪರಾಧಿಗಳನ್ನು ಪೊಲೀಸ್ ಪೇದೆಯಿಂದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯವರೆಗೂ ಬಂಧಿಸುವ ಅಧಿಕಾರವಿದ್ದರೂ, ಸಂಬಂಧಪಟ್ಟ ಠಾಣೆಗೆ ಕರೆದೊಯ್ದ ಬಳಿಕ ಪ್ರಕರಣದ ವಿಚಾರಣೆ ಹಾಗೂ ಬಾಲನ್ಯಾಯ ಮಂಡಳಿ ಎದುರು ಹಾಜರುಪಡಿಸುವ ಕಾರ್ಯ ಠಾಣೆಯ ಮಕ್ಕಳ ಕಲ್ಯಾಣಾಧಿಕಾರಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ ಎಂದು ಬಾಲನ್ಯಾಯ ಮಂಡಳಿಯ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ಎಸ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ದ.ಕ. ಜಿಲ್ಲಾ ವ್ಯಾಪ್ತಿಯ 13 ಪೊಲೀಸ್ ಠಾಣೆಗಳ ಮಕ್ಕಳ ಕಲ್ಯಾಣಾಧಿಕಾರಿಗಳು, ಪೊಲೀಸ್ ಉಪ ನಿರೀಕ್ಷಕರು, ವೃತ್ತ ನಿರೀಕ್ಷಕರು, ಪೊಲೀಸ್ ಉಪ ವಿಭಾಗಾಧಿ ಕಾರಿ, ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಆಯೋಜಿಸಲಾದ ‘ಮಕ್ಕಳ ಪ್ರಕರಣಗಳ ಅವಲೋಕನಾ ಸಭೆ ಹಾಗೂ ಮಾಹಿತಿ ಕಾರ್ಯಾಗಾರ’ದಲ್ಲಿ ಅವರು ಈ ವಿಷಯ ತಿಳಿಸಿದರು.
ಬಾಲಾಪರಾಧಿಗಳನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸುವ ಸಂದರ್ಭ ಬಹುತೇಕ ಪ್ರಕರಣಗಳಲ್ಲಿ ಸಂಬಂಧಪಟ್ಟ ಠಾಣಾ ಮಕ್ಕಳ ಕಲ್ಯಾಣಾಧಿಕಾರಿ ಇಲ್ಲದಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರ ಜತೆ ಹಲವಾರು ಸಂದರ್ಭಗಳಲ್ಲಿ ನಿಷ್ಠುರವಾಗಿ ನಡೆದುಕೊಳ್ಳಬೇಕಾದ ಪ್ರಸಂಗವೂ ಎದುರಾಗಿದೆ. ಇಂತಹ ತಪ್ಪುಗಳು ಆಗಬಾರದು. ಬಾಲಾಪರಾಧಿಯನ್ನು ಬಂಧಿಸಿದ ಬಳಿಕ ಠಾಣಾ ಕಲ್ಯಾಣಾಧಿಕಾರಿಯ ಎದುರಿನಲ್ಲೇ ಆತನ ವಿಚಾರಣೆ ನಡೆಯಬೇಕು.
ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸುವವರೆಗೂ ಆತ ಕಲ್ಯಾಣಾಧಿಕಾರಿಯ ವಶದಲ್ಲೇ ಇರಬೇಕು ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದರು. 18 ವರ್ಷದೊಳಗಿನ ಮಕ್ಕಳನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಿ ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸುವ ಸಂದರ್ಭ ಆ ಮಕ್ಕಳ ಪೋಷಕರು ಅಥವಾ ನಿಕಟ ಸಂಬಂಧಿಗಳ ಸಮ್ಮುಖದಲ್ಲೇ ಹಾಜರುಪಡಿಸುವುದು ಉತ್ತಮ. ಬಾಲಾಪರಾಧ ಪ್ರಕರಣಗಳಿಗೆ ಸಂಬಂಧಿಸಿ ಜಾಮೀನು ನೀಡಬೇಕಾಗುವುದು ಕಡ್ಡಾಯ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಬಾಲಾಪರಾಧಿಗಳನ್ನು ಬಿಡುಗಡೆ ಮಾಡುವುದರಿಂದ ಸಮಾಜದಲ್ಲಿ ಸಂಘರ್ಷ, ಕಲಹಕ್ಕೆ ಕಾರಣವಾಗುವುದಾದರೆ ಈ ಬಗ್ಗೆ ಮಂಡಳಿ ಎದುರು ಪೊಲೀಸರು ವಿವರ ನೀಡಬೇಕು. ಅಂತಹ ಸಂದರ್ಭಗಳಲ್ಲಿ ಬಾಲಪರಾಧಿಗಳನ್ನು ಶಿವಮೊಗ್ಗ ದಲ್ಲಿರುವ ಸವೇಕ್ಷಣಾ ಮಂದಿರಕ್ಕೆ ಕಳುಹಿಸಲಾಗುತ್ತದೆ.
ಬಾಲಪರಾಧಿಗಳಿಗೆ ಗರಿಷ್ಠ 3 ವರ್ಷಗಳ ಸಜೆಯನ್ನಷ್ಟೇ ನೀಡಬಹುದಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಅವರ ಮನ ಪರಿವರ್ತನೆಗಾಗಿ ಸಮುದಾಯ ಸೇವೆ ಅಥವಾ ಆಸ್ಪತ್ರೆಗಳಲ್ಲಿ ಸೇವೆಗೆ ಕಳುಹಿಸುವ ಮೂಲಕ ಶಿಕ್ಷೆಯನ್ನೂ ವಿಧಿಸಬಹುದಾಗಿದೆ ಎಂದು ಅವರು ವಿವರ ನೀಡಿದರು. ದ.ಕ. ಜಿಲ್ಲಾ ಬಾಲ ನ್ಯಾಯ ಮಂಡಳಿ ಆರಂಭಗೊಂಡಾಗಿನಿಂದ ಈವರೆಗೆ ಒಟ್ಟು 180ರಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಇದರಲ್ಲಿ 100 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ವಾರದಲ್ಲಿ ಒಂದು ಬಾರಿ ಬೊಂದೇಲ್‌ನ ಬಾಲ ಮಂದಿರದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ ಎಂದವರು ಹೇಳಿದರು.
ಎಳೆ ವಯಸ್ಸಿನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ನಿಟ್ಟಿನಲ್ಲಿ ಬಾಲ ನ್ಯಾಯ ಕಾಯ್ದೆಯಡಿ ಹಲವಾರು ಅವಕಾಶಗಳಿವೆ. ಕಾಯ್ದೆಯಡಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸಿದ ಬಳಿಕ 4 ತಿಂಗಳಲ್ಲಿ ವಿಚಾರಣೆ ಮುಗಿಸಬೇಕು. ಪ್ರತಿಯೊಂದು ಠಾಣೆಗಳ ಪಿಎಸ್ಸೈಯನ್ನೇ ಬಾಲ ಕಲ್ಯಾಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಎಎಸ್ಸೈ ಬಾಲ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆ ಸಂದರ್ಭ ಮಕ್ಕಳ ಜತೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆಂಬ ಬಗ್ಗೆ ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಮಾಹಿತಿ ನೀಡಿದರು.
ದ.ಕ. ಜಿಲ್ಲೆಯಲ್ಲಿ ಕಳೆದ 2013ರಲ್ಲಿ 9, 2014ರಲ್ಲಿ 7 ಹಾಗೂ 2015ರಲ್ಲಿ 4 ಬಾಲಪರಾಧಿ ಪ್ರಕರಣಗಳು ದಾಖಲಾಗಿವೆ. ಪೋಕ್ಸೊ ಕಾಯ್ದೆಯಡಿ ಇದೇ ಅವಧಿಯಲ್ಲಿ ಅನುಕ್ರಮವಾಗಿ 22, 37 ಹಾಗೂ 41 ಪ್ರಕರಣಗಳು ದಾಖಲಾಗಿವೆ ಎಂದು ಡಾ. ಶರಣಪ್ಪ ತಿಳಿಸಿದರು.
ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶನಾಲಯದ ಲಿಂಗ ಸಂವೇದನಾಶೀಲತೆ ವಿಭಾಗದ ರವೀನಾ ಹಾಗೂ ಸೋಮಶೇಖರ್ ಕಾರ್ಯಾಗಾರ ನಿರ್ವಹಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.