ಕನ್ನಡ ವಾರ್ತೆಗಳು

ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ನಿಧನ

Pinterest LinkedIn Tumblr

Pro_TC_Shankrmurthi

ಕೊಣಾಜೆ, ಆ.20: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮೂಲತಃ ಮೈಸೂರಿನ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಮೈಸೂರು ವಿವಿಯಲ್ಲಿ ಪ್ರಭಾರ ಕುಲಪತಿ ಯಾಗಿದ್ದ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 2010ರ ಮಾ.1ರಂದು ಕುಲಪತಿಯಾಗಿ ನೇಮಕ ಗೊಂಡಿದ್ದರು. 2014ರ ಮಾ.3ರವರೆಗೆ ಅಧಿಕಾರದಲ್ಲಿದ್ದರು. ಮೈಸೂರು ವಿವಿಯಲ್ಲಿ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದ ಅವರು ಒಟ್ಟಾವಾ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು 37 ವರ್ಷಗಳ ಕಾಲ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು ಸಿಂಡಿಕೇಟ್, ಸೆನೆಟ್ ಕಮಿಟಿ ಹಾಗೂ ಕರ್ನಾಟಕ ಜ್ಞಾನ ಆಯೋಗ, ಕರ್ನಾಟಕ ಉನ್ನತ ಶಿಕ್ಷಣ ಆಯೋಗ, ಯುಜಿಸಿ ಹೀಗೆ ಹಲವಾರು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ಪ್ರೊ. ಶಿವಶಂಕರಮೂರ್ತಿ ಔರಂಗಾಬಾದ್ ನಗರದಲ್ಲಿ ನ್ಯಾಕ್ ಕಮಿಟಿಯ ಸಭೆಯಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸಂತಾಪ ಸಭೆ
ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಟಿ.ಸಿ.ಶಿವಶಂಕರಮೂರ್ತಿ ನಿಧನದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಸಂತಾಪ ಸೂಚಕ ಸಭೆಯು ಬುಧವಾರ ಸಂಜೆ ಮಂಗಳಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ, ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಅವರು ಸದಾ ಗಂಭೀರವಾಗಿ ನಮಗೆ ಕಂಡರೂ ಅವರ ಮನಸ್ಸು ಅಷ್ಟೇ ಮೃದುವಾಗಿತ್ತು. ಅವರು ಆಡಳಿತಕ್ಕೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಿದವರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಕೋರಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ, ಕಲಾ ನಿಕಾಯದ ಡೀನ್ ಪ್ರೊ.ಕೆ.ಚಿನ್ನಪ್ಪ ಗೌಡ, ಪ್ರೊ.ಫಕೀರಪ್ಪ ಮುಂತಾದವರು ಈ ಸಂದರ್ಭ ಅವರ ಸೇವೆಯನ್ನು ಸ್ಮರಿಸಿದರು. ಸಂತಾಪ ಸಭೆಯಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

Write A Comment