ಮಂಗಳೂರು, ಆ.17: ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದಿಂದ ಹೊರ ಬಿಡಲಾಗುತ್ತಿರುವ ದಟ್ಟವಾದ ಹೊಗೆ(ಕಾರ್ಬನ್) ಇದೀಗ ಕೆಂಜಾರು ವಿನಲ್ಲೂ ಕಾಣಿಸಿಕೊಳ್ಳುತ್ತಿದ್ದು, ವ್ಯಾಪಕ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದ ಆಕ್ರೋಶಿತರಾಗಿರುವ ಪರಿಸರವಾಸಿಗಳು ರವಿವಾರ ಇಲ್ಲಿಗೆ ಆಗಮಿಸಿದ ಎಂಆರ್‌ಪಿಎಲ್ ನಿರ್ದೇಶಕರ ಬಟ್ಟೆಗಳಿಗೆ ತಮ್ಮ ಕೈಗಳಿಗೆ ಅಂಟಿದ್ದ ಕಪ್ಪು ಮಸಿಯನ್ನು ಹಚ್ಚಿ ಪ್ರತಿಭಟಿಸಿದರು.
ಕೋಕ್ ಸಲ್ಫರ್ ಘಟಕದಿಂದ ಕೆಂಜಾರು ಪರಿಸರದ ಮನೆಗಳು ಸೇರಿದಂತೆ ಸುತ್ತಮುತ್ತ ಪ್ರದೇಶ ದಟ್ಟ ಕಪ್ಪುಹೊಗೆ ಆವರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯದ ಬಗ್ಗೆ ಎಂಆರ್‌ಪಿಎಲ್ ನಿರ್ದೇಶಕ ವೆಂಕಟೇಶ್ ಇಂದು ಪರೀಶೀಲನೆಗೆ ಆಗಮಿಸಿದ್ದರು. ಈ ವೇಳೆ ಸ್ಥಳೀಯ ಜನರು ತಮ್ಮ ಕೈಗಳಿಗೆ ಅಂಟಿದ್ದ ಕಪ್ಪು ಮಸಿಯನ್ನು ಅವರ ಬಟ್ಟೆಗೆ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರದಂದು ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಮತ್ತು ಕೆಂಜಾರು ಪ್ರದೇಶದಲ್ಲಿ ಕಾರ್ಬನ್ ಬೂದಿ ಮಿಶ್ರಿತ ಹೊಗೆ ಹಾರಾಟ ಮತ್ತು ವಿಪರೀತ ದುರ್ವಾಸನೆ ಜನರ ನಿದ್ದೆಗೆಡಿಸಿತ್ತು. ಮನೆಗಳಲ್ಲಿ ಇದ್ದ ಪಾತ್ರೆ ಬಟ್ಟೆ ಅಂಗಳದಲ್ಲಿ ಮಸಿಯಿಂದಾಗಿ ಕಂಗೆಟ್ಟ ಸ್ಥಳೀಯರು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಇಂದು ಮುಂಜಾನೆ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಿಭಾಗದ ಅಧಿಕಾರಿ ಲಕ್ಷ್ಮೀಕಾಂತ್ ಹಾಗೂ ಎಂಆರ್‌ಪಿಎಲ್ ನಿರ್ದೇಶಕ ವೆಂಕಟೇಶ್ ತಮ್ಮ ತಂಡದೊಂದಿಗೆ ಪರಿಶೀಲನೆಗೆ ಬಂದಿದ್ದರು. ಅಧಿಕಾರಿಗಳು ಪರಿಸರದಲ್ಲಿ ಶೇಖರಣೆಗೊಂಡಿದ್ದ ಮಸಿಯ ಸ್ಯಾಂಪಲ್ ಸಂಗ್ರಹಿಸುತ್ತಿದ್ದ ವೇಳೆ ಸ್ಥಳೀಯ ನಾಗರಿಕರು ವೆಂಕಟೇಶ್‌ರ ಬಿಳಿ ಬಟ್ಟೆಗೆ ಕೋಕ್ ಸಲ್ಫರ್‌ನ ಕಪ್ಪುಬೂದಿಯನ್ನು ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸ್ಥಳೀಯ ಜನರ ದೂರಿನ ಹಿನ್ನೆಲೆಯಲ್ಲಿ ಕೆಂಜಾರು ಪ್ರದೇಶದಲ್ಲಿ ಎಂಆರ್‌ಪಿಎಲ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಮನೆಯ ಮೇಲೆ, ಗಿಡಮರಗಳ ಮೇಲೆ ಕಾಣಿಸಿಕೊಂಡ ಕಾರ್ಬನನ್ನು ಸಂಗ್ರಹಿಸಲಾಗಿದ್ದು, ಅದನ್ನು ಎಂಆರ್‌ಪಿಎಲ್‌ನವರು ಪ್ರಯೋಗಾಲಯಕ್ಕೆ ಕೊಂಡೊಯ್ದು ಪರಿಶೀಲನೆ ನಡೆಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಅದರ ವರದಿ ಬರಲಿದ್ದು, ಕಾರ್ಬನ್ ಎಲ್ಲಿಂದ ಬಂದಿದೆ ಎಂಬುದು ತಿಳಿಯಲಿದೆ. ಆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.