ಮಂಗಳೂರು, ಆ.13: ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭಗೊಂಡು ಸುಮಾರು ಏಳು ವರ್ಷಗಳಾದರೂ ಇನ್ನೂ ಪೂರ್ಣಗೊಳ್ಳದಿರುವುದು, ಕಳಪೆ ಕಾಮಗಾರಿ, ಈಗಾಗಲೇ ಕಪ್ಪು ಪಟ್ಟಿಗೆ ಸೇರಿಸಿದ ಗುತ್ತಿಗೆ ದಾರರಿಗೆ ಮತ್ತೆ ಗುತ್ತಿಗೆ ಮೊದಲಾದ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಯೋಜನೆಯ ಬಗ್ಗೆ ಲೋಕಾಯುಕ್ತ ತನಿಖೆಗೊಳಪಡಿಸಲು ದ.ಕ. ಜಿಪಂ ನಿರ್ಣಯಿಸಿದೆ.
ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಗುತ್ತಿಗೆದಾರರನ್ನು ಮತ್ತೆ ಕಪ್ಪು ಪಟ್ಟಿಗೆ ಸೇರಿಸುವಂತೆಯೂ ನಿರ್ಣಯಿಸಿ ಸರಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಜಿಪಂ ಸದಸ್ಯ ಈಶ್ವರ ಕಟೀಲು ವಿಷಯ ಪ್ರಸ್ತಾಪಿಸಿ, ಸುಮಾರು 20 ಕೋಟಿ ರೂ.ಗಳ, 20 ಗ್ರಾಮಗಳಿಗೆ ನೀರು ಒದಗಿಸುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಏಳು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಕಾಮಗಾರಿ ಪೂರ್ಣಗೊಳಿಸಲು ಹಲವು ಅಂತಿಮ ಗಡುವಿನ ಬಳಿಕವೂ ಕಾಮಗಾರಿ ಪೂರ್ಣವಾಗಿಲ್ಲ. ಮಾತ್ರವಲ್ಲದೆ, ಈಗಾಗಲೇ ಆಗಿರುವ ಕಾಮಗಾರಿಯಲ್ಲಿ ಸಾಕಷ್ಟು ಲೋಪ ದೋಷಗಳು ಕಂಡುಬಂದಿವೆ ಎಂದು ಆರೋಪಿಸಿದರು.
ಈ ಹಿಂದೆ ಕಾಮಗಾರಿ ವಹಿಸಿಕೊಂಡಿದ್ದ ಸಾಯಿಸುಧೀರ್ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ನಿರ್ಣಯಿಸಲಾಗಿತ್ತು. ಹಾಗಿದ್ದರೂ ಮತ್ತೆ ಕಾಮಗಾರಿಯನ್ನು ಅದೇ ಗುತ್ತಿಗೆದಾರರಿಗೆ ವಹಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದರು. ಕಪ್ಪು ಪಟ್ಟಿಗೆ ಸೇರಿಸಿದ ಬಳಿಕ ಮರು ಟೆಂಡರ್ ಕರೆಯಲಾಗಿತ್ತು. ಆದರೆ ಅರ್ಧ ಮುಗಿದಿರುವ ಕಾಮಗಾರಿಯನ್ನು ವಹಿಸಲು ಯಾರೂ ಮುಂದೆ ಬಾರದ ಕಾರಣ ಅವರೇ ಕಾಮಗಾರಿ ಮುಂದುವರಿಸಿದ್ದಾರೆಂಬ ಉತ್ತರವನ್ನು ಅಧಿಕಾರಿಗಳು ನೀಡಿದರು. ಇದನ್ನು ಆಕ್ಷೇಪಿಸಿದ ಸದಸ್ಯ ಕೊರಗಪ್ಪ ನಾಯ್ಕ, ಮಧ್ಯದಲ್ಲೊಮ್ಮೆ ಮುಗೆರಡಿ ಕನ್‌ಸ್ಟ್ರಕ್ಷನ್‌ನವರಿಗೆ ಕಾಮಗಾರಿ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಸದಸ್ಯ ದೇವರಾಜ್ ಕೆ. ಮಾತನಾಡಿ, ಕುಡಿಯುವ ನೀರಿಗಾಗಿನ ಇಂತಹ 20 ಕೋಟಿ ರೂ.ನ ಮಹತ್ವದ ಯೋಜನೆಯಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದರು. ಈ ವೇಳೆ ಮಾತನಾಡಿದ ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಗುತ್ತಿಗೆದಾರರ ಕಳಪೆ ಕಾಮಗಾರಿ ಹಾಗೂ ವಿಳಂಬದ ಹಿನ್ನೆಲೆಯಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊಸ ಟೆಂಡರ್‌ಗೆ ಒತ್ತಾಯಿಸಿ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಲಾಗಿತ್ತು. ಆದರೆ ಸರಕಾರದ ಮೂಲಕ ಮತ್ತೆ ಹಳೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಇದು ಜಿಲ್ಲೆಯ ಪಾಲಿಗೆ ಕಳಂಕ ಎಂದು ಬೇಸರ ವ್ಯಕ್ತಪಡಿಸಿದರು.
ವಿಳಂಬ ಹಾಗೂ ಕಳಪೆ ಕಾಮಗಾರಿಯ ಬಗ್ಗೆ ಐದು ವರ್ಷಗಳಲ್ಲಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದಿರುವುದು ಜಿಪಂ ಆಡಳಿತದ ವೈಫಲ್ಯ ಎಂದು ಸದಸ್ಯೆ ಸರಸ್ವತಿ ಕಾಮತ್ ಆರೋಪಿಸಿದರು.
ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆದು ಸಂಪೂರ್ಣ ಕಾಮಗಾರಿಯನ್ನು ಲೋಕಾ ಯುಕ್ತ ತನಿಖೆಗೆ ವಹಿಸುವಂತೆ ಹಾಗೂ ಪ್ರಸ್ತುತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ದಾರರನ್ನು ಮತ್ತೆ ಕಪ್ಪುಪಟ್ಟಿಗೆ ಸೇರಿಸಲು ನಿರ್ಣ ಯಿಸುವುದಾಗಿ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ತಿಳಿಸಿದರು.
ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮೀನಾಕ್ಷಿ ಮಂಜುನಾಥ, ಸಿ.ಕೆ.ಚಂದ್ರಕಲಾ, ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು.