ಮಂಗಳೂರು, ಆ.9: ಕರಾವಳಿ ಜಿಲ್ಲೆ ಹಾಗೂ ಮಲೆ ನಾಡು ಪ್ರದೇಶದ ಜನರು ಎತ್ತಿನಹೊಳೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಸಾರ್ವಜನಿಕ ಅಹವಾಲು ಸ್ವೀಕರಿಸದೇ ಸರಕಾರ ಯೋಜನೆ ಆರಂಭಿಸಿರುವುದು ಜನತೆಗೆ ಮಾಡಿರುವ ಅನ್ಯಾಯ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ ಆಕ್ಷೇಪ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಚಯದ ಸಂಚಾಲಕ ದಿನೇಶ್ ಹೊಳ್ಳ, ಸಕಲೇಶಪುರದ ಬಳಿ ಈಗಾಗಲೇ ಎತ್ತಿನಹೊಳೆ ಯೋಜನೆಗಾಗಿ ಬೃಹದಾ ಕಾರದ ಪೈಪ್‌ಗಳನ್ನು ಜೋಡಿಸುವ ಕಾರ್ಯ ಆರಂಭ ಗೊಂಡಿದ್ದು, ಇದಕ್ಕಾಗಿ ಸಕಲೇಶಪುರದ ಕುಂಬರಡಿ, ಕೆಸಗಾನಹಳ್ಳಿ, ಹೆಬ್ಬಸಾಲೆ, ಕುಡುವರ ಹಳ್ಳಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳನ್ನು ಕಡಿದು ರಸ್ತೆ ನಿರ್ಮಿಸಿ ಕಾಮಗಾರಿ ನಡೆಯುತ್ತಿದೆ. ಅಂಕಿಹಳ್ಳಿ, ಹೆಬ್ಬನಳ್ಳಿ, ಸತ್ತಿಗಾಲದಲ್ಲಿ 48 ಎಕರೆಗೂ ಅಧಿಕ ಖಾಸಗಿ ಕೃಷಿ ಜಾಗದಲ್ಲಿ 1,200 ಕೋ.ರೂ. ವೆಚ್ಚದಲ್ಲಿ ತಲಾ 16 ಅಡಿ ವ್ಯಾಸದ ಕೊಳವೆಗಳನ್ನು ರಾಶಿ ಹಾಕಲಾಗಿದೆ ಎಂದು ತಿಳಿಸಿದರು.
ಸಂಚಯದ ತಂಡವು ಕೆಲ ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿರುವ ಈ ಪ್ರದೇಶಕ್ಕೆ ಭೇಟಿ ನೀಡಿದ್ದು, ಯೋಜನೆಯ ಆರಂಭದಲ್ಲಿ ಆಗಬೇಕಾದ ನೀರಿನ ಸಂಗ್ರಹ, ನೀರಿನ ಹರಿವು ಪ್ರದೇಶ, ಶೇಖರಣಾ ವ್ಯಾಪ್ತಿಯ ನಿಖರ ಸಮೀಕ್ಷೆಯಾಗದಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಅಣೆಕಟ್ಟು ನಿರ್ಮಾ ಣವಾಗದೆ ಯೋಜನೆಯ ಅಂತ್ಯದಲ್ಲಿ ಆಗಬೇಕಾದ ಕೊಳವೆಗಳನ್ನು ರಾಶಿ ಹಾಕಿರುವುದು ನೋಡಿದರೆ ಇದು ಜನರ ಕಣ್ಣಿಗೆ ಮಣ್ಣೆರಚುವ ಹುನ್ನಾರವಾಗಿ ಗೋಚರಿ ಸುತ್ತದೆ ಎಂದು ಹೊಳ್ಳ ಆಪಾದಿಸಿದರು.
ಪರಿಸರ ತಜ್ಞ ಟಿ.ವಿ.ರಾಮಚಂದ್ರರವರು ಎತ್ತಿನಹೊಳೆಯಿಂದ ಕೇವಲ 9 ಟಿಎಂಸಿ ನೀರು ಲಭಿ ಸಬಹುದೆಂದು ವೈಜ್ಞಾನಿಕ ವರದಿ ನೀಡಿರುತ್ತಾರೆ. ಆದರೆ ಅಲ್ಲಿನ ಈಗಿನ ಪರಿಸ್ಥಿತಿಯನ್ನು ಗಮನಿಸುವಾಗ ನೀರಿನ ಹರಿವು ತೀರಾ ಕಡಿಮೆಯಾಗಿದ್ದು, 4 ಟಿಎಂಸಿ ಕೂಡಾ ಲಭ್ಯವಾಗುವ ಸಾಧ್ಯತೆ ಇಲ್ಲವಾಗಿದೆ. ಹೀಗಿರುವಾಗ ಸರಕಾರ ಗುಪ್ತವಾಗಿ ಉಳಿದ ನೀರಿಗಾಗಿ ಕುಮಾರಧಾರಾ ನದಿಯನ್ನು ಯೋಜನೆಗೆ ಬಳಸಿಕೊಳ್ಳಲು ಸಮೀಕ್ಷೆ ನಡೆಸುತ್ತಿದೆ. ಹೆಬ್ಬಸಾಲೆ ಪ್ರದೇಶದಲ್ಲಿ ಕಾಡುಮನೆ ಹೊಳೆ, ಹಕ್ಕಿಹೊಳೆ, ಕಬ್ಬಿನಾಲೆ ಹೊಳೆಯನ್ನು ಎತ್ತಿನಹೊಳೆಗೆ ಜೋಡಿಸಿ ನೀರೆತ್ತುವಲ್ಲಿ ಹೇಮಾವತಿ ನದಿ ಹರಿಯುತ್ತಿದೆ. ಹೇಮಾವತಿ ಕಾವೇರಿಯ ಉಪನದಿಯಾಗಿದ್ದು, ಮುಂದೊಂದು ದಿನ ಕಾವೇರಿ ನದಿ ವಿವಾದವು ರಾಜ್ಯ ಹಾಗೂ ಜಿಲ್ಲೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.
ಈ ಯೋಜನೆಯ ಅಣೆಕಟ್ಟು, ಪೈಪ್‌ಲೈನ್ ಆಗುತ್ತಿರುವಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು ಬೆಂಗಳೂರು ರೈಲ್ವೆ ಹಳಿ ಇರುವು ದರಿಂದ ರೈಲು ಹಾಗೂ ರಸ್ತೆ ಸಂಚಾರಕ್ಕೂ ಅಡ್ಡಿಯಾಗಲಿದೆ ಎಂದವರು ಆತಂಕ ವ್ಯಕ್ತಪಡಿಸಿದರು. ಯೋಜನೆಯ ಕುರಿತು ದ.ಕ. ಜಿಲ್ಲೆಯ ಜನಪ್ರತಿ ನಿಧಿಗಳು ವೌನವಾಗಿದ್ದಾರೆ. ಕಳೆದ ಲೋಕಸಭಾ ಚುನಾ ವಣೆಯ ಸಂದರ್ಭ ಈಗಿನ ಸಂಸದ ನಳಿನ್‌ಕುಮಾರ್ ಕಟೀಲ್ ಯಾವುದೇ ಕಾರಣಕ್ಕೂ ಎತ್ತಿನಹೊಳೆ ಯೋಜನೆ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರೂ ಈಗ ವೌನವಾಗಿದ್ದು, ಜನತೆಯನ್ನು ವಂಚಿಸುತ್ತಿದ್ದಾರೆ.
ಸಹ್ಯಾದ್ರಿ ಸಂರಕ್ಷಣಾ ಸಂಚಯವು ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಎತ್ತಿನಹೊಳೆ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ನಗರದ ಕಣ್ಣೂರಿನಲ್ಲಿ ಪೈಪ್‌ಲೈನ್ ಒಡೆದ ಪರಿಣಾಮ ಐದು ದಿನ ನೀರಿಲ್ಲದೆ ಮಂಗಳೂರಿನ ಜನರು ಪರದಾಡುವಂತಾಗಿತ್ತು. ಇದೀಗ ಈ ಯೋಜನೆಯಿಂದ ಇಡೀ ಕರಾವಳಿ ಜಿಲ್ಲೆಗಳೇ ಕಂಗಾಲಾಗಲಿವೆ. ಈ ಹಿನ್ನೆಲೆಯಲ್ಲಿ ಜನತೆ ಯೋಚಿಸಬೇಕಾಗಿದೆ. ಒಗ್ಗಟ್ಟಿನ ಪ್ರದರ್ಶನವಾಗಬೇಕಿದೆ ಎಂದು ದಿನೇಶ್ ಹೊಳ್ಳ ತಿಳಿಸಿದರು.
ಈ ಅವೈಜ್ಞಾನಿಕ ಯೋಜನೆಯನ್ನು ಗಮನಿಸುವಾಗ ಇದು ಯಾವುದೇ ರೀತಿಯಲ್ಲಿ ನೀರಾವರಿ ಯೋಜನೆಯಲ್ಲ, ಬದಲಿಗೆ ಹಣದ ಹೊಳೆಯ ಯೋಜನೆಯಾಗಿ ಗೋಚರಿಸುತ್ತಿದೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ವೌನವಾಗಿವೆ. ಬಯಲು ಸೀಮೆ ಹಾಗೂ ಕರಾವಳಿಯ ಮಲೆನಾಡು ಜನರನ್ನು ವಂಚಿಸಿ, ಚಿಕ್ಕಬಳ್ಳಾಪುರ ಜನತೆಗೆ ಕೇವಲ ಪೈಪುಗಳನ್ನು ತೋರಿಸಿ ಕಣ್ಣಿಗೆ ಮಣ್ಣೆರಚುವ ಯೋಜನೆ ಇದಾಗಿದೆ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವರು ನೇತ್ರಾವತಿ ನದಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದಿನೇಶ್ ಹೊಳ್ಳ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಹರೀಶ್ ಅಡ್ಯಾರ್, ದಿನೇಶ್ ಕೊಡಿಯಾಲ್‌ಬೈಲ್, ಸಪ್ನಾ ನೊರೊನ್ಹ, ರಾಜೇಶ್ ದೇವಾಡಿಗ, ದಿನೇಶ್ ಪೈ, ಮಾಧವ ಉಳ್ಳಾಲ್ ಉಪಸ್ಥಿತರಿದ್ದರು.