ಕನ್ನಡ ವಾರ್ತೆಗಳು

ಬೈಂದೂರು ಅರೆಹೊಳೆ ಪ್ರೌಢಶಾಲೆ; ಅಪ್ರಾಪ್ತ ವಿದ್ಯಾರ್ಥಿ ನಡತೆ ಸಂಶಯಿಸಿ ಕೇಸು ದಾಖಲಿಸಿದ ಶಾಲಾ ಮುಖ್ಯೋಪಧ್ಯಾಯ

Pinterest LinkedIn Tumblr

crime

ಕುಂದಾಪುರ: ಯುವಕನ ನಡತೆ ಬಗ್ಗೆ ಹಾಗೂ ಆತ ಸಹಪಾಠಿ ಯುವತಿಯರಿಗೆ ಕೆಲವು ಪತ್ರಗಳನ್ನು ಬರೆಯುತ್ತಿರುವ ಅನುಮಾನದ ನೆಲೆಯಲ್ಲಿ ಯಾವುದೇ ಪುರಾವೆಗಳಿಲ್ಲದೆಯೂ ಅದೇ ಶಾಲೆಯ ಮುಖ್ಯೋಪಾಧ್ಯಾಯರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ಅರೆಶಿರೂರಿನ ಪ್ರೌಢಶಾಲೆಯೊಂದರಲ್ಲಿ ಈ ಪ್ರಸಂಗ ನಡೆದಿದೆ.

child-writing

(ಸಾಂದರ್ಭಿಕ ಚಿತ್ರ)

ಮುಖ್ಯೋಪಾಧ್ಯಾಯರು ನೀಡಿದ ದೂರಿನ ಸಾರಾಂಶ: ಕಳೆದ ಬುಧವಾರದಿಂದಲೂ ಈ ಪ್ರೌಢಶಾಲೆಯ ೯ ನೇ ತರಗತಿ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಬರೆದ ಕೆಲವು ಪತ್ರಗಳು ವಿದ್ಯಾರ್ಥಿನಿಯರು ಕೂರುವ ಬೆಂಚಿನಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಅವರು ತರಗತಿ ಶಿಕ್ಷಕರಲ್ಲಿಯೂ ದೂರಿದ್ದು ಅವರು ಈ ಬಗ್ಗೆ ತರಗತಿಯಲ್ಲಿ ಬುದ್ಧಿ ಮಾತುಗಳನ್ನಾಡಿದ್ದರು. ಆದರೂ ಈ ಪತ್ರವು ಪುನಃ ಇಡುವ ಬಗ್ಗೆ ವಿದ್ಯಾರ್ಥಿಗಳು ದೂರಿಕೊಂಡಾಗ ಶಾಲೆಯ ಮುಖ್ಯೋಪಾಧ್ಯಾಯರೇ ಖುದ್ದು ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದರು ಎನ್ನಲಾಗಿದ್ದು ಈ ವೇಳೆ ಕೆಲವು ವಿದ್ಯಾರ್ಥಿಗಳು ಓರ್ವ ವಿದ್ಯಾರ್ಥಿಯನ್ನು ಅನುಮಾನಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ಅವರು ಬೈಂದೂರು ಠಾಣೆಗೆ ದೂರು ನೀಡಿದ ಹಿನ್ನೆಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಅಪ್ರಾಪ್ತ ವಿದ್ಯಾರ್ಥಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ಪೋಷಕರು ನೀಡಿದ ಪ್ರತಿದೂರಿನ ಸಾರಾಂಶ: ಕಳೆದ ಕೆಲವು ತಿಂಗಳುಗಳ ಹಿಂದೆ ವಿಜ್ಞಾನ ಮಾದರಿ ತಯಾರಿ ವಿಚಾರ ಹಾಗೂ ಅದಕ್ಕೆ ಸಂಬಂಧಿಸಿ ಹಣದ ವಿಚಾರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಈ ವಿದ್ಯಾರ್ಥಿ ವಿರುದ್ಧ ಸಿಟ್ಟುಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಳೆದ ಶನಿವಾರ ಮಧ್ಯಾಹ್ನ ತರಗತಿ ಬಿಟ್ಟ ಮೇಲೆ ಆತನನು ತನ್ನ ಕೊಠಡಿಗೆ ಕರೆಯಿಸಿ ಆತನ ಮೇಲೆ ಅಮಾನುಷವಾಗಿ ಹಲ್ಲೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ತಮ್ಮ ಪುತ್ರ ಮಧ್ಯಾಹ್ನವಾದರೂ ಮನೆಗೆ ಬಾರದ ಕಾರಣ ಬೆದರಿದ ಆತನ ತಾಯಿ ಶಾಲೆಯ ಬಳಿ ಬಂದಾಗ ವಿದ್ಯಾರ್ಥಿ ಮುಖ್ಯಶಿಕ್ಷಕರು ಥಳಿಸಿದ ಬಗ್ಗೆ ತಿಳಿಸಿದ್ದಾರೆ. ವಿದ್ಯಾರ್ಥಿ ಪೋಷಕರು ಈ ಬಗ್ಗೆ ಬೈಂದೂರು ಠಾಣೆಗೆ ಮರುದಿನವೇ ಆತನ ವಿರುದ್ಧ ದೂರು ದಾಖಲಿಸಲು ತೆರಳಿದರೂ ದೂರು ಸ್ವೀಕರಿಸಿಲ್ಲ ಎನ್ನುವ ಆರೋಪವಿದ್ದು ಮಂಗಳವಾರ ಸಂಜೆ ಪುನಃ ವಿದ್ಯಾರ್ಥಿ ಪೋಷಕರು ದೂರು ದಾಖಲಿಸಲು ಠಾಣೆಗೆ ತೆರಳಿದ್ದು ಅಂದೂ ಕೂಡ ದೂರು ದಾಖಲಾಗಲಿಲ್ಲ. ಬದಲಾಗಿ ಗುರುವಾರ ಈ ಬಗ್ಗೆ ಮುಖ್ಯಶಿಕ್ಷಕರ ವಿರುದ್ಧ ವಿದ್ಯಾರ್ಥಿಗೆ ಹೊಡೆದ ಬಗ್ಗೆ ದೂರು ದಾಖಲಾಗಿದೆ.

ಒಟ್ಟಿನಲ್ಲಿ ವಿದ್ಯಾರ್ಥಿಗೆ ಹೊಡೆದ ಬಗ್ಗೆ ವಿದ್ಯಾರ್ಥಿ ಪೋಷಕರು ಠಾಣೆಗೆ ದೂರು ನೀಡಲು ತೆರಳಿದ್ದೇ ವಿದ್ಯಾರ್ಥಿ ವಿರುದ್ಧ ಶಾಲೆಯ ಮುಖ್ಯಶಿಕ್ಷಕರು ಆತನ ನಡತೆ ಬಗ್ಗೆ ಸಂಶಯದಲ್ಲಿಯೇ ದೂರು ದಾಖಲಿಸಲು ಕಾರಣ ಎನ್ನುವ ಮಾತುಗಳು ಈ ಭಾಗದಲ್ಲಿ ಕೇಳಿಬರುತ್ತಿದೆ.

Write A Comment