ಮಂಗಳೂರು, ಆ. 6: ಎರಡು ಪ್ರತ್ಯೇಕ ಕಳವು ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡಿನ ಚೆಮ್ನಾಡ್ ನಿವಾಸಿ ಪ್ರಕಾಶ್ ಎನ್. (35), ಅಡ್ಯಾರು ಸಹ್ಯಾದ್ರಿ ಕಾಲೇಜು ಬಳಿಯ ನಿವಾಸಿ ಮಣಿಕಂಠ (21) ಹಾಗೂ ದೇರಳಕಟ್ಟೆ ಜಲಾಲ್‌ಬಾಗ್ ನಿವಾಸಿ ಅಶ್ವಿನ್ (20) ಎಂದು ಗುರುತಿಸಲಾಗಿದೆ.
ಈ ಆರೋಪಿಗಳಿಂದ ಯಮಹಾ ಬೈಕ್, ಮೊಬೈಲ್ ಹಾಗೂ ನಗದು ಸೇರಿ ಒಟ್ಟು 95 ಸಾವಿರ ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾಂಡೇಶ್ವರ ಠಾಣೆಯ ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ ಇಂದು ಮಧ್ಯಾಹ್ನ 3:15ಕ್ಕೆ ನಗರದ ಮಹಾಕಾಳಿಪಡ್ಪು ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಆರೋಪಿ ಪ್ರಕಾಶ್ ಎಂಬಾತನನ್ನು ನಿಲ್ಲಿಸಿ ವಿಚಾರಿಸಿದ್ದು, ಆತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವು ಕಳವು ಆಗಿದ್ದ ವಾಹನವೆಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ದಸ್ತಗಿರಿ ಮಾಡಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ದ್ವಿಚಕ್ರ ವಾಹನವು ನಗರದ ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಪಚ್ಚನಾಡಿಯ ನಿವಾಸಿ ಸಿದ್ದು ಎಂಬಾತ ಆ. 2ರಂದು ರಾತ್ರಿ ನಗರದ ಸರ್ವಿಸ್ ಬಸ್ ನಿಲ್ದಾಣದ ಮಿಲ್ಕ್ ಪಾರ್ಲರ್ ಬಳಿ ಪಾರ್ಕ್ ಮಾಡಿದ್ದು, ನಂತರ ದ್ವಿಚಕ್ರ ವಾಹನವು ಕಳವಾಗಿದ್ದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 10,000 ರೂ. ನಗದು ಹಾಗೂ ಮೊಬೈಲ್ ಕಳವಾಗಿದ್ದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಠಾಣೆಯ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ ಇಂದು ಮಧ್ಯಾಹ್ನ 3 ಗಂಟೆಗೆ ನಗರದ ಲಾಲ್‌ಬಾಗ್ ಬಳಿಯಿಂದ ಮಣಿಕಂಠ ಹಾಗೂ ಅಶ್ವಿನ್ ಎಂಬಿಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
