ಕನ್ನಡ ವಾರ್ತೆಗಳು

ಸರ್ಕಾರ ಮಹತ್ವದ ಆರೋಗ್ಯ ಭಾಗ್ಯ ಯೋಜನೆಗಳ ಮಾಹಿತಿಗಾಗಿ ಜನಪ್ರತಿನಿಧಿಗಳಿಗೆ ತರಬೇತಿ : ಸಚಿವ ಖಾದರ್

Pinterest LinkedIn Tumblr

Khader_Press_Meet_1

ಮಂಗಳೂರು, ಆ.5: ರಾಜ್ಯ ಸರಕಾರವು ದುಬಾರಿ ವೆಚ್ಚ ತಗಲುವ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿ ಜಾರಿಗೊಳಿಸಿರುವ ಮಹತ್ವದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಗ್ರಾಪಂ, ತಾಪಂ ಹಾಗೂ ಜಿಪಂಗಳ ಜನಪ್ರತಿನಿಧಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಲು ನಿರ್ಧರಿಸಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳವಾರ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದುಬಾರಿ ವೆಚ್ಚ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿ ಬಿಪಿಎಲ್ ಕಾರ್ಡುದಾರರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ಎಪಿಎಲ್ ಕಾರ್ಡ್‌ದಾರರಿಗೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಹಾಗೂ ಸರಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಎಂಬ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳ ಕುರಿತಂತೆ ಮಾಹಿತಿ ನೀಡುವ ಮೊದಲ ತರಬೇತಿ ಮಂಗಳೂರಿನಲ್ಲಿ ನಡೆಸಲಾಗುವುದು ಎಂದು ಹೇಳಿದರು.

Khader_Press_Meet_2

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನೊಂದಿಗೆ ನೋಂದಾಯಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಈ ಯೋಜನೆಗಳ ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ರೋಗಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಸರಕಾರ ಹಾಗೂ ಫಲಾನುಭವಿ ಅನುಕ್ರಮವಾಗಿ 70:30ರ ಸಹ ಪಾವತಿ ವಿಧಾನವನ್ನು ಹೊಂದಿರುತ್ತದೆ.

ಫಲಾನುಭವಿ ವಿಶೇಷ ವಾರ್ಡ್‌ಗಳಲ್ಲಿ ಚಿಕಿತ್ಸೆ ಬಯಸಿದಲ್ಲಿ ಮೂಲ ಪ್ಯಾಕೇಜ್ ದರದ ಶೇ.50ರಷ್ಟು ಹಣವನ್ನು ಭರಿಸಿದರೆ ಸಾಕು. ಉಳಿದ ಪ್ಯಾಕೇಜ್ ಮೊತ್ತ ಹಾಗೂ ಹೆಚ್ಚುವರಿ ಸೌಲಭ್ಯಗಳಿಗೆ ಆಸ್ಪತ್ರೆಗಳು ವಿಧಿಸುವ ವೆಚ್ಚವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಫಲಾನುಭವಿಗಳು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ತೋರಿಸುವ ಮೂಲಕ ಈ ಯೋಜನೆಗಳ ಸಹಕಾರ ಪಡೆಯ ಬಹುದು. ಈ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಸರಕಾರದಿಂದ ನೇಮಕ ಮಾಡಲಾಗಿರುವ ಆರೋಗ್ಯ ಮಿತ್ರ ಸಿಬ್ಬಂದಿಗೆ ಕಾರ್ಡ್ ತೋರಿಸಿ ಸೌಲಭ್ಯವನ್ನು ಪಡೆಯಬಹುದು. ಎಂದವರು ತಿಳಿಸಿದರು.

ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿ 189 ಪ್ರಕ್ರಿಯೆಗಳು, ಹೃದಯಕ್ಕೆ ಸಂಬಂಧಿಸಿ 145, ಯೂರಾಲಜಿಗೆ ಸಂಬಂಧಿಸಿ 20 ಪ್ರಕ್ರಿಯೆಗಳು ಈ ಯೋಜನೆಗೊಳಪಡುತ್ತವೆ. ಕಿಡ್ನಿ ಜೋಡಣೆ ಅಥವಾ ಶಸ್ತ್ರ ಚಿಕಿತ್ಸೆ ಈ ಯೋಜನೆಗೆ ಒಳಪಡದಿದ್ದರೂ, ಕೆಟ್ಟು ಹೋಗಿರುವ ಕಿಡ್ನಿಯನ್ನು ತೆಗೆಯುವ ಪ್ರಕ್ರಿಯೆ ಈ ಯೋಜನೆಗೊಳಪಡುತ್ತದೆ. ವೈದ್ಯಕೀಯ ಕಾನೂನು ಪ್ರಕರಣಗಳಿಗೆ ಒಳಪಡದ ಪಾಲಿಟ್ರಾಮಾ ದಂತಹ ಚಿಕಿತ್ಸೆಗಳು ಈ ಯೋಜನೆಯಡಿ ಲಭ್ಯ ಎಂದವರು ವಿವರಿಸಿದರು.

ಈ ಯೋಜನೆಗಳಡಿ ತೀವ್ರತರನಾದ ಕಾಯಿಲೆಯಿಂದ ಬಳಲುವ ರೋಗಿಯನ್ನು ದೂರದ ಊರುಗಳಿಂದ ಕರೆತಂದು ಚಿಕಿತ್ಸೆಗೆ ಸಹಕರಿಸುವ ಆಶಾ ಕಾರ್ಯಕರ್ತೆಯರಿಗೆ ಸಾಮಾನ್ಯ ರೋಗಿಯಾಗಿದ್ದಲ್ಲಿ 250 ರೂ. ಎಸ್ಸಿ-ಎಸ್ಟಿ ಸಮುದಾಯ ರೋಗಿಯಾಗಿದ್ದಲ್ಲಿ 350 ರೂ. ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ಅಪಘಾತ ವಿಮೆಗೂ ನೆರವಿಗೆ ಚಿಂತನೆ

ವಾಹನ ಅಪಘಾತಗಳಿಗೆ ಸಂಬಂಧಿಸಿ ರೋಗಿಯ ಚಿಕಿತ್ಸೆಗೆ ವಿಮಾ ಸೌಲಭ್ಯವಿರುತ್ತದೆ. ಆದರೆ ವಿಮಾ ಮೊತ್ತವು ಚಿಕಿತ್ಸೆಯ ಹಲವಾರು ವರ್ಷಗಳ ಬಳಿಕ ದೊರೆಯುವುದರಿಂದ ರೋಗಿಗೆ ತಕ್ಷಣಕ್ಕೆ ನೆರವು ನೀಡುವ ನಿಟ್ಟಿನಲ್ಲಿ, ರೋಗಿಯ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಿಕೊಂಡು ಬಳಿಕ ಪ್ರಕರಣದ ಎಫ್‌ಐಆರ್ ಮೂಲಕ ನ್ಯಾಯಾಲಯದಿಂದ ಒದಗಿಸಲಾಗುವ ರೋಗಿಯ ಚಿಕಿತ್ಸಾ ಪರಿಹಾರವನ್ನು ಪಡೆದುಕೊಳ್ಳುವ ಯೋಜನೆಗೆ ಸರಕಾರ ಚಿಂತನೆ ನಡೆಸಿದೆ ಎಂದು ಸಚಿವ ಖಾದರ್ ಈ ಸಂದರ್ಭ ತಿಳಿಸಿದರು.

ಸರಕಾರದಿಂದ ದೊರೆಯುವ ಸೌಲಭ್ಯಗಳು ದುರುಪಯೋಗ ಆಗದ ರೀತಿಯಲ್ಲಿ ಬೆಂಗಳೂರಿನಲ್ಲಿ ಪರಿಶೀಲನೆ ಮತ್ತು ಆಡಳಿತ ವ್ಯವಸ್ಥೆಯೊಂದನ್ನು ಕೂಡಾ ಮಾಡಲಾಗಿದೆ ಎಂದವರು ಹೇಳಿದರು.

ವಿವಿಧ ಆರೋಗ್ಯ ಯೋಜನೆಗಳು ಲಭ್ಯವಿರುವ ಆಸ್ಪತ್ರೆಗಳು :

ದ.ಕ. ಮತ್ತು ಉಡುಪಿ ಜಿಲ್ಲೆಯ 12 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನೊಂದಿಗೆ ನೋಂದಣಿ ಮಾಡಿಕೊಂಡಿವೆ. ಮಂಗಳೂರಿನ ಎಜೆ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಕೆಎಂಸಿ ಆಸ್ಪತ್ರೆ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಕ್ಯಾನ್ಸರ್ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ (ನ್ಯೂ), ಗ್ಲೋಬಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ, ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಉಡುಪಿಯ ಕಸ್ತೂರ್ಬಾ ಆಸ್ಪತ್ರೆ ಆದರ್ಶ ಆಸ್ಪತ್ರೆಗಳಲ್ಲಿ ವಿವಿಧ ಆರೋಗ್ಯಭಾಗ್ಯ ಯೋಜನೆಗಳು ಲಭ್ಯ ಎಂದರು.

ವರದಿ ಕೃಪೆ : ವಾಭಾ

Write A Comment