ಕನ್ನಡ ವಾರ್ತೆಗಳು

ಐದನೇ ದಿನವೂ ಮುಂದುವರಿದ ನೀರಿನ ಸಮಸೈ : ಮಂಗಳೂರಿನಲ್ಲಿ ನೀರಿಲ್ಲದೇ ಪರದಾಡಿದ ಸಾರ್ವಜನಿಕರು : ಖಾಸಗಿ ಟ್ಯಾಂಕರ್‌‌ಗಳಿಂದ ದುಪ್ಪಟು ಹಣ ವಸೂಲ್

Pinterest LinkedIn Tumblr

Tank_water_supply_1

ಮಂಗಳೂರು, ಆ.5: ನಗರಕ್ಕೆ ನೀರು ಸರಬ ರಾಜು ಮಾಡುವ ಅಡ್ಯಾರ್ – ಕಣ್ಣೂರು ಬಳಿಯ 18 ಎಂ.ಜಿ.ಡಿ. ಕೊಳವೆ ಒಡೆದಿರುವ ಕಾರಣ, ನೀರು ಪೂರೈಕೆ ಸ್ಥಗಿತಗೊಂಡ ಐದನೇ ದಿನವಾದ ಇಂದು (ಬುಧವಾರ) ಕೂಡಾ ನಗರದ ಹಲವೆಡೆ ನೀರಿಗಾಗಿ ಸಾರ್ವಜನಿಕರು ಪರದಾಡಿದರು.

ಮಂಗಳವಾರ ಬೆಳಗ್ಗಿನ ಹೊತ್ತಿನಲ್ಲಿ ನಗರದ ಹಲವು ಭಾಗಗಳಲ್ಲಿ ಬಾವಿ ಇರುವ ಮನೆಗಳಿಂದ ಪಕ್ಕದ ಮನೆಗಳವರು ನೀರು ಸಾಗಿಸುವ ಜತೆಗೆ, ಕೆಲವು ಕಡೆ ಪೂರೈಕೆ ಮಾಡಲಾಗಿದ್ದ ಟ್ಯಾಂಕರ್ ನೀರಿಗಾಗಿ ಜನರು ಸಾಲುಗಟ್ಟಿ ತುಂಬಿಸಿಕೊಂಡು ಸಾಗಿಸುವುದು ಕಂಡುಬಂತು. ಮಧ್ಯಾಹ್ನ ಬಲ್ಮಠ, ಕಂಕನಾಡಿ ಸೇರಿದಂತೆ ಕೆಲವೆಡೆ ನೀರು ಪೂರೈಕೆಯಾಗಿದ್ದರೆ, ಮಾರ್ಗನ್ಸ್ ಗೇಟ್, ಬೆಂದೂರ್‌ವೆಲ್, ಉಜ್ಜೋಡಿ, ಬಜಾಲ್ ಮೊದಲಾದೆಡೆಗಳಿಗೆ ಸಂಜೆವರೆಗೂ ನೀರು ಪೂರೈಕೆಯಾಗದೆ ಜನತೆ ನೀರಿಗಾಗಿ ಅಲೆಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಳೆದೆರಡು ದಿನಗಳಲ್ಲಿ ಹೊಟೇಲ್‌ಗಳು, ಫ್ಲಾಟ್‌ಗಳವರು ಖಾಸಗಿ ಟ್ಯಾಂಕರ್‌ಗಳ ಮೂಲಕ ದುಬಾರಿ (ದುಪ್ಪಟ್ಟು) ಹಣಕ್ಕೆ ನೀರು ತರಿಸಿಕೊಂಡು ಉಪಯೋಗಿಸಿದ ಪ್ರಕರಣಗಳೂ ನಡೆದಿದೆ. ಕೆಲವರು ಮಳೆ ನೀರನ್ನೂ ಸಂಗ್ರಹಿಸಿ ಉಪಯೋಗಿಸುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ ಕೆಲವರು ತಮ್ಮಲ್ಲಿರುವ ಪಾತ್ರೆಗಳು, ಬ್ಯಾರಲ್‌ಗಳಲ್ಲಿ ಮಳೆ ನೀರು ಸಂಗ್ರಹಿಸಿ ಬಳಸಿದರು.

Tank_water_supply_2 Tank_water_supply_3

ಶಾಲೆಗೆ ಚಕ್ಕರ್…. ಕೆಲಸಕ್ಕೆ ರಜೆ..

ನೀರಿಲ್ಲದೆ ಮನೆಯ ಕೆಲಸ ಕಾರ್ಯಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ತಮ್ಮ ಕೆಲಸಗಳಿಗೆ ರಜೆ ಹಾಕಿದ ಘಟನೆಯೂ ನಡೆದಿದೆ. ಮಾರ್ಗನ್ಸ್‌ಗೇಟ್‌ನ ಮನೆಯೊಂದರ ಮಹಿಳೆಯೊಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಿದ್ದು, ಮನೆಯಲ್ಲಿ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕೆಲಸಕ್ಕೆ ರಜೆ ಹಾಕಿ ನೀರಿನ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಶಾಲಾ ಮಕ್ಕಳ ಸಮವಸ್ತ್ರ ಒಗೆಯಲು ನೀರಿಲ್ಲದೇ ಪರದಾಡಿದ ಕೆಲವರು ತಮ್ಮ ಮಕ್ಕಳನ್ನು ಸ್ಕೂಲ್‌ಗೆ ಕಳಿಸಲು ಸಾದ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ನಾಲ್ಕು ವರ್ಷದ ಬಳಿಕ ಬಾವಿಗೆ ಮೊರೆ :

ಕೆಲವೊಂದು ಕಡೆ ಬಾವಿಯಿದ್ದರೂ ಮನಪಾ ನೀರನ್ನೇ ಬಳಸುತ್ತಿದ್ದವರು, ಇಂದು ಬಾವಿಯಿಂದ ನೀರೆತ್ತುವ ಕಾಯಕಕ್ಕೂ ಮುಂದಾದರು. ಮಂಗಳಾದೇವಿಯ ನಿವಾಸಿ ರಾಘವ ಎಂಬವರು ನಾಲ್ಕು ವರ್ಷಗಳ ಹಿಂದೆ ಬಾವಿಯ ನೀರು ಸೇದಲೆಂದು ಹಗ್ಗವನ್ನು ತರಿಸಿಕೊಂಡಿದ್ದರು. ಆದರೆ ನಿನ್ನೆಯಿಂದ ಆ ಹಗ್ಗವನ್ನು ಉಪಯೋಗಿಸಿ ಬಾವಿಯಿಂದ ನೀರನ್ನು ಸೇದಿರುವುದಾಗಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಬಾವಿಗೆ ಬಾಡಿಗೆ ಪಂಪ್ ಮೊರೆ :

ಮಾರ್ಗನ್ಸ್‌ಗೇಟ್‌ನ ಬಳಿ ಕೆಲ ಮನೆಗಳವರು ದಿನವೊಂದಕ್ಕೆ 700 ರೂ. ದರದಲ್ಲಿ ಪಂಪೊಂದನ್ನು ಬಾಡಿಗೆಗೆ ಪಡೆದು, ಸಾರ್ವಜನಿಕ ಬಾವಿಯಿಂದ ಪಂಪ್ ಮೂಲಕ ನೀರೆತ್ತಿ ಅಕ್ಕಪಕ್ಕದ ಸುಮಾರು 15 ಮನೆಗಳ ಸಂಪ್‌ಗಳಿಗೆ ತುಂಬಿಸಿದ ಘಟನೆ ನಡೆದಿದೆ.

Kannur_pipe_line_2 Kannur_pipe_line_4 Kannur_pipe_line_5 Kannur_pipe_line_6 Kannur_pipe_line_7 Kannur_pipe_line_11 Kannur_pipe_line_8 Kannur_pipe_line_12 Kannur_pipe_line_14

ಇಂದಿನಿಂದ ನೀರು ಪೂರೈಕೆ : ಜಿಲ್ಲಾಧಿಕಾರಿ ಭರವಸೆ

ನಿನ್ನೆ ರಾತ್ರಿ ಒಂದು ಪೈಪ್‌ಲೈನ್ ದುರಸ್ತಿಗೊಳಿಸಿ ನೀರು ಪೂರೈಸಲಾಗಿದೆ. ನಗರದ ಕೆಲವೆಡೆ ಮಂಗಳವಾರ ನೀರು ಪೂರೈಕೆಯಾಗಿದ್ದು, ಮತ್ತೊಂದು ಪೈಪ್ ಮಂಗಳವಾರ ಮಧ್ಯರಾತ್ರಿಯೊಳಗೆ ಸಂಪೂರ್ಣವಾಗಿ ದುರಸ್ತಿಗೊಂಡು ಇಂದಿನಿಂದ ಪೂರ್ಣಪ್ರಮಾಣದಲ್ಲಿ ಎಂದಿನಂತೆ ನಗರದೆಲ್ಲೆಡೆ ನೀರು ಪೂರೈಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬಾಹೀಂ ಭರವಸೆ ನೀಡಿದ್ದಾರೆ.

ಕೊಳವೆ ಒಡೆದು ಹೋಗಿರುವ ಕಣ್ಣೂರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಜಿಲ್ಲಾಧಿಕಾರಿ, ಇಂತಹ ಘಟನೆಗಳು ಮುಂದೆ ಆಗದಂತೆ ನಗರಾದ್ಯಂತ ಪೈಪ್‌ಲೈನ್ ಲೀಕೇಜ್, ಕಟ್ಟಡ ತ್ಯಾಜ್ಯ ಹಾಗೂ ಮಣ್ಣು ಸುರಿದಿರುವಲ್ಲಿ ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

Write A Comment