ಮಂಗಳೂರು, ಆ.03: ಹಂಪಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆವರಣವು ರವಿವಾರ ತುಳುನಾಡಿನ ವೈಭವ, ಕಲೆ, ಸಂಸ್ಕೃತಿಯ ಜತೆಗೆ ತಿಂಡಿ ತಿನಿಸುಗಳ ಅನಾವರಣ, ತುಳುನಾಡಿನ ವೈಭವವನ್ನು ಪ್ರದರ್ಶಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು. ಕೋಟಿ-ಚೆನ್ನಯ ಯುವ ವೇದಿಕೆಯ ವತಿಯಿಂದ ರೋಟರ್ಯಾಕ್ಟ್ ಮಂಗಳೂರು ಸಿಟಿ ಮತ್ತು ಬರ್ಕೆ ಫ್ರೆಂಡ್ಸ್ ಸಹಕಾರದೊಂದಿಗೆ ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ತೆನಸ್ ಪರ್ಬಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಂಕನಾಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಬೆಳಗ್ಗ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ತುಳುನಾಡಿನ, ಅದರಲ್ಲೂ ಮುಖ್ಯವಾಗಿ ಆಷಾಡ (ಆಟಿ) ತಿಂಗಳಲ್ಲಿ ತುಳುನಾಡಿನಲ್ಲಿ ತಯಾರಿಸಲಾಗುವ ವಿವಿಧ ತಿಂಡಿ ತಿನಿಸುಗಳು, ವಿವಿಧ ಔಷಧೀಯ ಸೊಪ್ಪು, ನಾರು, ಬೇರುಗಳ ಪ್ರದರ್ಶನ, ವಿವಿಧ ಉಪ್ಪಿನಕಾಯಿ, ಹಪ್ಪಳ ಸೆಂಡಿಗೆ ಮೊದಲಾದ ಸಾವಯವ ತರಕಾರಿ ಸಂತೆ, ಮನೆಮದ್ದುಗಳ ಪ್ರದರ್ಶನ ಇದರ ಜತೆಯಲ್ಲೇ ವೇದಿಕೆಯಲ್ಲಿ ಯಕ್ಷಗಾನ, ಆಟಿ ಕಳೆಂಜದ ಕುಣಿತ, ಪಾಡ್ಡನದ ಇಂಪು. ಜತೆ ಜತೆಗೇ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ನಾನಾ ರೀತಿಯ ಮರದಿಂದ ತಯಾರಿಸಿದ ಪರಿಕರಗಳು, ಹಳೆಯ ಕ್ಯಾಮರಾಗಳು, ಇಸ್ತ್ರಿ ಪೆಟ್ಟಿಗೆಗಳು, ಶಂಖ ಮೊದಲಾದವುಗಳ ಪ್ರದರ್ಶನವೂ ಇಲ್ಲಿತ್ತು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಮುದ್ದು ಮೂಡುಬೆಳ್ಳೆ ಉಪನ್ಯಾಸ ನೀಡಿ, ಹಿರಿಯರು ಶಿಕ್ಷಣದಿಂದ ವಂಚಿತರಾಗಿದ್ದರೂ ಬದುಕಿನಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದವರು. ಇದೀಗ ತೆನಸ್ ಪರ್ಬದ ಮೂಲಕ ನಗರದಲ್ಲಿ ತುಳು ಸಂಸ್ಕೃತಿಯ ಅನಾವರಣವಾದಂತಾಗಿದೆ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಘು ಇಡ್ಕಿದು ಅತಿಥಿಯಾಗಿದ್ದರು. ರೋಟರಿ ಜಿಲ್ಲೆ 3181ರ ಮಾಜಿ ಗವರ್ನರ್ ಡಾ.ಬಿ.ದೇವದಾಸ್ ರೈ, ಮನಪಾ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ದೀಪಕ್ ಪೂಜಾರಿ, ಬರ್ಕೆ ಫ್ರೆಂಡ್ಸ್ನ ಗೌರವಾಧ್ಯಕ್ಷ ಯಜ್ಞೇಶ್ವರ ಬರ್ಕೆ, ಕುತ್ಲೂರು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಯಶೋದಾ ಅತಿಥಿಗಳಾಗಿದ್ದರು.
ಕೋಟಿ ಚೆನ್ನಯ ಯುವ ವೇದಿಕೆ ಅಧ್ಯಕ್ಷ ನಿತಿನ್ ಉಳ್ಳಾಲ್ ಸ್ವಾಗತಿಸಿದರು. ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಾಜೇಶ್ ದೇವಾಡಿಗ ವಂದಿಸಿದರು. ನಾಗರಾಜ ರಾವ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದ ದಿನೇಶ್ ಹೊಳ್ಳ, ರತ್ನಾಕರ ಕುಳಾಯಿ, ಪದ್ಮನಾಭರನ್ನು ಗೌರವಿಸಲಾಯಿತು.
ಕುತ್ಲೂರಿನ ಮಹಿಳೆಯರಿಂದ ಖಾದ್ಯವೈವಿಧ್ಯ :
ಬೆಳ್ತಂಗಡಿ ಕುತ್ಲೂರಿನ 40 ಮಂದಿ ಮಹಿಳೆಯರು ತಯಾರಿಸಿದ ತುಳುನಾಡಿನ 40 ಬಗೆಯ ಸಾಂಪ್ರದಾಯಿಕ ಖಾದ್ಯಗಳು ಕಾರ್ಯಕ್ರಮದ ವಿಶೇಷತೆಯಲ್ಲೊಂದಾಗಿತ್ತು. ವೇದಿಕೆಯಲ್ಲಿ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ತುಳು ಜಾನಪದ ನೃತ್ಯ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.
ಹೈಸ್ಕೂಲ್ ಮತ್ತು ಕಾಲೇಜು ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ನೃತ್ಯ ಸ್ಪರ್ಧೆ ವಿಜೇತರು:
ಹೈಸ್ಕೂಲ್ ವಿಭಾಗ-(ಪ್ರ)ಶಿಫಾಲಿ ಮತ್ತು ತಂಡ ಕೆನರಾ ಗರ್ಲ್ಸ್ ಹೈಸ್ಕೂಲ್, (ದ್ವಿ) ದುರ್ಗಾ ಮತ್ತು ತಂಡ ಕೆನರಾ ಗರ್ಲ್ಸ್ ಹೈಸ್ಕೂಲ್, (ತೃ) ಆನಂದಾಶ್ರಮ ಹೈಸ್ಕೂಲ್ ಸೋಮೇಶ್ವರ. ಕಾಲೇಜು ವಿಭಾಗ- (ಪ್ರ) ಗೋಕರ್ಣನಾಥೇಶ್ವರ ಕಾಲೇಜು, (ದ್ವಿ) ರಾಮಕೃಷ್ಣ ಕಾಲೇಜು, (ತೃ) ಮಂಗಳೂರು ವಿವಿ ಕಾಲೇಜು. ತೀರ್ಪುಗಾರರಾಗಿ ಗೌತಮ್ ಶೆಟ್ಟಿ, ಯತೀಶ್ ಸಾಲ್ಯಾನ್ ಹಾಗೂ ಸ್ವಪ್ನಾ ಸಹಕರಿಸಿದರು.










