ಮಂಗಳೂರು, ಆ.03 : ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಆದಿವಾಸಿ, ಸುಂದರ ಮಲೆಕುಡಿಯ ಎಂಬವರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಎಎಸ್ಪಿ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಆತನ ಬಂಧನ ನಿಶ್ಚಿತ. ಹಾಗಾಗಿ ದಲಿತರು ಹಾಗೂ ಸ್ಥಳೀಯರು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದೆ ಸಹಕರಿಸಬೇಕು ಎಂದು ದ.ಕ.ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ. ಮನವಿ ಮಾಡಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ರವಿವಾರ ನಡೆದ ದಲಿತರ ಮಾಸಿಕ ಕುಂದುಕೊರತೆಗಳ ಸಭೆಯಲ್ಲಿ ಸುಂದರ ಮಲೆ ಕುಡಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಗೋಪಾಲಕೃಷ್ಣ ಗೌಡನನ್ನು ಬಂಧಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ದಲಿತ ನಾಯಕರ ಆಕ್ರೋಶಕ್ಕೆ ಪ್ರತಿಯಾಗಿ ಅವರು ಈ ಮನವಿ ಮಾಡಿದರು. ಪ್ರಕರಣವನ್ನು ಪ್ರಸ್ತಾವಿಸಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಎಲ್., ನೆರಿಯದಲ್ಲಿ ಕಳೆದ ರವಿವಾರ ನಡೆದ ಘಟನೆ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ದ.ಕ. ಜಿಲ್ಲೆಯನ್ನೇ ತಲೆತಗ್ಗಿಸುವಂತೆ ಮಾಡಿದೆ. ಘಟನೆಯ ತಕ್ಷಣ ಪ್ರತಿಕ್ರಿಯಿಸಿರುವ ಬಂಟ್ವಾಳ ಎಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿದ್ದಾರೆ.
ಬೆಳ್ತಂಗಡಿ ಎಸ್ಸೈ ಕೂಡಾ ಜತೆಗಿದ್ದರು. ಆದರೆ ಸರ್ಕಲ್ ಇನ್ಸ್ ಪೆಕ್ಟರ್ ಅಲ್ಲಿಗೆ ಇನ್ನೂ ಭೇಟಿ ಮಾಡಿಲ್ಲ. ಮಾತ್ರ ವಲ್ಲದೆ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶ ನಾಲಯದ ಪ್ರತಿನಿಧಿಗಳಾಗಲಿ, ಕನಿಷ್ಠ ತಾಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ ಎಂದು ದೂರಿದರು. ಯಾವುದೇ ಕಾರಣಕ್ಕೂ ಆರೋಪಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ನೀಡಬಾರದು ಎಂದು ಶೇಖರ್ ಒತ್ತಾಯಿಸಿದರು.
ಬೆಳ್ತಂಗಡಿಯ ಈಶ್ವರಿ ಎಂಬವರು ಮಾತನಾಡಿ, ಕೋಮು ಗಲಭೆಯ ಸಂದರ್ಭ ಗಾಯ ಗೊಂಡವರಿಗೆ ಉನ್ನತ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುತ್ತದೆ. ಆದರೆ ದಲಿತರಾದ ಸುಂದರ ಮಲೆಕುಡಿಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕೇವಲ ತನಿಖೆ ನಡೆಯುತ್ತಿದೆ ಎಂಬ ಭರವಸೆಯ ಮಾತು ಕೇಳಿ ಸಾಕಾಗಿದೆ. ಆರೋಪಿಯನ್ನು ಎಷ್ಟು ದಿನಗಳಲ್ಲಿ ಜೈಲಿಗೆ ಹಾಕುತ್ತೀರಿ… ಎಂದು ಆಕ್ರೋಶ ವ್ಯಕ್ತಪಡಿಸಿದರು. ದಸಂಸ(ಅಂಬೇಡ್ಕರ್‌ವಾದ)ದ ಎಸ್.ಪಿ.ಆನಂದ ಮಾತನಾಡಿ, ಸುಂದರ ಮಲೆಕುಡಿಯ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಹಾಗೂ ಕೃತ್ಯ ಎಸಗಿದ ಆರೋಪಿಯ ವಾಹನ, ಆಸ್ತಿ ಹಾಗೂ ಮನೆಯನ್ನು ಮುಟ್ಟುಗೋಲು ಹಾಕಬೇಕೆಂದು ಒತ್ತಾಯಿಸಿದರು.
ದಲಿತ ನಾಯಕರ ಮನವಿ, ಆಗ್ರಹ, ಒತ್ತಾಯಗಳಿಗೆ ಸ್ಪಂದಿಸಿದ ಡಾ.ಶರಣಪ್ಪ, ಘಟನೆಗೆ ಸಂಬಂಧಿಸಿ ದಲಿತ ಸಮುದಾಯದ ಭಾವೋದ್ವೇಗಕ್ಕೆ ತಮ್ಮ ಸಹಮತವೂ ಇದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಎಲ್ಲಿ ತಲೆಮರೆಸಿಕೊಂಡಿದ್ದರೂ ಆತನ ದಸ್ತಗಿರಿ ಆಗಿಯೇ ಆಗುತ್ತದೆ ಎಂದು ಭರವಸೆ ನೀಡಿದರು.
ಕೆಲ ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಸುಂದರ ಮಲೆಕುಡಿಯರಿಗೆ ಸಿಗಬೇಕಾದ ಪರಿಹಾರಕ್ಕೆ ಪ್ರಯತ್ನಿಸಲಾಗಿದ್ದು, ಜಿಲ್ಲಾಧಿಕಾರಿ ಸ್ವತಃ ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ಸುಂದರ ಮಲೆಕುಡಿಯರ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಧಿಕಾರಿ ಜತೆ ಮಾತನಾಡಲಾಗಿದೆ. ರೋಗಿಯ ಹಿತದೃಷ್ಟಿಯ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಪ್ರಯತ್ನ ಮಾಡುತ್ತಿದೆ, ನಿರ್ಲಕ್ಷ ವಹಿಸಿಲ್ಲ ಎಂದು ಎಸ್ಪಿ ಹೇಳಿದರು.
ಪ್ರತಿ ಠಾಣೆಗಳಲ್ಲೂ ಮಾಸಿಕ ಎಸ್ಸಿ/ಎಸ್ಟಿ ಸಭೆ ಕಡ್ಡಾಯ: ಎಸ್ಪಿ
ಬೆಳ್ತಂಗಡಿಯ ನೆರಿಯ ಗ್ರಾಪಂನಲ್ಲಿ ಕಳೆದ ವಾರ ಪೊಲೀಸ್ ಠಾಣಾ ವತಿಯಿಂದ ದಲಿತರ ಕುಂದುಕೊರತೆ ಸಭೆ ನಡೆಸಲಾಗಿತ್ತು. ಆದರೆ ಸಭೆ ಆರಂಭವಾಗಿದ್ದು ಸಂಜೆ 5:30ರ ವೇಳೆಗೆ. ಗ್ರಾಪಂ ಕಚೇರಿಗೆ ಬಂಜಾರು ಮಲೆ ಹಾಗೂ ಇತರ ಕಡೆಗಳಿಂದ ಸುಮಾರು 30 ಕಿ.ಮೀ. ದೂರದಿಂದ ಬರಬೇಕಾಗುತ್ತದೆ. ಸಂಜೆಯ ವೇಳೆ ಸಭೆ ಮಾಡಿದರೆ ಹಿಂದಿರುಗಿ ಹೋಗಲು ಕಷ್ಟವಾಗುತ್ತದೆ ಎಂದು ಚಿದಾನಂದ ಎಂಬವರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಶರಣಪ್ಪ, ಪ್ರತಿ ತಿಂಗಳ ಕೊನೆಯ ರವಿವಾರ (ತುರ್ತು ಕಾರ್ಯಕ್ರಮಗಳನ್ನು ಹೊರತುಪಡಿಸಿ) ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಕುಂದುಕೊರತೆಗಳ ಸಭೆ ಯನ್ನು ಕಡ್ಡಾಯವಾಗಿ ನಡೆಸಬೇಕು. ಹಾಗೂ ಸಿಬ್ಬಂದಿ ದಲಿತ ಕಾಲನಿಗಳಿಗೆ ಭೇಟಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಕಕ್ಕಿಂಜೆಯಲ್ಲಿ ಹೊರಠಾಣೆಯ ಪ್ರಸ್ತಾಪ, ಧರ್ಮಸ್ಥಳ ಪೊಲೀಸ್ ಠಾಣೆ ಆರಂಭಕ್ಕೆ ಆಗ್ರಹವೂ ವ್ಯಕ್ತವಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.