ಮಂಗಳೂರು.ಆ.01 : ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಈ ಸಂದರ್ಭ ಕಟೀಲ್‌ನಲ್ಲಿ ಮೂರು ದಿನಗಳ ಸಾಹಿತ್ಯ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.ಅವರು ಕಲ್ಕೂರ ಪ್ರತಿಷ್ಠಾನ ಮಂಗಳೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದ.ಕ. ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆಯ ಬಗ್ಗೆ ಮಾರ್ಗದರ್ಶನ ಮಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆಗಸ್ಟ್ ಕೊನೆಯವಾರ ಸಮ್ಮೇಳನ ನಡೆಯಲಿದೆ. ನಾಡು ನುಡಿಗೆ ಸೇವೆ ಸಲ್ಲಿಸಿದ ಚಿಂತಕರು ಹಾಗೂ ಸಾಧಕರನ್ನು ಗುರುತಿಸಲಾಗುವುದು. ಕಾಸರಗೋಡು ಸೇರಿದಂತೆ ಅವಿಭಜಿತ .ಕ. ಜಿಲ್ಲೆಗಳಲ್ಲಿ ಕಳೆದ ಒಂದು ಶತಮಾನದ ಕರಾವಳಿಯ ಕೊಡುಗೆ ಹಾಗೂ ಪಲ್ಲಟಗಳ ಬಗ್ಗೆ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಾಹಿತ್ತಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಕೃಷಿ, ಉದ್ಯಮ, ಔದ್ಯೋಗಿಕ, ಜೀವನ ಧರ್ಮ ಇವೆಲ್ಲವುಗಳನ್ನೊಳಗೊಂಡಂತೆ ವಿವಿಧ ಗೋಷ್ಠಿಗಳನ್ನು ಸಂಯೋಜಿಸುವ ಬಗ್ಗೆ ಚರ್ಚಿಸಲಾಯಿತು. ವಿಶೇಷವಾಗಿ ಯಕ್ಷಗಾನವನ್ನು ಒಳಗೊಂಡಂತೆ ಚಿಂತನ – ಮಂಥನ ಹಾಗೂ ಹಿರಿಯ, ಕಿರಿಯ ಕವಿಗಳ ಕವಿಗೋಷ್ಠಿ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಹರಿನಾರಾಯಣ ಅಸ್ರಣ್ಣ ಕಟೀಲು ಮತ್ತು ಆಡಳಿತಾಧಿಕಾರಿ ನಿಂಗಯ್ಯ ಹಾಗೂ ಊರಿನ ಆಡ್ಯಗಣ್ಯರ ಮಾರ್ಗದರ್ಶನ, ಸಹಕಾರದೊಂದಿಗೆ ದಿನಾಂಕ ನಿಗದಿಗೊಳಿಸಿ, ಆಮಂತ್ರಣ ಪತ್ರಿಕೆ ಮಾಡುವುದೆಂದು ನಿರ್ಣಯಿಸಲಾಯಿತು.
ಜಿಲ್ಲಾ ಕ.ಸಾ.ಪ. ಗೌರವ ಕಾರ್‍ಯದರ್ಶಿ ಐತಪ್ಪ ನಾಯ್ಕ ಕಾರ್‍ಯಕ್ರಮ ಸಂಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕ.ಸಾ.ಪ.ದ ತಾಲೂಕು ಅಧ್ಯಕ್ಷರುಗಳಾದ ವಿಜಯಲಕ್ಷ್ಮೀ ಶೆಟ್ಟಿ ಮಂಗಳೂರು, ಜಯಾನಂದ ಪೆರಾಜೆ ಬಂಟ್ವಾಳ, ಡಾ. ವರದರಾಜ ಚಂದ್ರಗಿರಿ ಪುತ್ತೂರು, ಮೀನಾಕ್ಷಿ ಗೌಡ ಸುಳ್ಯ, ಸಂಘಟನಾ ಕಾರ್‍ಯದರ್ಶಿ ರಾಮಕೃಷ್ಣ ಭಟ್ ಬೆಳ್ತಂಗಡಿ, ಡಾ. ಗಿರೀಶ ಭಟ್ ಅಜಕ್ಕಳ, ಕಟೀಲು ಶ್ರೀದುರ್ಗಾಪರಮೇಶ್ವರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಜಯರಾಮ ಪೂಂಜ, ಪ್ರೌಢಶಾಲೆಯ ಉಪಪ್ರಾಚಾರ್ಯ ಸೋಮಪ್ಪ ಅಲಂಗಾರ್, ಸಾಹಿತ್ಯ ಕೇಂದ್ರದ ಕೆ. ರತ್ನಾಕರ, ಪೊಳಲಿ ನಿತ್ಯಾನಂದ ಕಾರಂತ ಉಪಸ್ಥಿತರಿದ್ದರು.
ಗೌರವ ಕಾರ್‍ಯದರ್ಶಿ ಡಾ. ಎಂ.ಪಿ. ಶ್ರೀನಾಥ ಉಜಿರೆ ವಂದಿಸಿದರು. ರಾಮದಾಸ ಕೈಕುಂಜೆ ಸಹಕರಿಸಿದರು.