ಮಂಗಳೂರು, ಆ.01: ಮಂಗಳೂರು ತಾಲೂಕು ತಹಶೀಲ್ದಾರ್, ಮನಪಾ ಆಯುಕ್ತರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಆಡಳಿತ ನಿರ್ವಹಣೆಗೆ ತೀರಾ ಹಿನ್ನಡೆಯಾಗುತ್ತಿದೆ ಎಂಬ ಗಂಭೀರ ವಿಚಾರವನ್ನು ಸ್ವತಃ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರವರೇ ಬಹಿರಂಗ ಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ, ಪ್ರಮುಖ ಹುದ್ದೆಗಳು ಹಾಗೂ ಕೆಳ ಹಂತದ ಸಿಬ್ಬಂದಿಯ ಕೊರತೆಯಿಂದಾಗಿ ದಿನನಿತ್ಯದ ಸರಕಾರಿ ಕಾರ್ಯ ಚಟುವಟಿಕೆಗಳಿಗೆ ಸಾಕಷ್ಟು ತೊಂದರೆಗಳಾಗುತ್ತಿರುವ ಬಗ್ಗೆ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸರಕಾರದ ಗಮನ ಸೆಳೆಯಲಾಗಿದೆ ಎಂದು ಹೇಳಿದರು. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಮಂಜೂರಾದ 915 ಸಿಬ್ಬಂದಿಯ ಪೈಕಿ ಕೇವಲ 702 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 213 ಹುದ್ದೆ ಖಾಲಿ ಉಳಿದಿವೆ ಎಂದವರು ತಿಳಿಸಿದರು.
ನಾನಾ ಇಲಾಖೆಗಳ ವಸತಿ ನಿಲಯಗಳಲ್ಲಿ ವಾರ್ಡನ್ ಹುದ್ದೆ ಕೂಡ ಖಾಲಿಯಿರುವ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯ ಜನರಲ್ಲಿ ಸರಕಾರಿ ಸೇವೆಯ ಬಗ್ಗೆ ನಿರಾಸಕ್ತಿ, ಬೇರೆ ಜಿಲ್ಲೆಗಳಿಂದ ದ.ಕ. ಜಿಲ್ಲೆಗೆ ಸರಕಾರಿ ಸೇವೆಗೆ ಆಗಮಿಸಲು ನಿರಾಸಕ್ತಿಯಿಂದಾಗಿ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಹುದ್ದೆಗಳು ಖಾಲಿಯಾಗಿವೆ ಎಂದವರು ಅಭಿಪ್ರಾಯಿಸಿದರು.
ಮನಪಾ ಕಮಿಷನರ್, ತಹಶೀಲ್ದಾರ್ ಸಹಿತ ಹಲವು ಹುದ್ದೆಗಳು ಖಾಲಿ :
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಮಿಷನರ್, ಮಂಗಳೂರು ತಾಲೂಕು ತಹಶೀಲ್ದಾರ್ ಗ್ರೇಡ್ 1, 2, ಎಸಿ ಕಚೇರಿಯಲ್ಲಿ ಗ್ರೇಡ್ 2 ಹಾಗೂ ಕಾರ್ಯನಿರ್ವ ಹಣಾಧಿಕಾರಿ ಹುದ್ದೆ ಖಾಲಿಯಿವೆ.
ಮುಂದಿನ ತಿಂಗಳ ಅಂತ್ಯಕ್ಕೆ ಅಬಕಾರಿ ಉಪ ಆಯುಕ್ತರು ಹಾಗೂ ಆರ್‌ಟಿಒ ಹುದ್ದೆಗಳೂ ಖಾಲಿಯಾಗಲಿವೆ. ಅಲ್ಪಸಂಖ್ಯಾತ ಇಲಾಖೆಯ 85 ಹುದ್ದೆಗಳಲ್ಲಿ 12 ಹುದ್ದೆಗಳು ಮಾತ್ರವೇ ಭರ್ತಿಯಾಗಿವೆ. ಭೂಸ್ವಾಧೀನ ಅಧಿಕಾರಿಗಳ 3 ಹುದ್ದೆಗಳಲ್ಲಿ ಎರಡು ಹುದ್ದೆಗಳು ಖಾಲಿಯಾಗಿರುವುದರಿಂದ ವಿವಿಧ ಪೈಪ್‌ಲೈನ್ ಹಾಗೂ ಇತರ ಯೋಜನೆಗಳಿಗೆ ಸಂಬಂಧಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದೆ. ಆಹಾರ ಇಲಾಖೆ ಉಪನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ, ಚುನಾವಣೆ ವಿಭಾಗ ಸಹಾಯಕ ಆಯುಕ್ತ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಹುದ್ದೆ ಖಾಲಿಯಾಗಿವೆ.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ, ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ, ಐಟಿಡಿಪಿ ಯೋಜನೆ ಸಂಯೋಜಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ಪುತ್ತೂರು ಉಪವಿಭಾಗ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹುದ್ದೆಗಳು ಖಾಲಿಯಾಗಿವೆ. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ, ಉದ್ಯೋಗ ಅಧಿಕಾರಿ, ಸುಳ್ಯ ತಹಶೀಲ್ದಾರ್, ಬಂಟ್ವಾಳ ಪುತ್ತೂರು ಗ್ರೇಡ್ 1 ತಹಶೀಲ್ದಾರ್, ಪುತ್ತೂರು ಎಸಿ ಕಚೇರಿ ಗ್ರೇಡ್ 2 ತಹಶೀಲ್ದಾರ್, ಪುತ್ತೂರು, ಸುಳ್ಯ, ಬೆಳ್ತಂಗಡಿ ಗ್ರೇಡ್ 2 ತಹಶೀಲ್ದಾರ್ ಹುದ್ದೆಗಳು ಖಾಲಿಯಾಗಿವೆ.