ಬಂಟ್ವಾಳ, ಜುಲೈ.29 : ನಕಲಿ ಪಾಸ್ಪೋರ್ಟ್ ತಯಾರಿಸಿ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯೋರ್ವನನ್ನು ಮಂಗಳವಾರ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಕ್ಷಿತ್ ಎ.ಕೆ. ನೇತೃತ್ವದ ತಂಡ ಬಂಧಿಸಿದೆ.
ಮಾರಿಪ್ಪಳ್ಳ ನಿವಾಸಿ ಮಹಮ್ಮದ್ ಹನೀಫ್ ಯಾನೆ ಹನೀಫ್ ಯಾನೆ ಚೊಟ್ಟೆ ಹನೀಫ್ (33) ಬಂಧನಕ್ಕೊಳಗಾದ ಆರೋಪಿ. ಈತ ಮಾರಿಪ್ಪಳ್ಳ ರಿಕ್ಷಾ ಚಾಲಕ ರಿಫಾಯಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ರಾಜ್ಯ ಉಚ್ಛ ನ್ಯಾಯಾಲದಿಂದ ಶರತ್ತು ಬದ್ಧ ಜಾಮೀನು ಪಡೆಯುವ ಮೂಲಕ ಬಿಡುಗಡೆಯಾಗಿದ್ದ. ಈತ ಪಾಸ್ಪೋರ್ಟ್ ಮಾಡಿಕೊಂಡಿರುವ ಮಾಹಿತಿ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟೀಸ್ ಜಾರಿಗೊಳಿಸಲಾಗಿತ್ತು.
ಮಂಗಳವಾರ ಬಜ್ಪೆ ನಿಲ್ದಾಣದಲ್ಲಿ ವಿದೇಶಕ್ಕೆ ಪಲಾಯನಗೈಯ್ಯಲು ಯತ್ನಿಸುತ್ತಿದ್ದ ಸಂದರ್ಭ ವಿಮಾನ ನಿಲ್ದಾಣದ ಅಧಿಕಾರಿಗಳು ತಡೆ ಹಿಡಿದು, ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ಹಸ್ತಾತರಿಸಿದ್ದಾರೆ. ಈತ 2008ರಲ್ಲಿ ಮೈಸೂರಿನ ನಕಲಿ ವಿಳಾಸವನ್ನು ನೀಡುವ ಮೂಲಕ ನಕಲಿ ಪಾಸ್ಪೋರ್ಟ್ ತಯಾರಿಸಿಟ್ಟುಕೊಂಡಿದ್ದರು. ಅದರ ಮೂಲಕ ವಿದೇಶಕ್ಕೆ ಹೋಗುವ ಸಂಚು ರೂಪಿಸಿದ್ದು, ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
