ಮಂಗಳೂರು / ಬಜ್ಪೆ,ಜುಲೈ.29 : ಮಂಗಳೂರು – ಬಜ್ಪೆ- ಕಟೀಲು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮುಂದುವರಿದಿದೆ. ವಾಹನಗಳ ಸಂಚಾರಕ್ಕೆ ಹಳೇ ಏರ್ಪೋರ್ಟ್ ರಸ್ತೆಯನ್ನು ಬಳಸಲಾಗುತ್ತಿದ್ದು ರಸ್ತೆ ಹೊಂಡ – ಗುಂಡಿಗಳಿಂದ ತುಂಬಿದ್ದರೂ ಸಂಬಂಧಪಟ್ಟ ಇಲಾಖೆ ಗಮನಹರಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾಗರಿಕ ಹೋರಾಟ ಸಮಿತಿ, ಡಿವೈಎಫ್ಐ ಸಂಘಟನೆ ಜುಲೈ 31ರಂದು ಮುಂಜಾನೆ ರಸ್ತೆತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಿದೆ.
ಬಜ್ಪೆ ಮುಖ್ಯಪೇಟೆಗೆ ಸಮೀಪದ ಸೇತುವೆ ಶಿಥಿಲಗೊಂಡಿದ್ದು, ಲೋಕೋಪಯೋಗಿ ಇಲಾಖೆ ಕೆಲತಿಂಗಳ ಹಿಂದೆ ಸೇತುವೆ ಕಾಮಗಾರಿ ಆರಂಭಿಸಿತ್ತು. ಆದರೆ ಸದ್ರಿ ಕಾಮಗಾರಿಯನ್ನು ವೇಗ ಪಡೆಯುವಂತೆ ಮಾಡಲು ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ. ಇನ್ನು ಹಳೇ ಏರ್ಪೋರ್ಟ್ ರಸ್ತೆ ಹಾಳಾಗಿ ಕೆಲವು ವರ್ಷಗಳೇ ಉರುಳಿವೆ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸುವಂತೆ ಅನೇಕ ಬಾರಿ ಶಾಸಕರು, ಸಂಸದರ ಸಮೇತ ಸಂಬಂಧಪಟ್ಟ ರಾಜಕೀಯ ನಾಯಕರು, ಅಧಿಕಾರಿ ವರ್ಗಕ್ಕೆ ಮನವಿ ಮಾಡಿದ್ದರೂ ಕ್ರಮ ಜರುಗಿಸಲಾಗಿಲ್ಲ.
ಈ ಹಿನ್ನೆಲೆಯಲ್ಲಿ ಮುಂಜಾನೆ 10 ಗಂಟೆಗೆ ಬಜ್ಪೆ ಪೆಟ್ರೋಲ್ ಪಂಪ್ ಬಳಿ ರಸ್ತೆ ತಡೆ ನಡೆಸಿ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ನಾಗರಿಕ ಹೋರಾಟ ಸಮಿತಿ ಸಂಚಾಲಕ ಮೊಹಮ್ಮದ್ ಶಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
